ಕನ್ನಡಪ್ರಭ ವಾರ್ತೆ ಬೆಂಗಳೂರು

ಶಿಕ್ಷಣ, ಉದ್ಯೋಗ ಮತ್ತು ಆಡಳಿತ ಈ ಮೂರರಲ್ಲಿ ಕನ್ನಡ ಇರಬೇಕು ಎಂಬ ಮೂಲಧಾತು ಇಟ್ಟುಕೊಂಡು ಸಮಗ್ರ ಭಾಷಾ ನೀತಿಯನ್ನು ರೂಪಿಸಬೇಕಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಆಯೋಜಿಸಿದ್ದ ‘ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು-ಸವಾಲುಗಳು’ ಎಂಬ ವಿಷಯದ ಕುರಿತ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ಸಮಗ್ರವಾದ ಯೋಜನೆ ಅಥವಾ ನೀತಿಯನ್ನು ರೂಪಿಸುವುದು ಬಹಳ ಕಷ್ಟ. ಕನ್ನಡವಿಲ್ಲದೇ ಆಡಳಿತ ನಡೆಸಬಾರದು. ಕನ್ನಡವಿಲ್ಲದೆ ಶಿಕ್ಷಣ ಇರಬಾರದು. ಕನ್ನಡವಿಲ್ಲದೇ ಉದ್ಯೋಗ ಸಿಗಬಾರದು ಎಂಬುದು ಮೂಲ ಧಾತು. ಈ ಮೂಲ ಧಾತು ಇಟ್ಟುಕೊಂಡು ಇದರ ಆಧಾರದ ಮೇಲೆ ಸಮಗ್ರ ಭಾಷಾ ನೀತಿಯನ್ನು ರೂಪಿಸಬೇಕಿದೆ ಎಂದರು. ಒಂದು ಭಾಷೆಯನ್ನು ಹೊಸ ತಂತ್ರಜ್ಞಾನಗಳು ಬಂದಾಗ ಅದರ ಸಮಾನಕ್ಕೆ ಸಿದ್ಧಗೊಳಿಸುವುದು ಹೇಗೆ ಎಂಬ ಸಮಸ್ಯೆಯನ್ನು ಮೊದಲು ಪರಿಹರಿಸಿಕೊಳ್ಳಬೇಕಾಗಿದೆ. ಯಾವುದೇ ತಂತ್ರಜ್ಞಾನ ಸರ್ವಜ್ಞವಲ್ಲ. ಯಾವುದೇ ತಂತ್ರಜ್ಞಾನದ ಹಿಂದೆ ಮನುಷ್ಯ ಜ್ಞಾನದ ತಂತ್ರ ಇರುತ್ತದೆ. ಮನುಷ್ಯ ಜ್ಞಾನ ತಂತ್ರಜ್ಞಾನವನ್ನು ಸೃಷ್ಟಿ ಮಾಡುತ್ತದೆ. ಆ ಸೃಷ್ಟಿಯಾದ ಜ್ಞಾನವನ್ನು ಖರೀದಿಸಿ ಮನುಷ್ಯನೇ ಬಳಸುವಂತ ಸ್ಥಿತಿ ಇದೆ. ಕನ್ನಡ ಭಾಷೆ, ಕನ್ನಡಿಗರು ಎದುರಿಸುವ ಸಮಸ್ಯೆಗಳನ್ನೂ ಒಳಗೊಂಡಂತೆ ನಾವು ಕಾರ್ಯಯೋಜನೆ ರೂಪಿಸಬೇಕೆಂದು ಹೇಳಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಆಧ್ಯಕ್ಷ ಕೆ.ವಿ.ನಾರಾಯಣ ಮಾತನಾಡಿ, ಹೊಸದಾಗಿ ಹೊಸ ಭಾಷಾ ನೀತಿಯನ್ನು ರೂಪಿಸಬೇಕಾದರೆ ಇದುವರೆಗೂ ಮಾಡಿರುವ ತಪ್ಪುಗಳು ಯಾವ್ಯಾವು, ಎಲ್ಲೆಲ್ಲಿ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದೇವೆ ಎನ್ನುವುದನ್ನು ಗುರುತಿಸಬೇಕು. ಮತ್ತೆ ಅಂತಹ ತಪ್ಪುಗಳನ್ನು ಮಾಡಬಾರದು. ಮೊದಲು ನಮ್ಮದು ಕನ್ನಡ ಭಾಷಾ ನೀತಿಯೋ ಅಥವಾ ಕರ್ನಾಟಕ ಭಾಷಾ ನೀತಿಯೋ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಕರ್ನಾಟಕ ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಇದೆ. ಆದ್ದರಿಂದ ಕೇಂದ್ರ ಸರ್ಕಾರ ತನ್ನದೇ ಆದ ಭಾಷಾ ನೀತಿಯನ್ನು ಹೊಂದಿದ್ದು ಆದರದ್ದೇ ಭಾಷಾ ನೀತಿಗಳನ್ನು ರೂಪಿಸಿಕೊಂಡು ಹೋಗುತ್ತಿದೆ. ಇದರಿಂದ ರಾಜ್ಯ ಭಾಷಾ ನೀತಿಯ ನಡುವೆ ತಿಕ್ಕಾಟ ನಡೆಯುತ್ತಲೇ ಇರುತ್ತವೆ. ತ್ರಿಭಾಷಾ ಸೂತ್ರ ಅದಕ್ಕೆ ಸ್ಪಷ್ಟ ಉದಾಹರಣೆ. ಕೇಂದ್ರ ಸರ್ಕಾರ ಮಾಡುತ್ತಿರುವ ವ್ಯಾಖ್ಯಾನವೇ ಬೇರೆ. ರಾಜ್ಯ ಸರ್ಕಾರ ನಡೆಸಿಕೊಂಡು ಹೋಗುತ್ತಿರುವ ಕ್ರಮವೇ ಬೇರೆ. ನಮ್ಮ ಭಾಷಾ ನೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಭಾಷಾ ನೀತಿಯ ತಿಕ್ಕಾಟವನ್ನು ನಿರ್ವಹಿಸುವಂತ ರೀತಿಯಲ್ಲಿ ಇರಬೇಕು ಎಂದು ಹೇಳಿದರು.

ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ಇಲ್ಲಿಯವರೆಗೆ ದೇಶದಲ್ಲಿ ಸಮಗ್ರ ಭಾಷಾ ನೀತಿ ಎನ್ನುವುದು ಇಲ್ಲ. ಭಾಷಾ ಸೂತ್ರಗಳನ್ನು ಮಾಡಿಕೊಂಡಿದ್ದೇವೆ. ಅದು ಕೂಡ ತಪ್ಪು ತಪ್ಪಾಗಿಯೇ ಇದೆ. ಶಿಕ್ಷಣದಲ್ಲಿ ಇಂದು ಚರ್ಚೆಯಾಗುತ್ತಿರುವ ಭಾಷಾ ಸೂತ್ರ ಅರ್ಥ ಮಾಡಿಕೊಂಡು ಜಾರಿಗೆ ತಂದ ಸೂತ್ರವಲ್ಲ. ಇದಕ್ಕೂ ಶಿಕ್ಷಣಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ, ರಂಜಾನ್‌ ದರ್ಗಾ, ಕೆ.ಶರೀಫಾ, ಆರ್‌.ಚಲಪತಿ, ಪ್ರೊ.ಮೇಟಿ ಮಲ್ಲಿಕಾರ್ಜುನ್‌, ಡಾ.ಸರ್ಜಾ ಶಂಕರ್ ಅರಳೀಮಠ, ಪತ್ರಕರ್ತ ಸುಭಾಷ ಹೂಗಾರ್‌ ಹಾಜರಿದ್ದರು.

ಫೋಟೋ ಕ್ಯಾಪ್ಷನ್‌

ನಗರದ ಖಾಸಗಿ ಹೋಟೆಲ್‌ನಲ್ಲಿ ಕರವೇ ಆಯೋಜಿಸಿದ್ದ ‘ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು-ಸವಾಲುಗಳು’ ಎಂಬ ವಿಷಯದ ಕುರಿತ ದುಂಡುಮೇಜಿನ ಸಭೆಯಲ್ಲಿ ಟಿ.ಎ.ನಾರಾಯಣಗೌಡ, ಡಾ. ಹಂಪ ನಾಗರಾಜಯ್ಯ, ಡಾ.ಪುರುಷೋತ್ತಮ ಬಿಳಿಮಲೆ, ಎಸ್‌.ಜಿ.ಸಿದ್ದರಾಮಯ್ಯ ಭಾಗಿಯಾಗಿದ್ದರು.