ಸಾರಾಂಶ
ನವದೆಹಲಿ: ದೇಶದಲ್ಲಿ ವಾರದ ಅಧಿಕ ಕೆಲಸದ ಅವಧಿಯನ್ನು 70, 80 ಅಥವಾ 90 ಗಂಟೆಗೆ ಏರಿಸಬೇಕು ಎಂಬ ಸಲಹೆಗಳ ಬೆನ್ನಲ್ಲೇ ಈ ರೀತಿಯ ದುಡಿತವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಹಾಗೂ ಆರೋಗ್ಯ ಸಚಿವಾಲಯದ ಸಲಹೆಗಾರ್ತಿ ಸೌಮ್ಯಾ ಸ್ವಾಮಿನಾಥನ್ ವಿರೋಧಿಸಿದ್ದಾರೆ.
ಭಾನುವಾರ ಪಿಟಿಐಗೆ ಸಂದರ್ಶನ ನೀಡಿದ ಅವರು, ‘ಕೆಲಸದ ಸಮಯಕ್ಕಿಂತ ಗುಣಮುಟ್ಟ ಮುಖ್ಯ. 12 ಗಂಟೆ ಬೇಕಾದರೂ ಕುಳಿತುಕೊಳ್ಳಬಹುದು. ಆದರೆ 8 ತಾಸಿನ ಬಳಿಕವೂ ಕೆಲಸ ಮುಂದುವರಿದರೆ ಅದು ಗುಣಮಟ್ಟದ ಕೆಲಸ ಆಗದು. ಮನುಷ್ಯನಿಗೆ ವಿಶ್ರಾಂತಿ ಮುಖ್ಯ. ಉತ್ತಮವಾಗಿ ಕೆಲಸ ಮಾಡಲು ಮನಸ್ಸಿಗೂ ವಿರಾಮ ಅಗತ್ಯ’ ಎಂದರು.
‘ಕೊರೋನಾ ಕಾಲದಲ್ಲಿ ನಾವೆಲ್ಲಾ ಸಾಮಾನ್ಯಕ್ಕಿಂತ ಅಧಿಕ ಕೆಲಸ ಮಾಡಿದ್ದೆವು. ಆದರೆ ಇದನ್ನು ಹಾಗೇ ಮುಂದುವರೆಸಲು ಸಾಧ್ಯವಿಲ್ಲ’ ಎಂದೂ ಹೇಳುದರು.
ಈ ಮೊದಲು ಎಲ್&ಟಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್, ನೀತಿ ಆಯೋಗದ ಮಾಜಿ ಮುಖ್ಯಸ್ಥ ಅಮಿತಾಭ್ ಕಾಂತ್ ಹಾಗೂ ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ, ವಾರಕ್ಕೆ 70, 80 ಹಾಗೂ 90 ಗಂಟೆ ದುಡಿತಕ್ಕೆ ಕರೆ ನೀಡಿದ್ದರು.
ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಭಾಗ-2
ನವದೆಹಲಿ: ಸೋಮವಾರದಿಂದ ಸಂಸತ್‌ನ ಬಜೆಟ್ ಅಧಿವೇಶನ ಮತ್ತೆ ಆರಂಭವಾಗಲಿದ್ದು ಮಹತ್ವದ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿಕೊಳ್ಳಲು ಕೇಂದ್ರ ಸರ್ಕಾರ ಯತ್ನಿಸಲಿದೆ. ಆದರೆ ಮತ್ತೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ‘ತೆರಿಗೆ ಬಾಂಬ್’ ಅನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿ, ಕ್ಷೇತ್ರ ಮರುವಿಂಗಡಣೆ, ಮತ್ತೆ ಆರಂಭವಾಗಿರುವ ಮಣಿಪುರ ಹಿಂಸಾಚಾರ, ಮತದಾರರ ಪಟ್ಟಿಯಲ್ಲಿನ ಅಕ್ರಮ ಆರೋಪ- ಇತ್ಯಾದಿ ವಿಷಯಗಳ ಕುರಿತು ಪ್ರತಿಪಕ್ಷಗಳು ಧ್ವನಿ ಎತ್ತುವ ನಿರೀಕ್ಷೆ ಇದೆ.ಆದರೆ ಕೇಂದ್ರ ಸರ್ಕಾರ ಮಾತ್ರ ಬಜೆಟ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು, ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿರುವ ಕಾರಣ ಮಣಿಪುರ ಬಜೆಟ್ ಅಂಗೀಕಾರ ಮತ್ತು ವಿವಾದಾತ್ಮಕ ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಪಡೆಯಲು ಹೆಚ್ಚಿನ ಗಮನ ಕೇಂದ್ರೀಕರಿಸುವ ನಿರೀಕ್ಷೆ ಇದೆ.
