ಅನಿಲ್‌ ಅಂಬಾನಿ ಇನ್ನೊಂದು ವಂಚನೆ ಕೇಸ್‌

| Published : Sep 11 2025, 12:04 AM IST

ಅನಿಲ್‌ ಅಂಬಾನಿ ಇನ್ನೊಂದು ವಂಚನೆ ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

2,929 ಕೋಟಿ ರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಅನಿಲ್‌ ಅಂಬಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅನಿಲ್‌ ಅಂಬಾನಿ, ರಿಲಯನ್ಸ್‌ ಕಮ್ಯುನಿಕೇಷನ್ಸ್‌(ಆರ್‌ಕಾಂ) ಸಂಸ್ಥೆ, ಇತರರ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಗುರುವಾರ ಅಕ್ರಮ ಹಣ ವರ್ಗಾವಣೆ ಆರೋಪದಡಿ ಹೊಸ ಪ್ರಕರಣ ದಾಖಲಿಸಿದೆ.

2929 ಕೋಟಿ ರು. ವಂಚನೆ ಆರೋಪ

ನವದೆಹಲಿ: 2,929 ಕೋಟಿ ರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಅನಿಲ್‌ ಅಂಬಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅನಿಲ್‌ ಅಂಬಾನಿ, ರಿಲಯನ್ಸ್‌ ಕಮ್ಯುನಿಕೇಷನ್ಸ್‌(ಆರ್‌ಕಾಂ) ಸಂಸ್ಥೆ, ಇತರರ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಗುರುವಾರ ಅಕ್ರಮ ಹಣ ವರ್ಗಾವಣೆ ಆರೋಪದಡಿ ಹೊಸ ಪ್ರಕರಣ ದಾಖಲಿಸಿದೆ.

ಸಿಬಿಐ ಕಳೆದ ತಿಂಗಳು ದಾಖಲಿಸಿದ್ದ ಎಫ್ಐಆರ್‌ ಆಧರಿಸಿ ಇ.ಡಿ. ಈ ಪ್ರಕರಣ ದಾಖಲಿಸಿದೆ. ಅನಿಲ್‌ ಅಂಬಾನಿ ಮತ್ತು ಆರ್‌ಕಾಂ ಸಂಸ್ಥೆಯು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 2,929 ಕೋಟಿ ರು. ವಂಚನೆ ಮಾಡಿದೆ ಎಂದು ಸಿಬಿಐ ಆರೋಪಿಸಿತ್ತು. ಜತೆಗೆ, ಆರ್‌ಕಾಂ ಕಚೇರಿ ಮತ್ತು ಅನಿಲ್‌ ಅಂಬಾನಿ ಮನೆ ಸೇರಿ ವಿವಿಧೆಡೆ ದಾಳಿ ನಡೆಸಿ ದಾಖಲೆಗಳನ್ನು ಸಂಗ್ರಹಿಸಿತ್ತು. ರಿಲಯನ್ಸ್‌ ಕಮ್ಯುನಿಕೇಷನ್‌ಗೆ ನೀಡಿದ ಬ್ಯಾಂಕ್‌ ಸಾಲ ಅನ್ಯ ಉದ್ದೇಶಕ್ಕೆ ಬಳಸಿದ ಆರೋಪ ಅನಿಲ್‌ ಅಂಬಾನಿ ಮೇಲಿದೆ.

ಎಸ್‌ಬಿಐ ರಿಲಯನ್ಸ್‌ ಕಮ್ಯುನಿಕೇಷನ್‌ ಮತ್ತು ಅಂಬಾನಿ ಅವರನ್ನು ಈಗಾಗಲೇ ‘ವಂಚಕರು’ ಎಂದು ಕರೆದು ರಿಸರ್ವ್‌ ಬ್ಯಾಂಕ್‌ಗೆ ವರದಿ ನೀಡಿದೆ.

