ಡಿಎಫ್‌ಒ ಬಳಿ 115 ಪ್ಲಾಟ್, ₹10 ಕೋಟಿಯ ವಿವಿಧ ಆಸ್ತಿ ಪತ್ತೆ!

| N/A | Published : Jul 22 2025, 12:00 AM IST / Updated: Jul 22 2025, 06:22 AM IST

money

ಸಾರಾಂಶ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹದ ಆರೋಪದ ಮೇಲೆ ಒಡಿಶಾದ ಕಿಯೋಂಜಾರ್ ಕೆಂಡು ಲೀಫ್ ವಿಭಾಗದ ಅರಣ್ಯಾಧಿಕಾರಿ (ಡಿಎಫ್‌ಒ) ನಿತ್ಯಾನಂದ ನಾಯಕ್ ಅವರ ನಿವಾಸಗಳ ಮೇಲೆ ವಿಚಕ್ಷಣ ದಳದ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದಾರೆ.

ಭುವನೇಶ್ವರ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹದ ಆರೋಪದ ಮೇಲೆ ