ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ದೇಶವಾಸಿಗಳು, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಯುವಕರು ತೋರಿಸುತ್ತಿರುವ ಕಾಳಜಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ನವದೆಹಲಿ : ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ದೇಶವಾಸಿಗಳು, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಯುವಕರು ತೋರಿಸುತ್ತಿರುವ ಕಾಳಜಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರ್ಷದ ಮೊದಲ ‘ಮನ್‌ ಕೀ ಬಾತ್‌’ನಲ್ಲಿ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ನಮ್ಮ ಯುವಜನತೆ ತಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ಬಹಳ ಜಾಗೃತರಾಗಿರುವುದು ನೋಡಿ ನನಗೆ ಹೆಮ್ಮೆ ಎನಿಸುತ್ತದೆ. ಬೆಂಗಳೂರಿನಲ್ಲಿಯೂ ಇದೇ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಸೋಫಾ ತ್ಯಾಜ್ಯವು ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದ್ದು, ಕೆಲವು ವೃತ್ತಿಪರರು ಒಗ್ಗೂಡಿ ಈ ಸಮಸ್ಯೆಯನ್ನು ತಮ್ಮದೇ ಆದ ರೀತಿಯಲ್ಲಿ ಪರಿಹರಿಸುತ್ತಿದ್ದಾರೆ’ ಎಂದರು.

‘ಅದೇ ರೀತಿ ಅರುಣಾಚಲ ಪ್ರದೇಶದ ಇಟಾನಗರದ ಯುವಜನರ ಗುಂಪೊಂದು, ರಾಜ್ಯದ ವಿವಿಧ ನಗರಗಳಲ್ಲಿ ಸುಮಾರು 11 ಲಕ್ಷ ಕಿಲೋಗಿಂತಲೂ ಅಧಿಕ ತ್ಯಾಜ್ಯ ತೊಲಗಿಸಿ ಸ್ವಚ್ಛಗೊಳಿಸಿದೆ. ಅಸ್ಸಾಂನ ನಾಗಾಂವ್‌, ತಮಿಳುನಾಡು ರಾಜಧಾನಿ ಚೆನ್ನೈನಲ್ಲೂ ಇಂಥ ಗುಂಪುಗಳಿವೆ. ಸ್ವಚ್ಛತೆಗಾಗಿ ನಾವು ವೈಯಕ್ತಿಕವಾಗಿ ಅಥವಾ ತಂಡದ ರೂಪದಲ್ಲಿ ನಮ್ಮ ಪ್ರಯತ್ನವನ್ನು ಹೆಚ್ಚಿಸಬೇಕು, ಆಗಲೇ ನಮ್ಮ ನಗರಗಳು ಮತ್ತಷ್ಟು ಉತ್ತಮವಾಗುತ್ತವೆ’ ಎಂದು ಕರೆ ನೀಡಿದರು.

ಚಲ್ತಾ ಹೈ ಧೋರಣೆ ಬಿಡಿ: ಜನತೆಗೆ ಮೋದಿ ಕರೆ 

 ನವದೆಹಲಿ : ‘ಇದಾಗುತ್ತದೆ, ಹೇಗೋ ನಡೆಯುತ್ತದೆ ಬಿಡು (ಚಲ್ತಾ ಹೈ) ಎಂಬ ಯುಗ ಮುಗಿದಿದೆ. ಬನ್ನಿ, ಈ ವರ್ಷ ನಮ್ಮೆಲ್ಲ ಶಕ್ತಿಯಿಂದ ಗುಣಮಟ್ಟಕ್ಕೆ ಆದ್ಯತೆ ನೀಡೋಣ. ನಮ್ಮ ಏಕೈಕ ಮಂತ್ರ ಗುಣಮಟ್ಟ, ಗುಣಮಟ್ಟ ಮತ್ತು ಗುಣಮಟ್ಟ ಮಾತ್ರ ಆಗಿರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ.ತಮ್ಮ 130ನೇ ಮನ್ ಕಿ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ಆಗುತ್ತದೆ, ಇದು ಕೆಲಸ ಮಾಡುತ್ತದೆ, ಹೇಗೋ ನಡೆಯುತ್ತದೆ ಎನ್ನುವ ಯುಗ ಮುಗಿದುಹೋಗಿದೆ. 