==

ಕರಿಷ್ಮಾ ಮಕ್ಕಳಿಗೆ ₹1900 ಕೋಟಿ ಸಿಕ್ಕಿದೆ: ಸಂಜಯ್‌ 2ನೇ ಪತ್ನಿ

ಸಂಜಯ್‌ ಕಪೂರ್‌ ಆಸ್ತಿ ವಿವರ ನೀಡಿ

2ನೇ ಪತ್ನಿ ಪ್ರಿಯಾಗೆ ದಿಲ್ಲಿ ಹೈಕೋರ್ಟ್‌ ಸೂಚನೆ

ಆಸ್ತಿ ಕೋರಿದ್ದ 1ನೇ ಪತ್ನಿ ಕರಿಷ್ಮಾ ಮಕ್ಕಳ ಅರ್ಜಿ ವಿಚಾರಣೆ

ನವದೆಹಲಿ: ಬಾಲಿವುಡ್‌ ನಟಿ ಕರಿಷ್ಮಾ ಕಪೂರ್‌ ಅವರ ಪತಿ ದಿವಂಗತ ಸಂಜಯ್‌ ಕಪೂರ್‌ ಅವರಿಗೆ ಸೇರಿದ ಎಲ್ಲ ಚರ ಮತ್ತು ಸ್ಥಿರ ಆಸ್ತಿಗಳ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕಪೂರ್‌ ಅವರ ಎರಡನೇ ಪತ್ನಿ ಪ್ರಿಯಾ ಕಪೂರ್‌ಗೆ ದೆಹಲಿ ಹೈಕೋರ್ಟ್‌ ಸೂಚನೆ ನೀಡಿದೆ.ತಂದೆ ಸಂಜಯ್‌ ಅವರ ಸುಮಾರು 30,000 ಕೋಟಿ ರು. ಆಸ್ತಿಯಲ್ಲಿ ಪಾಲು ಕೋರಿ ಮೊದಲ ಪತ್ನಿ ಕರಿಷ್ಮಾ ಅವರ ಇಬ್ಬರು ಮಕ್ಕಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜ್ಯೋತಿ ಸಿಂಗ್, ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ಪ್ರಿಯಾ ಕಪೂರ್‌ ಅವರಿಗೆ ಸೂಚಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾ ಕಪೂರ್‌, ‘ಸಂಜಯ್ ಅವರ ಮಕ್ಕಳಾದ ಸಮೈರಾ ಕಪೂರ್‌ (20) ಹಾಗೂ ಕಿಯಾನ್‌ ರಾಜ್‌ ಕಪೂರ್‌ (15) ಕುಟುಂಬ ಟ್ರಸ್ಟ್‌ನಿಂದ ಈಗಾಗಲೇ 1,900 ಕೋಟಿ ರು.ಗಳನ್ನು ಪಡೆದಿದ್ದಾರೆ ಮತ್ತು ಅವರಿಗೆ ಇನ್ನೂ ಏನೇನು ಬೇಕಂತೆ?’ ಎಂದು ಪ್ರಶ್ನಿಸಿದ್ದಾರೆ.

ಕೋರ್ಟ್‌ ವಿಚಾರಣೆಯನ್ನು ಅ.9ಕ್ಕೆ ಮುಂದೂಡಿದೆ.

==

ಹೆಸರು, ಫೋಟೋ ದುರ್ಬಳಕೆಗೆ ತಡೆ ನೀಡಿ: ಅಭಿಷೇಕ್‌ ಕೂಡ ಕೋರ್ಟಿಗೆ

ನವದೆಹಲಿ: ಪತ್ನಿ ಐಶ್ವರ್ಯ ರೈ ಬಳಿಕ, ತಮ್ಮ ಪ್ರಚಾರ ಮತ್ತು ವ್ಯಕ್ತಿತ್ವದ ಹಕ್ಕುಗಳ ರಕ್ಷಣೆ ಕೋರಿ ಅವರ ಪತಿ, ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್‌ ಬುಧವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.ತಮ್ಮ ಚಿತ್ರ, ತಮ್ಮ ಹೋಲಿಕೆ ಇರುವ ಚಿತ್ರ, ವ್ಯಕ್ತಿತ್ವ ಹಾಗೂ ಲೈಂಗಿಕತೆಗೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಂತೆ ಯಾವುದೇ ನಕಲಿ ಚಿತ್ರ ಅಥವಾ ವಿಡಿಯೋಗಳನ್ನು ಬಳಸದಂತೆ ವೆಬ್‌ಸೈಟ್‌ಗಳು ಮತ್ತು ಆನ್ಲೈನ್‌ ವೇದಿಕೆಗಳಿಗೆ ನಿರ್ಬಂಧ ಹೇರುವಂತೆ ಕೋರಿದ್ದಾರೆ.ಅಭಿಷೇಕ್ ಅವರ ಪತ್ನಿ, ನಟಿ ಐಶ್ವರ್ಯ ರೈ ಕೂಡ ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

