ಸಾರಾಂಶ
ನವದೆಹಲಿ: ಸ್ಕ್ವ್ಯಾಡ್ರನ್ ಲೀಡರ್ ಮೋಹನಾ ಸಿಂಗ್ ದೇಶಿಯ ಲಘು ಯುದ್ಧ ವಿಮಾನ ತೇಜಸ್ ಹಾರಿಸುವ ‘18 ಫ್ಲೈಯಿಂಗ್ ಬುಲೆಟ್ಸ್ ಸ್ವ್ಯಾಡ್ರನ್’ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಪಟ್ಟಿಗೆ ಆಯ್ಕೆಯಾದ ಮೊದಲ ಮಹಿಳಾ ಪೈಲಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
8 ವರ್ಷಗಳ ಹಿಂದೆ ವಾಯಪಡೆಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದ ಮೋಹನಾ ಸಿಂಗ್ ಇದುವರೆಗೂ ವಾಯುಪಡೆಯ ಮಿಗ್- 21 ಯುದ್ಧ ವಿಮಾನ ಹಾರಿಸುತ್ತಿದ್ದರು. ಇದೀಗ ಅವರನ್ನು ಪಾಕ್‌ಗೆ ಗಡಿಯಲ್ಲಿರುವ ಗುಜರಾತ್‌ನ ನಲಿಯಾ ವಾಯುನೆಲೆಗೆ ನಿಯೋಜಿಸಲಾಗಿದೆ. 2016ರಲ್ಲಿ ಭಾವನಾ ಕಾಂತ್ ಮತ್ತು ಅವನಿ ಚತುರ್ವೇದಿ ಜೊತೆಗೆ ಮೋಹನಾ ಮೊದಲ ಫೈಟರ್ ಪೈಲೆಟ್‌ಗಳಾಗಿ ವಾಯುಸೇನೆಗೆ ನೇಮಕಗೊಂಡಿದ್ದರು.
ಸಿಂಧೂ ನದಿ ಜಲ ಒಪ್ಪಂದದಲ್ಲಿ ಬದಲಾವಣೆ: ಪಾಕ್‌ಗೆ ನೋಟಿಸ್
ನವದೆಹಲಿ: ಇಂದಿನ ಸನ್ನಿವೇಶದಲ್ಲಿ ಹಳೆಯ ಸಿಂಧೂ ನದಿ ಜಲ ಒಪ್ಪಂದವನ್ನು ಮುಂದುವರೆಸಿಕೊಂಡು ಹೋಗುವುದು ಸಾಧ್ಯವಿಲ್ಲದಿರುವ ಕಾರಣ ಅದರಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕು ಎಂದು ಆಗ್ರಹಿಸಿ ಭಾರತ ಪಾಕಿಸ್ತಾನಕ್ಕೆ ನೋಟಿಸ್ ಜಾರಿಗೊಳಿಸಿದೆ. ‘ಇಂಡಸ್ ನೀರಿನ ಬಳಕೆ ಮತ್ತು ಜನಸಂಖ್ಯೆ ಬದಲಾಗುತ್ತಿದ್ದು, ಭಾರತ ಸ್ವಚ್ಛ ಇಂಧನದತ್ತ ಮುಂದುವರೆಯುತ್ತಿದೆ.
ಜಲ ಒಪ್ಪಂದ ಆರಂಭವಾದಾಗಿನಿಂದ ಇದು ಏಕಪಕ್ಷೀಯವಾಗಿದ್ದು, ಅದರ ಕೆಲ ಅಂಶಗಳ ಮೌಲ್ಯಮಾಪನ ಅಗತ್ಯವಾಗಿದೆ ಎಂದು 2024ರ ಆ.30ರಂದು ಜಾರಿಗೊಳಿಸಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇಂಡಸ್ ನದಿ ನೀರಿನ ಸಮರ್ಪಕ ಬಳಕೆಗಾಗಿ 1960ರ ಸೆ.19ರಂದು ಭಾರತ ಹಾಗೂ ಪಾಕ್ ಸರ್ಕಾರಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರ ಆರ್ಟಿಕಲ್ XII (3) ಅಡಿಯಲ್ಲಿ ಕಾಲಕಾಲಕ್ಕೆ ತಿದ್ದುಪಡಿ ಮಾಡುವ ಅವಕಾಶ ಒದಗಿಸಲಾಗಿದೆ.
ಖ್ಯಾತ ಟಪ್ಪರ್‌ವೇರ್ ಕಂಪನಿ ದಿವಾಳಿ!
