ಭಾರತೀಯರಿಗೆ ಬೊಜ್ಜಿಂದ ಭಾರೀ ಕಂಟಕ : ಮೋದಿ ಕಳವಳ

| N/A | Published : Aug 16 2025, 12:00 AM IST / Updated: Aug 16 2025, 05:02 AM IST

ಸಾರಾಂಶ

ಭಾರತ ಸಮೃದ್ಧ ದೇಶವಾಗುವುದಷ್ಟೇ ಅಲ್ಲ, ಸ್ವಸ್ಥವೂ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ನವದೆಹಲಿ: ಭಾರತ ಸಮೃದ್ಧ ದೇಶವಾಗುವುದಷ್ಟೇ ಅಲ್ಲ, ಸ್ವಸ್ಥವೂ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ‘ದೇಶದಲ್ಲಿ ಬೊಜ್ಜು ಭಾರೀ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಎಲ್ಲಾ ಪರಿವಾರಗಳು ಗಮನಹರಿಸಬೇಕು. ಪ್ರತಿ 3 ಜನರಲ್ಲಿ ಒಬ್ಬರನ್ನು ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು’ ಎಂದು ಎಚ್ಚರಿಸಿದರು. ಜತೆಗೆ, ‘ಅಡುಗೆ ಎಣ್ಣೆಯ ಖರೀದಿ ಮತ್ತು ಬಳಕೆಯನ್ನು ಶೇ.10ರಷ್ಟು ತಗ್ಗಿಸಿ’ ಎಂದು ತಾವೇ ಹಿಂದೊಮ್ಮೆ ನೀಡಿದ್ದ ಉಪಾಯವನ್ನು ನೆನಪಿಸಿದರು.

ವಿಕಸಿತ ಭಾರತ ಗುರಿ ಮುಟ್ಟಲು ಟಾಸ್ಕ್‌ ಫೋರ್ಸ್‌: ಪ್ರಧಾನಿ

 ನವದೆಹಲಿ : ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ, 2047ರಲ್ಲಿ ವಿಕಸಿತ ಭಾರತದ ಕನಸಿನ ಗುರಿತಲುಪುವ ಉದ್ದೇಶದಿಂದ ವಿಶೇಷ ಟಾಸ್ಕ್ ಫೋರ್ಸ್‌ವೊಂದನ್ನು ರಚಿಸಲಿದ್ದು, ಇದು ಮುಂದಿನ ತಲೆಮಾರಿನ ಆರ್ಥಿಕ ಸುಧಾರಣೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಅವರು, ‘21ನೇ ಶತಮಾನದ ಅಗತ್ಯಕ್ಕೆ ತಕ್ಕಂತೆ ಹಾಲಿ ಇರುವ ಕಾನೂನುಗಳನ್ನು ಸರಿಹೊಂದಿಸುವ ಮತ್ತು 2047ರಲ್ಲಿ ವಿಕಸಿತ ಭಾರತದ ಕನಸು ನನಸು ಮಾಡುವ ಉದ್ದೇಶದಿಂದ ದೇಶವನ್ನು ಸನ್ನದ್ಧಗೊಳಿಸಲು ಈ ಟಾರ್ಸ್‌ಫೋರ್ಸ್‌ ನಿಗದಿತ ಕಾಲಮಿತಿಯೊಳಗೆ ತನ್ನ ಕೆಲಸ ಮಾಡಲಿದೆ’ ಎಂದರು.ವಿಕಸಿತ ಭಾರತದ ಗುರಿ ತಲುಪಲು ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕ ಇಕೋ ಸಿಸ್ಟಂ(ವ್ಯವಸ್ಥೆ) ಅನ್ನು ನಿರ್ಮಾಣ ಮಾಡುತ್ತಿದೆ. ಈ ಮೂಲಕ ದೇಶವನ್ನು ಸ್ವಾವಲಂಬಿ ಮಾಡಲು ಉದ್ದೇಶಿಸಲಾಗಿದೆ ಎಂದರು.

ಈಗಾಗಲೇ ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ನೀತಿ-ನಿಯಮಾವಳಿಯಲ್ಲಿ ಅನೇಕ ಬದಲಾವಣೆ, ಕಾನೂನಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ. ಆದಾಯ ತೆರಿಗೆ ಕಾಯ್ದೆಯಲ್ಲೂ ಸರ್ಕಾರ ಬದಲಾವಣೆ ಮಾಡಿದೆ. ಸಣ್ಣ ತಪ್ಪುಗಳನ್ನು ಕ್ರಿಮಿನಲ್‌ ಅಪರಾಧ ವ್ಯಾಪ್ತಿಯಿಂದ ಹೊರಗಿಡಲಿದೆ. ಈ ಕುರಿತ ವಿಧೇಯಕ ಮುಂದಿನ ವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ ಎಂದ ಅವರು, ನಾವು ಇನ್ನಷ್ಟು ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಹೇಳಿದರು.

ಕೆಂಪುಕೋಟೆಯಲ್ಲಿ ಧ್ವಜಾರೋಹಣಕ್ಕೆ ಖರ್ಗೆ, ರಾಗಾ ಗೈರು

ನವದೆಹಲಿ: ಕೆಂಪುಕೋಟೆಯಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜು ಖರ್ಗೆ ಗೈರಾಗಿದ್ದಾರೆ. ನಾಯಕರ ಈ ನಡೆಯನ್ನು ಬಿಜೆಪಿ ಟೀಕಿಸಿದೆ.

ರಾಹುಲ್, ಖರ್ಗೆ ಗೈರಿಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಕಳೆದ ಸ್ವಾತಂತ್ರ್ಯೋತ್ಸವದ ವೇಳೆ ಸೀಟು ಹಂಚಕೆಯಲ್ಲಿ ಆದ ಅವಮಾನ ಕಾರಣವಿರಬಹುದು ಎನ್ನಲಾಗುತ್ತಿದೆ. ಸಂಪ್ರದಾಯದ ಪ್ರಕಾರ ಪ್ರತಿಪಕ್ಷದ ನಾಯಕರು ಮುಂದಿನ ಸಾಲಿನಲ್ಲಿ ಕೂರಬೇಕು. ಆದರೆ ಕಳೆದ ಸಲ ಅಂದಿನ ಸಿಜೆಐ ಡಿ.ವೈ ಚಂದ್ರಚೂಡ್‌, ಸಚಿವೆ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಹಾಗೂ ಕೆಲ ಸಚಿವರಿಗೆ ಮುಂದಿನ ಆಸನ ನೀಡಿ ಇಬ್ಬರನ್ನೂ ಹಿಂದಿನ ಸಾಲಿನಲ್ಲಿ ಕೂರಿಸಲಾಗಿತ್ತು.ಇದು ಕಾಂಗ್ರೆಸ್‌ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಸಲ ಗೈರಾಗಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಿದ್ದರು.ಬಿಜೆಪಿ ಕಿಡಿ:

ಉಭಯ ನಾಯಕರ ನಡೆಗೆ ಬಿಜೆಪಿ ಕಿಡಿ ಕಾರಿದೆ. ಟ್ವೀಟ್‌ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ , ‘ಪಾಕಿಸ್ತಾನ ಪ್ರೀತಿಸುವ ರಾಹುಲ್ ಗಾಂಧಿ ಮೋದಿ ವಿರೋಧಿಸುವ ಏಕೈಕ ಉದ್ದೇಶದಿಂದ ದೇಶ, ಸೇನೆ ವಿರೋಧಿಸುತ್ತಿದ್ದಾರೆ. ಇದು ನಾಚಿಕೆಗೇಡು. ಇದು ಸಂವಿಧಾನ, ಸೇನೆಗೆ ನೀಡುವ ಗೌರವವೇ?’ ಎಂದು ಪ್ರಶ್ನಿಸಿದ್ದಾರೆ.

100 ಹಿಂದುಳಿದ ಜಿಲ್ಲೆಗಳ ಕೃಷಿ ಅಭಿವೃದ್ಧಿಗೆ ಧನಧಾನ್ಯ ಯೋಜನೆ

ಪಿಟಿಐ ನವದೆಹಲಿದೇಶದ 100 ಹಿಂದುಳಿದ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಧನ-ಧನ್ಯ ಕೃಷಿ ಯೋಜನೆ ಜಾರಿಗೆ ತಂದು ಅಲ್ಲಿನ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಈ ಮೂಲಕ ಅವನ್ನು ಇತರ ಅಭಿವೃದ್ಧಿ ಹೊಂದಿದ ಕೃಷಿ ಜಿಲ್ಲೆಗಳ ಸಮಮಟ್ಟಕ್ಕೆ ತರಲಾಗುವುವದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಅವರು, ಯೋಜನೆಯಡಿ ರೈತರ ಸಬಲೀಕರಣ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಈ 100 ಜಿಲ್ಲೆಗಳ ರೈತರಿಗೆ ಸ್ವಲ್ಪ ಸಹಾಯ ಮಾಡಿದರೆ, ಅವರು ಭಾರತದ ಇತರ ರೈತರೊಂದಿಗೆ ಸಮಾನರಾಗುತ್ತಾರೆ ಎಂದರು.ಜುಲೈ 16 ರಂದು ಸಚಿವ ಸಂಪುಟವು ಇದನ್ನು ಅನುಮೋದಿಸಿದ್ದು, 24,000 ಕೋಟಿ ರು.ಗಳ ವಾರ್ಷಿಕ ಬಜೆಟ್‌ ಹೊಂದಿದೆ. ಈ ಜಿಲ್ಲೆಗಳಲ್ಲಿ ನೀರಾವರಿ, ಧಾನ್ಯ ಸಂಗ್ರಹಕ್ಕೆ ಗೋದಾಮು- ಇತ್ಯಾದಿ ಸೌಲಭ್ಯ ಒದಗಿಸಲಾಗುವುದು.

ತುರ್ತುಸ್ಥಿತಿಯಿಂದ ಸಂವಿಧಾನದ ಕೊಲೆ: ಮೋದಿ

ಪಿಟಿಐ ನವದೆಹಲಿದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಹೇಗೆ ಕೊಲ್ಲಲ್ಪಟ್ಟಿತು ಮತ್ತು ಹೇಗೆ ವಂಚನೆಗೆ ಒಳಗಾಯಿತು ಎಂಬುದನ್ನು ದೇಶದ ಯಾವುದೇ ಪೀಳಿಗೆ ಮರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ದೆಹಲಿಯಲ್ಲಿ ಮಾತನಾಡಿದ ಅವರು, ‘ತುರ್ತುಪರಿಸ್ಥಿತಿ ಹೇರಿಕೆಯಾಗಿ 50 ವರ್ಷಗಳು ಕಳೆದಿವೆ. ಆಗ ಸಂವಿಧಾನವನ್ನು ಉಲ್ಲಂಘಿಸಲಾಯಿತು. ನಾವು ವಂಚನೆಗೆ ಒಳಗಾದೆವು. ನಮ್ಮ ಬೆನ್ನಿಗೆ ಚೂರಿ ಇರಿಯಲಾಯಿತು. ಭಾರತ ಜೈಲಿಗೆ ನೂಕಲ್ಪಟ್ಟಿತು. ಸಂವಿಧಾನವನ್ನು ಹತ್ಯೆ ಮಾಡಿದ ಈ ಪಾಪವನ್ನು ದೇಶದ ಯಾವುದೇ ಪೀಳಿಗೆ ಮರೆಯಬಾರದು. ಸಂವಿಧಾನವನ್ನು ಹತ್ಯೆಗೈದ ಪಾಪಿಗಳನ್ನು ಸಹ ಮರೆಯಬಾರದು. ಭಾರತೀಯ ಸಂವಿಧಾನವನ್ನು ಪುನಃ ಬಲಪಡಿಸುವತ್ತ ಗಮನ ನೆಟ್ಟು ನಾವು ಮುಂದುವರಿಯಬೇಕು’ ಎಂದು ಕರೆ ನೀಡಿದರು.

Read more Articles on