==

ನೇಪಾಳದಲ್ಲಿ ಏನಾಗ್ತಿದೆ ನೋಡಿ: ಭಾರತದ ಬಗ್ಗೆ ಸುಪ್ರೀಂ ಮೆಚ್ಚುಗೆ

ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಇದೆ

ನೇಪಾಳ ದಂಗೆ ಉಲ್ಲೇಖಿಸಿ ನ್ಯಾ। ಗವಾಯಿ ನುಡಿ

ನವದೆಹಲಿ: ‘ನಮ್ಮ ನೆರೆಯ ರಾಜ್ಯಗಳಲ್ಲಿ ಏನಾಗುತ್ತಿದೆ ಎಂದು ನೋಡಿ. ನೇಪಾಳ, ನಾವು ನೋಡಿದ್ದೇವೆ. ನಮ್ಮ ಸಂವಿಧಾನದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಸುಪ್ರೀಂ ಕೋರ್ಟು, ನೇಪಾಳ ದಂಗೆಯನ್ನು ಉಲ್ಲೇಖಿಸಿ ಭಾರತವನ್ನು ಶ್ಲಾಘಿಸಿದ ಪ್ರಸಂಗ ನಡೆಯಿತು.ಮಸೂದೆಗಳಿಗೆ ಸಹಿ ಹಾಕಲು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಗಡುವು ವಿಧಿಸಿದ ತನ್ನದೇ ತೀರ್ಪನ್ನು ಮುಖ್ಯ ನ್ಯಾ। ಬಿ.ಆರ್. ಗವಾಯಿ ಅವರ ಪೀಠ ಮರುಪರಿಶೀಲನೆಗೆ ಒಳಪಡಿಸುತ್ತಿರುವ ವೇಳೆ, ದೇಶದಲ್ಲಿನ ಪ್ರಜಾಪ್ರಭುತ್ವದ ವಿಷಯ ಪ್ರಸ್ತಾಪ ಆಯಿತು.

ಆಗ ನ್ಯಾ। ಗವಾಯಿ, ‘ನಮ್ಮ ಸಂವಿಧಾನದ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮ ನೆರೆಯ ದೇಶಗಳಲ್ಲಿ ಏನಾಗುತ್ತಿದೆ ಎಂದು ನೋಡಿ. ನೇಪಾಳದಲ್ಲಿ ಈಗ ನಾವು ನೋಡಿದ್ದೇವೆ’ ಎಂದರು. ಇದಕ್ಕೆ ದನಿಗೂಡಿಸಿದ ನ್ಯಾ। ವಿಕ್ರಮ್‌ ನಾಥ್‌, ‘ಕಳೆದ ವರ್ಷ ಬಾಂಗ್ಲಾದಲ್ಲೂ ಆಗಿತ್ತು’ ಎಂದರು.

==

ನೇಪಾಳ ಸಮಸ್ಯೆಗೆ ಕಾಂಗ್ರೆಸ್‌ ಕಾರಣ: ಬಿಹಾರ ಡಿಸಿಎಂ

ಪಟನಾ: ‘ಅರಾಜಕತೆಗೆ ತುತ್ತಾಗಿರುವ ನೇಪಾಳವು ಭಾರತದ ಭಾಗವಾಗಿದ್ದರೆ, ಅಲ್ಲಿ ಅರಾಜಕತೆ ಇರುತ್ತಿರಲಿಲ್ಲ. ನೇಪಾಳ ಸಮೃದ್ಧವಾಗಿರುತ್ತಿತ್ತು. ಇದಕ್ಕೆಲ್ಲಾ ಕಾಂಗ್ರೆಸ್‌ ಕಾರಣ’ ಎಂದು ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಹೇಳಿದ್ದಾರೆ. ‘ನೇಪಾಳ ಭಾರತದ ಭಾಗವಾಗಿದ್ದರೆ, ಅದು ಸಮೃದ್ಧವಾಗಿರುತ್ತಿತ್ತು. ಅದೇ ರೀತಿ, ಪಾಕಿಸ್ತಾನ ಭಾರತದ ಭಾಗವಾಗಿದ್ದರೆ, ಅದು ಕೂಡ ಸಮೃದ್ಧವಾಗಿರುತ್ತಿತ್ತು. ಇದು ಕಾಂಗ್ರೆಸ್‌ನ ತಪ್ಪು. ಎಲ್ಲವನ್ನು ಪ್ರತ್ಯೇಕ ಮಾಡಿದ್ದು ಕಾಂಗ್ರೆಸ್‌. ಅದಕ್ಕಾಗಿಯೇ ನಾವು ಈ ಸವಾಲುಗಳನ್ನು ಎದುರಿಸುತ್ತಿದ್ದೇವೆ’ ಎಂದು ಚೌಧರಿ ಹೇಳಿದ್ದಾರೆ.

==

ಭಾರತದ ಜಿಡಿಪಿ ಶೇ.6.5 ಅಲ್ಲ, ಶೇ.6.9ರಲ್ಲಿ ಬೆಳವಣಿಗೆ: ಫಿಚ್‌

ಪಿಟಿಐ ನವದೆಹಲಿಭಾರತದಲ್ಲಿ ದೇಶೀಯ ಗ್ರಾಹಕ ಬೇಡಿಕೆ ಮತ್ತು ಜೂನ್‌ ತ್ರೈಮಾಸಿಕದಲ್ಲಿನ ಉತ್ತಮ ಬೆಳವಣಿಗೆಯಿಂದಾಗಿ ಫಿಚ್‌ ರೇಟಿಂಗ್‌ ಸಂಸ್ಥೆಯು 2026ರ ವಿತ್ತ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ.6.9ರಲ್ಲಿ ಬೇಡಿಕೆಯಾಗಲಿದೆ ಎಂದು ಅಂದಾಜಿಸಿದೆ. ಈ ಹಿಂದೆ ಅಂದಾಜಿಸಿದ್ದ ಶೇ.6.5ರ ಬೆಳವಣಿಗೆಯನ್ನು ಏರಿಸಿದೆ.

ಜಾಗತಿಕ ಆರ್ಥಿಕ ಮುನ್ಸೂಚನೆ (ಜಿಇಒ) ವರದಿಯಲ್ಲಿ ಅಂದಾಜು ಪರಿಷ್ಕರಿಸಿದೆ. ಮಾರ್ಚ್‌-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ವೇಗವು ತೀವ್ರವಾಗಿ ಮುನ್ನುಗ್ಗಿದೆ. ಏಪ್ರಿಲ್‌-ಜೂನ್‌ನಲ್ಲಿ ನೈಜ ಜಿಡಿಪಿ ಶೇ.7.8ರಷ್ಟಕ್ಕೆ ಏರಿಕೆ ಮಾಡಿದೆ.ಭಾರತದಲ್ಲಿ ಜಿಎಸ್ಟಿ ಸ್ತರ ಪರಿಷ್ಕರಣೆಯಿಂದ ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರ್ಚು ಮಾಡುವ ಸಾಮರ್ಥ್ಯ ಇದಕ್ಕೆ ಕಾರಣವಾಗಿದೆ ಎಂದು ಫಿಚ್‌ ಹೇಳಿದೆ. ಆದರೆ 2026-27 ಪ್ರಗತಿ ಶೇ.6.3, 2028ರ ಪ್ರಗತಿಯು ಶೇ.6.2ರಷ್ಟು ಇರಲಿದೆ ಎಂದು ಫಿಚ್‌ ಹೇಳಿದೆ.