ಸಾರಾಂಶ
ನವದೆಹಲಿ: ‘ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾಗೆ ಕೊಡೆ ಹಿಡಿಯಲು ಬರಲ್ಲ. ಏಕೆಂದರೆ ತನ್ನ ಬಾಸ್‌ರ ಪೈಜಾಮ ಹಿಡಿಯುವಲ್ಲಿ ಬ್ಯುಸಿ ಆಗಿದ್ದಾರೆ’ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿ ವಿವಾದಕ್ಕೆ ಕಾರಣರಾಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗ ನಿರ್ಧರಿಸಿದೆ.
ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ನಡೆದ ಕಾಲ್ತುಳಿತ ಘಟನೆ ಸಂಬಂಧ ಸ್ಥಳಕ್ಕೆ ರೇಖಾ ಶರ್ಮಾ ಭೇಟಿ ನೀಡಿದ್ದರು. ಈ ವೇಳೆ ಹಿಂದುಗಡೆ ಯಾರೋ ಒಬ್ಬರು ರೇಖಾ ಶರ್ಮಾರಿಗೆ ಛತ್ರಿ ಹಿಡಿದಿದ್ದರು. ಈ ವಿಡಿಯೋ ವೈರಲ್ ಆಗಿ, ‘ರೇಖಾಗೆ ಕೊಡೆ ಹಿಡಿದುಕೊಳ್ಳಲು ಬರಲ್ವಾ?’ ಎಂದು ಪ್ರತಿಕ್ರಿಯಿಸಿದ್ದರು. ಇದೇ ವಿಡಿಯೋವನ್ನು ರೀಟ್ವೀಟ್ ಮಾಡಿದ್ದ ಮೊಹಿತ್ರಾ ‘ ಆಕೆಗೆ ಕೊಡೆ ಹಿಡಿಯಲು ಬರಲ್ಲ. ಏಕೆಂದರೆ ತನ್ನ ಬಾಸ್‌ನ ಪೈಜಾಮ್ ಹಿಡಿಯುವಲ್ಲಿ ಬ್ಯುಸಿ ಆಗಿದೆ’ ಎಂದಿದ್ದರು.
ರೇಖಾ ಶರ್ಮಾ ವಿರುದ್ಧ ಮೊಹುವಾ ಮೊಯಿತ್ರಾ ನೀಡಿದ ಅವಹೇಳನಕಾರಿ ಹೇಳಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗ ಕಿಡಿ ಕಾರಿದ್ದು, ಸುಮಟೋ ಕೇಸ್ ದಾಖಲಿಸಿದೆ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.