 ನಮ್ಮ ಎಲ್ಲ ಶಕ್ತಿಯಿಂದ ಗುಣಮಟ್ಟಕ್ಕೆ ಆದ್ಯತೆ ನೀಡೋಣ. ನಮ್ಮ ಏಕೈಕ ಮಂತ್ರ ಗುಣಮಟ್ಟ, ಗುಣಮಟ್ಟ ಮತ್ತು ಗುಣಮಟ್ಟ ಮಾತ್ರ ಆಗಿರಲಿ. ನಾವು ತಯಾರಿಸುವ ಯಾವುದೇ ವಸ್ತುವಿನ ಗುಣಮಟ್ಟವನ್ನು ಸುಧಾರಿಸಲು ಸಂಕಲ್ಪ ಮಾಡೋಣ. ಅದು ಜವಳಿ, ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಅಥವಾ ಪ್ಯಾಕೇಜಿಂಗ್ ಯಾವುದೇ ಆಗಿರಲಿ.

ಭಾರತೀಯ ಉತ್ಪನ್ನವು ಉನ್ನತ ಗುಣಮಟ್ಟಕ್ಕೆ ಸಮಾನಾರ್ಥಕವಾಗಬೇಕು’ ಎಂದರು.ನವೋದ್ಯಮಿಗಳಿಗೆ ಪ್ರಶಂಸೆ:‘ಇಂದು ಭಾರತ ವಿಶ್ವದಲ್ಲಿಯೇ 4ನೇ ನವೋದ್ಯಮ (ಸ್ಟಾರ್ಟಪ್‌) ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಇವು 10 ವರ್ಷಗಳ ಹಿಂದೆ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲದ ರೀತಿ ಕೆಲಸ ಮಾಡುತ್ತಿವೆ. ಒಂದಲ್ಲ ಒಂದು ನವೋದ್ಯಮದೊಂದಿಗೆ ಸಂಬಂಧ ಹೊಂದಿರುವ ಅಥವಾ ತಮ್ಮದೇ ಆದ ಒಂದನ್ನು ಪ್ರಾರಂಭಿಸಲು ಬಯಸುವ ನನ್ನ ಎಲ್ಲಾ ಯುವ ಸ್ನೇಹಿತರಿಗೆ ನನ್ನ ಅಭಿನಂದನೆಗಳು’ ಎಂದರು. 

ಮತದಾರರಾಗಿ:

ಮತದಾರರ ದಿನವಾದ ಜ.25ರಂದು ವಿಶೇಷ ಸಂದೇಶ ನೀಡಿದ ಮೋದಿ, ‘ಮತದಾರರ ದಿನದಂದು, 18 ವರ್ಷ ತುಂಬಿದ ನಂತರ ಮತದಾರರಾಗಿ ಖಂಡಿತ ನೋಂದಾಯಿಸಿಕೊಳ್ಳುವಂತೆ ನಾನು ಮತ್ತೊಮ್ಮೆ ನನ್ನ ಯುವ ಸ್ನೇಹಿತರನ್ನು ಆಗ್ರಹಿಸುತ್ತೇನೆ. ಸಂವಿಧಾನವು ಪ್ರತಿ ನಾಗರಿಕರಿಂದ ನಿರೀಕ್ಷಿಸುವ ಕರ್ತವ್ಯ ಪ್ರಜ್ಞೆಯನ್ನು ಇದು ಪೂರೈಸುತ್ತದೆ. ಜೊತೆಗೆ ಭಾರತದ ಪ್ರಜಾಪ್ರಭುತ್ವ ಕೂಡ ಬಲಗೊಳ್ಳುತ್ತದೆ’ ಎಂದು ಕರೆ ನೀಡಿದರು.