ಸಾರಾಂಶ
ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನ ಗುಣಮಟ್ಟ ವೃದ್ಧಿಸಬೇಕಿದ್ದರೆ ಕಾರ್ಪೋರೇಟ್ ಸಂಸ್ಥೆಗಳು ಕ್ರೀಡಾಪಟುಗಳಿಗೆ ನೆರವಾಗಬೇಕು ಎಂಬ ಕೇಂದ್ರ ಕ್ರೀಡಾ ಸಚಿವಾಲಯದ ಮನವಿಗೆ ಸ್ಪಂದಿಸಿರುವ ಬಿಸಿಸಿಐ, 2-3 ಒಲಿಂಪಿಕ್ ಕ್ರೀಡೆಗಳನ್ನು ದತ್ತು ಪಡೆಯಲು ನಿರ್ಧರಿಸಿದೆ.
ಗುರುವಾರ ಇಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಅವರ ಜೊತೆ ನಡೆದ ಸಭೆಯಲ್ಲಿ ಬಿಸಿಸಿಐ ತಾನು ಆಸಕ್ತಿ ಹೊಂದಿರುವುದಾಗಿ ತಿಳಿಸಿದೆ. ಸಭೆಯಲ್ಲಿ ಒಟ್ಟು 58 ಕಾರ್ಪೋರೇಟ್ ಸಂಸ್ಥೆಗಳು ಪಾಲ್ಗೊಂಡಿದ್ದವು ಎಂದು ತಿಳಿದುಬಂದಿದೆ.
ಬಿಸಿಸಿಐ ಪರವಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕ್ರಿಕೆಟ್ ಮಂಡಳಿಯು ಎರಡು ಅಥವಾ ಮೂರು ಒಲಿಂಪಿಕ್ ಕ್ರೀಡೆಗಳನ್ನು ದತ್ತು ಪಡೆದು, ಆ ಕ್ರೀಡೆಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ತರಬೇತಿ, ಫಿಟ್ನೆಸ್, ಅಂ.ರಾ. ಕೂಟಗಳಲ್ಲಿ ಸ್ಪರ್ಧೆಗೆ ಬೇಕಿರುವ ಎಲ್ಲಾ ವ್ಯವಸ್ಥೆ ಮಾಡಲಿದೆ. ಯಾವ ಕ್ರೀಡೆಗಳನ್ನು ನಾವು ದತ್ತು ಪಡೆಯಬೇಕು ಎನ್ನುವ ನಿರ್ಧಾರವನ್ನು ಕ್ರೀಡಾ ಸಚಿವಾಲಯಕ್ಕೆ ಬಿಡಲಿದ್ದೇವೆ ಎಂದು ತಿಳಿಸಿದರು ಎಂದು ಗೊತ್ತಾಗಿದೆ.
ಕ್ರೀಡಾ ಸಚಿವಾಲಯವು ಪ್ರತಿ ಒಲಿಂಪಿಕ್ ಕ್ರೀಡೆಗೆ ಪ್ರತ್ಯೇಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, 100ರಿಂದ 200 ಪ್ರತಿಭಾನ್ವಿತ, ಪದಕ ಗೆಲ್ಲುವ ಸಾಮರ್ಥ್ಯವಿರುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅವರನ್ನು ಸಿದ್ಧಗೊಳಿಸುವ ಯೋಜನೆ ಹೊಂದಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಸದ್ಯ 23 ರಾಷ್ಟ್ರೀಯ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಕೇಂದ್ರಗಳನ್ನು ನಡೆಸುತ್ತಿದ್ದು, ಇವುಗಳಲ್ಲಿ ಬಾಕ್ಸಿಂಗ್ (ರೋಹ್ಟಕ್), ಈಜು (ದೆಹಲಿ) ಹಾಗೂ ಶೂಟಿಂಗ್ (ದೆಹಲಿ) ಕ್ರೀಡೆಗಳಿಗೆ ಮಾತ್ರ ಪ್ರತ್ಯೇಕ ತರಬೇತಿ ಕೇಂದ್ರಗಳಿವೆ.