ನವದೆಹಲಿ: ದಶಕಗಳಿಂದ ವಿಶ್ವದ ಹಲವು ದೇಶಗಳ ಅಡುಗೆ ಕೋಣೆಗಳಲ್ಲಿ ಜಾಗ ಮಾಡಿಕೊಂಡಿರುವ ಟಪ್ಪರ್‌ವೇರ್ ಕಂಪನಿ ಇದೀಗ ದಿವಾಳಿಯಾಗಿದೆ. ಈ ಹಿನ್ನೆಲೆಯಲ್ಲಿ ದಿವಾಳಿಯಿಂದ ರಕ್ಷಣೆ ಕೋರಿ ಟಪ್ಪರ್‌ವೇರ್ ಮತ್ತು ಅದರ ಅಂಗಸಂಸ್ಥೆಗಳು ಕಾನೂನು ಪ್ರಕ್ರಿಯೆಗೆ ಮುಂದಾಗಿದೆ. ‘ಕಳೆದ ಕೆಲ ವರ್ಷಗಳಿಂದ ಕಂಪನಿ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ.
ಇದರಿಂದ ಹೊರಬರಲು ವಿವಿಧ ಮಾರ್ಗಗಳನ್ನು ಅನುಸರಿಸಿದ ಬಳಿಕ ದೀವಾಳಿ ಘೋಷಿಸುವುದೇ ಸೂಕ್ತವಾಗಿ ಕಂಡಿತು’ ಎಂದು ಕಂಪನಿಯ ಅಧ್ಯಕ್ಷೆ ಮತ್ತು ಸಿಇಒ ಲೌರಿ ಆನ್ ಗೋಲ್ಡ್ಮನ್ ಹೇಳಿದ್ದಾರೆ. ಇದೀಗ ಬ್ರ್ಯಾಂಡ್ ಉಳಿಸಿಕೊಳ್ಳುವ ಸಲುವಾಗಿ ತಂತ್ರಜ್ಞಾನ-ಕೇಂದ್ರಿತ ಕಂಪನಿಯಾಗಲು ಅನುವು ಮಾಡಿಕೊಡುವ ಮಾರಾಟ ಪ್ರಕ್ರಿಯೆ ಸಂಬಂಧ ನ್ಯಾಯಾಲಯದ ಒಪ್ಪಿಗೆ ಪಡೆಯಲು ಯೋಚಿಸಿದೆ. ಇದಾಗಿಯೂ ಉದ್ಯೋಗಿಗಳು ಮತ್ತು ಪೂರೈಕೆದಾರರಿಗೆ ಹಣ ಪಾವತಿಸುವುದನ್ನು ಮುಂದುವರೆಸಲಿದೆ.
ಅಂಚೆ ಇಲಾಖೆ ಮೂಲಕ ಸರಕು ಸಾಗಣೆ ಮಾಡಲು ಕೇಂದ್ರ ಚಿಂತನೆ: ಸಿಂಧಿಯಾ
ನವದೆಹಲಿ: ಭಾರತೀಯ ಅಂಚೆ ಇಲಾಖೆಯನ್ನು ಸರಕುಸಾಗಣೆ ಕಂಪನಿಯಾಗಿ ಪರಿವರ್ತಿಸುವ ಮೂಲಕ ಅದರ ಆದಾಯವನ್ನು ಶೇ.50ರಿಂದ 60ರಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಜೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
‘ಸೇವೆಯನ್ನು ಗ್ರಾಮೀಣ ಪ್ರದೇಶಗಳ ಮನೆ ಬಾಗಿಲಿಗೆ ತಲುಪಿಸುವ ಸಾಮರ್ಥ್ಯವುಳ್ಳ ಅಂಚೆ ಇಲಾಖೆಯು ವೇಗವಾಗಿ ಪ್ರಗತಿ ಕಾಣುತ್ತಿದ್ದು, ನಮ್ಮ ವಾರ್ಷಿಕ ಆದಾಯ 12,000 ಕೋಟಿ ರು. ಇದೆ. ಮುಂದಿನ 3-4 ವರ್ಷಗಳಲ್ಲಿ ಇದನ್ನು ಶೇ.50-60ರಷ್ಟು ಏರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದೇನೆ’ ಎಂದು ಪಬ್ಲಿಕ್ ಅಫೇರ್ಸ್ ಫೋರಮ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಸಿಂಧಿಯಾ ಮಾಹಿತಿ ನೀಡಿದರು.