ಸಂಸತ್ತಿನೊಳಗೆ ಟಿಎಂಸಿ ಸಂಸದರು ಇ-ಸಿಗರೇಟು ಸೇದಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ನೀಡಿದ್ದ ದೂರು ಟಿಎಂಸಿ ಸಂಸದ ಕೀರ್ತಿ ಆಜಾದ್ ಮೇಲೆ ಎಂದು ಗೊತ್ತಾಗಿದೆ. ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಅವರು, ಆಜಾದ್‌ ಇ-ಸಿಗರೇಟು ಸೇದುತ್ತಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆ ಮಾಡಿದ್ದು, ‘ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಈ ಬಗ್ಗೆ ಸ್ಪಷ್ಟನೆ ನೀಡಲಿ’ ಎಂದು ಆಗ್ರಹಿಸಿದ್ದಾರೆ.

ನವದೆಹಲಿ: ಸಂಸತ್ತಿನೊಳಗೆ ಟಿಎಂಸಿ ಸಂಸದರು ಇ-ಸಿಗರೇಟು ಸೇದಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ನೀಡಿದ್ದ ದೂರು ಟಿಎಂಸಿ ಸಂಸದ ಕೀರ್ತಿ ಆಜಾದ್ ಮೇಲೆ ಎಂದು ಗೊತ್ತಾಗಿದೆ. ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಅವರು, ಆಜಾದ್‌ ಇ-ಸಿಗರೇಟು ಸೇದುತ್ತಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆ ಮಾಡಿದ್ದು, ‘ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಈ ಬಗ್ಗೆ ಸ್ಪಷ್ಟನೆ ನೀಡಲಿ’ ಎಂದು ಆಗ್ರಹಿಸಿದ್ದಾರೆ.

‘ಅನುರಾಗ್ ಠಾಕೂರ್ ಆರೋಪಿಸಿದ ಟಿಎಂಸಿ ಸಂಸದ ಬೇರೆ ಯಾರೂ ಅಲ್ಲ. ಅವರು ಕೀರ್ತಿ ಆಜಾದ್. ಸದನದಲ್ಲಿದ್ದಾಗ ಇ-ಸಿಗರೇಟ್ ಅನ್ನು ತಮ್ಮ ಅಂಗೈಯಲ್ಲಿ ಮರೆಮಾಡುತ್ತಿದ್ದಾರೆ. ಧೂಮಪಾನ ಕಾನೂನುಬಾಹಿರವಲ್ಲದಿರಬಹುದು, ಆದರೆ ಸಂಸತ್ತಿನಲ್ಲಿ ಅದನ್ನು ಬಳಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಕಾನೂನಿಗೆ ಬೆಲೆಯೇ ಇಲ್ಲವೆ? ಮಮತಾ ಬ್ಯಾನರ್ಜಿ ತಮ್ಮ ಸಂಸದರ ದುಷ್ಕೃತ್ಯದ ಬಗ್ಗೆ ಸ್ಪಷ್ಟಪಡಿಸಬೇಕು’ ಎಂದು ಮಾಳವೀಯ ಟ್ವೀಟಿಸಿದ್ದಾರೆ.

==

ಶಬರಿಮಲೆ ಚಿನ್ನಕ್ಕೆ ಕನ್ನ: ಟಿಡಿಬಿ ಮಾಜಿ ಆಡಳಿತಾಧಿಕಾರಿ ಬಂಧನ

ಬಂಧಿತರ ಸಂಖ್ಯೆ 7ಕ್ಕೆ ಏರಿಕೆ

ತಿರುವನಂತಪುರಂ: ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್‌ರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಚಿನ್ನ ನಾಪತ್ತೆ ಪ್ರಕರಣದಲ್ಲಿ ತನ್ನ ಮೇಲಿನ ಆರೋಪ ಸುಳ್ಳು ಎಂದು ಶ್ರೀಕುಮಾರ್‌ ಕೇರಳ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು ‘ಶ್ರೀಕುಮಾರ್‌ ಹಾಗೂ ಇನ್ನೊಬ್ಬ ಆರೋಪಿ ಜಯಶ್ರೀಗೆ ಗರ್ಭಗುಡಿಯ ಬಾಗಿಲು ಮತ್ತು ವಿಗ್ರಹಗಳ ಕವಚಗಳು ಚಿನ್ನಲೇಪಿತ ಎಂಬುದು ತಿಳಿದಿತ್ತು. ಆದರೂ ಅವು ತಾಮ್ರದವು ಎಂದ ದಾಖಲೆಪತ್ರಕ್ಕೆ ಇಬ್ಬರೂ ಸಹಿ ಹಾಕಿದ್ದಾರೆ’ ಎಂದು ಕಿಡಿಕಾರಿದ ಕೋರ್ಟ್‌ 2 ವಾರಗಳ ಹಿಂದಷ್ಟೇ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅದರ ಬೆನ್ನಲ್ಲೇ ಬಂಧನ ನಡೆದಿದೆ.

