ಸಾರಾಂಶ
ಚೆನ್ನೈ: ‘ಬಿಜೆಪಿಯೊಂದಿಗಿನ ಮೈತ್ರಿ ಚುನಾವಣೆಯ ತನಕ ಮಾತ್ರ ಇರುತ್ತದೆ. ಮೈತ್ರಿ ಸರ್ಕಾರ ರಚನೆ ನಮಗೆ ಒಪ್ಪಿಗೆಯಿಲ್ಲ’ ಎಂದು ಎಐಎಡಿಎಂಕೆ ಅಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಅವರು ಹೇಳಿದ ಬೆನ್ನಲ್ಲೇ, ಪಕ್ಷದ ಇನ್ನೊಬ್ಬ ನಾಯಕರಿಂದ ಅದೇ ಮಾದರಿಯ ಹೇಳಿಕೆ ಬಂದಿದೆ.
‘ರಾಜ್ಯದಲ್ಲಿ ಈವರೆಗೆ ಮೈತ್ರಿ ಸರ್ಕಾರ ರಚನೆಯಾದ ಇತಿಹಾಸವೇ ಇಲ್ಲ. ಮುಂದೆಯೂ ಇರುವುದಿಲ್ಲ. 2026ರಲ್ಲಿ ಕೂಡ ಎಡಪ್ಪಾಡಿಯವರು ಒಬ್ಬರೇ ಸರ್ಕಾರ ರಚಿಸುತ್ತಾರೆ’ ಎಂದು ಅಣ್ಣಾ ಡಿಎಂಕೆ ನಾಯಕರಾದ ರಾಜ್ಯಸಭಾ ಸಂಸದ ಎಂ. ತಂಬಿದೊರೈ ಗುರುವಾರ ಹೇಳಿದ್ದಾರೆ.
ಈ ಮೂಲಕ ಏಕಾಂಗಿಯಾಗಿ ಗೆದ್ದರೆ ಬಿಜೆಪಿಯನ್ನು ಅಣ್ಣಾಡಿಎಂಕೆ ಕೈಬಿಡುತ್ತದೆಯೇ ಎಂಬ ಅನುಮಾನ ಮೂಡಿದೆ.‘ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಸರ್ಕಾರ ಇರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಹೇಳಿಲ್ಲ. ಎರಡೂ ಪಕ್ಷಗಳು ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚನೆಯಾಗಲಿದೆ ಎಂದಷ್ಟೇ ಘೋಷಿಸಲಾಗಿತ್ತು’ ಎಂದು ಪಳನಿಸ್ವಾಮಿ ಬುಧವಾರ ಹೇಳಿದ್ದರು.
ರಾಷ್ಟ್ರಪಕ್ಷವಾಗಿರುವ ಬಿಜೆಪಿ ಈವರೆಗೆ ತಮಿಳುನಾಡಿನಲ್ಲಿ ಭದ್ರ ನೆಲೆ ಕಂಡುಕೊಂಡಿಲ್ಲ ಎಂಬುದು ಗಮನಾರ್ಹ.