ಕಲಾಪ ಕಾವೇರುವ ಸಂಭವ:ಪ್ರಮುಖವಾಗಿ ತಮಿಳುನಾಡಿನ ಡಿಎಂಕೆಯು ಲೋಕಸಭಾ ಕ್ಷೇತ್ರದ ಮರುವಿಂಗಡಣೆ ವಿಚಾರಣೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಇದಕ್ಕೆ ಕರ್ನಾಟಕದ ಕಾಂಗ್ರೆಸ್ ಸಂಸದರು ಸೇರಿ ದಕ್ಷಿಣದ ಸಂಸದರು ದನಿಗೂಡಿಸುವ ಸಾಧ್ಯತೆ ಇದ್ದು, ಕಲಾಪ ಕಾವೇರುವ ಸಂಭವವಿದೆ.
ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಘೋಷಣೆ ಮಾಡುವ ನಿರ್ಣಯ ಮಂಡಿಸಲಿದ್ದು, ಇದೇ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರವೇ ಮಣಿಪುರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜೀನಾಮೆ ಬಳಿಕ ಮಣಿಪುರವು ರಾಷ್ಟ್ರಪತಿ ಆಡಳಿತಕ್ಕೊಳಪಟ್ಟಿದೆ.ಈ ನಡುವೆ, ಮತದಾರರ ಗುರುತಿನ ಚೀಟಿಯಲ್ಲಿ ಅಕ್ರಮ ನಡೆದಿದೆ ಎಂದು ಈಗಾಗಲೇ ತೃಣಮೂಲ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಈ ಸಂಬಂಧ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಲಿದ್ದಾರೆ. ಟಿಎಂಸಿ ಜತೆಗೆ ಕಾಂಗ್ರೆಸ್, ಶಿವಸೇನೆ(ಉದ್ಧವ್ ಬಣ) ಮತ್ತಿತರ ಪ್ರತಿಪಕ್ಷಗಳೂ ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿವೆ. ಇದರ ಜತೆಗೆ ವಕ್ಫ್ ತಿದ್ದುಪಡಿ ವಿಧೇಯಕಕ್ಕೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ನಿರೀಕ್ಷೆ ಇದೆ.
ಮ.ಪ್ರ.ದಲ್ಲಿ ದೇಶದ 58ನೇ ಹುಲಿ ರಕ್ಷಿತಾರಣ್ಯ: ಘೋಷಣೆ
ನವದೆಹಲಿ: ಮಧ್ಯಪ್ರದೇಶದಲ್ಲಿರುವ ಮಾಧವ ಅರಣ್ಯ ಪ್ರದೇಶವನ್ನು ಹುಲಿ ರಕ್ಷಿತಾರಣ್ಯ ಎಂದು ಘೋಷಿಸಲಾಗಿದೆ. ಈ ಮೂಲಕ, ದೇಶದಲ್ಲೇ ಅತಿ ಹೆಚ್ಚು (526) ಹುಲಿಗಳಿರುವ ರಾಜ್ಯದ ಹುಲಿ ರಕ್ಷಿತಾರಣ್ಯಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.ಪ್ರಸ್ತುತ ಹುಲಿ ಸಂಖ್ಯೆಯಲ್ಲಿ ನಂ.2 ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಬಂಡೀಪುರ, ಭದ್ರಾ, ಕಾಳಿ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟದಲ್ಲಿ (ಒಟ್ಟು 5) ಹುಲಿ ರಕ್ಷಿತಾರಣ್ಯಗಳಿವೆ ಹಾಗೂ 524 ಹುಲಿಗಳಿವೆ. 3ನೇ ಸ್ಥಾನದಲ್ಲಿರುವ ಉತ್ತರಾಖಂಡದಲ್ಲಿ 442 ವ್ಯಾಘ್ರಗಳಿವೆ.