==

ಯಹೂದಿ ನರಮೇಧ ನಡೆಸಿದ ಉಗ್ರನ ಮೇಲೆ 59 ಆರೋಪ

ಕೊಲೆ, ಉಗ್ರಕೃತ್ಯ, ಹಾನಿ ಸೇರಿ ಹಲವು ಪ್ರಕರಣ

ಸಿಡ್ನಿ: ಆಸ್ಟ್ರೇಲಿಯಾದ ಕಡಲತೀರದಲ್ಲಿ 15 ಮಂದಿ ಯಹೂದಿಗಳ ಮಾರಣಹೋಮ ನಡೆಸಿದ ಉಗ್ರ ನವೀದ್‌ ಅಕ್ರಂ ಮೇಲೆ 15 ಕೊಲೆ ಆರೋಪ ಸೇರಿದಂತೆ ಒಟ್ಟು 59 ಅಪರಾಧಗಳ ಆರೋಪ ಹೊರಿಸಲಾಗಿದೆ.ಇತ್ತೀಚೆಗೆ ಹನಕ್ಕಾ ಹಬ್ಬದ ಆಚರಣೆಗೆ ಸೇರಿದ್ದ ಯಹೂದಿಗಳ ಮೇಲೆ ಸಾಜಿದ್‌ ಅಕ್ರಂ ಹಾಗೂ ನವೀದ್‌ ಅಕ್ರಂ ಎಂಬ ಅಪ್ಪ-ಮಗ ಗುಂಡಿನ ದಾಳಿ ನಡೆಸಿದ್ದರು. ಈ ಪೈಕಿ ಸಾಜಿದ್‌ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಬದುಕುಳಿದಿರುವ ನವೀದ್‌ ಮೇಲೆ ಕೊಲೆ, ಭಯೋತ್ಪಾದನಾ ಕೃತ್ಯ, ಕೊಲೆ ಮಾಡುವ ಉದ್ದೇಶದಿಂದ ನಡೆಸಿದ ಹಾನಿ, ಸ್ಫೋಟಕ ವಸ್ತುಗಳ ಸಂಗ್ರಹ ಸೇರಿ 59 ಆರೋಪಗಳನ್ನು ಹೊರಿಸಲಾಗಿದೆ.

ನರಮೇಧದ ದಿನ ಪೊಲೀಸರು ನಡೆಸಿದ ಪ್ರತಿದಾಳಿಯಿಂದ ತೀವ್ರ ಗಾಯಗೊಂಡಿದ್ದ ನವೀದ್‌ ಕೋಮಾಕ್ಕೆ ಜಾರಿದ್ದ. ಈಗ ಕೋಮಾದಿಂದ ಹೊರಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

