ಸಾರಾಂಶ
ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಮೊಟಕುಗೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನಮಾನ ಮಂಗಳವಾರ ಮರುಸ್ಥಾಪನೆ ಆಗಲಿದೆಯೇ? ಇಂಥದ್ದೊಂದು ವದಂತಿ ದೆಹಲಿ ಮತ್ತು ಜಮ್ಮು ಮತ್ತು ರಾಜಕೀಯ ವಲಯದಲ್ಲಿ ಬಹುದೊಡ್ಡದಾಗಿ ಕೇಳಿಬಂದಿದೆ.
ನವದೆಹಲಿ: ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಮೊಟಕುಗೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನಮಾನ ಮಂಗಳವಾರ ಮರುಸ್ಥಾಪನೆ ಆಗಲಿದೆಯೇ? ಇಂಥದ್ದೊಂದು ವದಂತಿ ದೆಹಲಿ ಮತ್ತು ಜಮ್ಮು ಮತ್ತು ರಾಜಕೀಯ ವಲಯದಲ್ಲಿ ಬಹುದೊಡ್ಡದಾಗಿ ಕೇಳಿಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಬಳಿಕ ಏನೋ ದೊಡ್ಡ ಬೆಳವಣಿಗೆಯ ಸಾಧ್ಯತೆ ಇದೆ ಎನ್ನಲಾಗಿತ್ತು. ಅದರ ಬೆನ್ನಲ್ಲೇ ಸೋಮವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಗುಪ್ತಚರ ಇಲಾಖೆ ಮುಖ್ಯಸ್ಥರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ವಿದೇಶಾಂಗ ಸಚಿವ ಜೈಶಂಕರ್, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಅದರ ಬೆನ್ನಲ್ಲೇ ಈ ಬೆಳವಣಿಗೆ ಕಾಶ್ಮೀರದ ಕುರಿತಾಗಿದ್ದು ಎಂಬ ವದಂತಿ ಹಬ್ಬಿದೆ.
ಆ.5, 2019ರಂದು ಕೇಂದ್ರ ಸರ್ಕಾರವು ಲಡಾಖ್ ಮತ್ತು ಜಮ್ಮು ಕಾಶ್ಮೀರವನ್ನು 2 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಇದಕ್ಕೆ ಮಂಗಳವಾರ 6 ವರ್ಷ. ಹೀಗಾಗಿ ಆ.6ರಂದೇ ಕೇಂದ್ರ ಸರ್ಕಾರ ಈ ಕುರಿತು ಘೋಷಣೆ ಮಾಡಬಹುದು ಎನ್ನಲಾಗಿದೆ.