ಹೊಸ ಹುಲಿ ರಕ್ಷಿತಾರಣ್ಯ ಸೇರ್ಪಡೆಯ ವಿಷಯವನ್ನು ಪರಿಸರ ಸಚಿವ ಭುಪೇಂದ್ರ ಯಾದವ್ ಎಕ್ಸ್‌ನಲ್ಲಿ ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ‘ವನ್ಯಜೀವಿ ಪ್ರಿಯರ ಪಾಲಿಗೆ ಇದು ಸಂತಸದ ಸುದ್ದಿಯಾಗಿದೆ. ಪ್ರಾಣಿಗಳನ್ನು ರಕ್ಷಿಸುವ ಮತ್ತು ಸುಸ್ಥಿರ ಗ್ರಹಕ್ಕೆ ಕೊಡುಗೆ ನೀಡುವ ಕೆಲಸದಲ್ಲಿ ನಾವು ಸದಾ ಮುಂಚೂಣಿಯಲ್ಲಿರುತ್ತೇವೆ’ ಎಂದು ಹರ್ಷಿಸಿದ್ದಾರೆ.
ದೇವಸ್ಥಾನವಾಗಿ ಬದಲಾದ ರಾಜಸ್ಥಾನ ಚರ್ಚ್!
ಜೈಪುರ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಸೋಡ್ಲಾ ಗುಡ ಎಂಬ ಹಳ್ಳಿಯಲ್ಲಿನ ಚರ್ಚ್ ಅನ್ನು ದೇವಾಲಯವಾಗಿ ಪರಿವರ್ತಿಸಲಾಗಿದೆ. ಪಾದ್ರಿಯೇ ದೇಗುಲದ ಅರ್ಚಕನಾಗಿ ಬದಲಾಗಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ಹಿಂದೆ ಮತಾಂತರ ನಡೆದು ಹಲವಾರು ಮಂದಿ ಹಿಂದುಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ‘ಆದರೆ ಈಗ ಹಲವು ಕ್ರೈಸ್ತ ಕುಟುಂಬಗಳು ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮರಳಿವೆ. ಹಾಗಾಗಿ ಇಲ್ಲಿ ಹಿಂದೂ ದೇವತೆ ಭೈರವನ ಪ್ರತಿಷ್ಠಾಪನೆ ಮಾಡಲಾಗಿದೆ’ ಎಂದು ಚರ್ಚ್‌ನ ಪಾದ್ರಿ ತಿಳಿಸಿದ್ದಾರೆ.
ಇನ್ನು ಎಸ್‌ಪಿ ಹರ್ಷವರ್ಧನ್ ಮಾತನಾಡಿ, ಹಲವು ವರ್ಷಗಳ ಹಿಂದೆ ಈ ಚರ್ಚ್‌ನ ಪಾದ್ರಿ ಗೌತಮ್ ಗರಾಸಿಯಾ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಬಳಿಕ ತಮ್ಮ ಸ್ವಂತ ಜಾಗದಲ್ಲಿ ಚರ್ಚ್ ನಿರ್ಮಿಸಿದ್ದರು. ಆದರೆ ಈಗ ಮಾತೃಧರ್ಮಕ್ಕೆ ಮರಳಿದ್ದಾರೆ. ಈಗ ಚರ್ಚ್ ದೇವಸ್ಥಾನವಾಗಿದ್ದು, ಅವರೇ ಅರ್ಚಕರಾಗಿ ಮುಂದುವರಿಯುತ್ತಾರೆ’ ಎಂದಿದ್ದಾರೆ.