==

ದೇಶ ಒಡೆಯುವ ಮಾತಾಡಿದ ಬಾಂಗ್ಲಾಗೆ ಭಾರತ ತಪರಾಕಿ

ಈಶಾನ್ಯ ರಾಜ್ಯಗಳ ತುಂಡರಿಸುತ್ತೇವೆ ಎಂದಿದ್ದ ಬಾಂಗ್ಲಾ

ಭಾರತ ದೂತಾವಾಸಕ್ಕೆ ಬೆದರಿಕೆ ಕೂಡ ಹಾಕಿದ್ದರು

ಹೀಗಾಗಿ ಬಾಂಗ್ಲಾ ರಾಯಭಾರಿಗೆ ಭಾರತ ತರಾಟೆ

ನವದೆಹಲಿ: ನೆರೆಯ ಬಾಂಗ್ಲಾದೇಶದ ಆಡಳಿತ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯುನುಸ್‌ ಕೈಗೆ ಬಂದಬಳಿಕ ಅಲ್ಲಿ ಭಾರತ ವಿರೋಧಿ ಹೇಳಿಕೆ, ಕೃತ್ಯಗಳು ಹೆಚ್ಚಾಗಿವೆ. ಭಾರತದ ಈಶಾನ್ಯ ರಾಜ್ಯಗಳನ್ನು ಬೇರ್ಪಡಿಸುವ ಹೇಳಿಕೆ ಹಾಗೂ ಢಾಕಾದಲ್ಲಿರುವ ಭಾರತೀಯ ದೂತಾವಾಸಕ್ಕೆ ಬೆದರಿಕೆ ಬಂದ ಬೆನ್ನಲ್ಲೇ ಭಾರತವು ಬಾಂಗ್ಲಾ ರಾಯಭಾರಿಗೆ ಸಮನ್ಸ್‌ ಜಾರಿ ಮಾಡಿ ಎಚ್ಚರಿಕೆ ನೀಡಿದೆ.ಮಂಗಳವಾರ ಬಾಂಗ್ಲಾದ ಎನ್‌ಸಿಪಿ ನಾಯಕರೊಬ್ಬರು, ‘ಭಾರತ ವಿರೋಧಿಗಳಿಗೆ ಆಶ್ರಯ ನೀಡಿ, ಸಪ್ತ ಸಹೋದರಿ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದರು. ಅಲ್ಲದೆ, ಬಾಂಗ್ಲಾದಲ್ಲಿನ ಭಾರತ ದೂತಾವಾಸದ ಮುಂದೆ ಸಮಾಜಘಾತಕ ಶಕ್ತಿಗಳು ಪ್ರತಿಭಟನೆ ನಡೆಸುವ ಬೆದರಿ ಹಾಕಿದ್ದವು.

ಈ ಹಿನ್ನೆಲೆಯಲ್ಲಿ, ಭಾರತದಲ್ಲಿರುವ ಬಾಂಗ್ಲಾದ ದೂತ ಹಮೀದುಲ್ಲಾ ಅವರಿಗೆ ಸಮನ್ಸ್‌ ಜಾರಿ ಮಾಡಿ, ಅವರ ದೇಶದಲ್ಲಿ ಕುಸಿಯುತ್ತಿರುವ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದ್ದು, ಭದ್ರತೆ ನೀಡುವಂತೆ ತಾಕೀತು ಮಾಡಲಾಗಿದೆ. ಜತೆಗೆ, ಬಾಂಗ್ಲಾದಲ್ಲಿ ಉಂಟಾಗುತ್ತಿರುವ ಕೆಲ ಸಮಸ್ಯೆಗಳಿಗೆ ಭಾರತವನ್ನು ಹೊಣೆ ಮಾಡುವುದಕ್ಕೆ ಖಂಡನೆ ವ್ಯಕ್ತಪಡಿಸಿದೆ.ಸಮನ್ಸ್‌ನಲ್ಲಿ, ‘ಬಾಂಗ್ಲನ್ನರೊಂದಿಗಿನ ಭಾರತದ ನಿಕಟ ಮತ್ತು ಸ್ನೇಹಪರ ಸಂಬಂಧವು ವಿಮೋಚನಾ ಹೋರಾಟದಲ್ಲಿ ಶುರುವಾಗಿ, ವಿವಿಧ ಅಭಿವೃದ್ಧಿ ಉಪಕ್ರಮಗಳಿಂದ ಬಲಗೊಂಡಿದೆ. ನಾವು ಬಾಂಗ್ಲಾದಲ್ಲಿ ಶಾಂತಿ, ಸ್ಥಿರತೆಯ ಸ್ಥಾಪನೆ ಮತ್ತು ನ್ಯಾಯೋಚಿತ ಚುನಾವಣೆಯ ಪರವಿದ್ದೇವೆ. ಬಾಂಗ್ಲಾದಲ್ಲಿರುವ ರಾಯಭಾರ ಕಚೇರಿ ಮತ್ತು ಅಧಿಕಾರಿಗಳ ಕ್ಷೇಮವನ್ನು ಮಧ್ಯಂತರ ಸರ್ಕಾರ ಖಚಿತಪಡಿಸುತ್ತದೆ ಎಂದ ನಿರೀಕ್ಷೆಯಿದೆ’ ಎಂದು ಹೇಳಲಾಗಿದೆ.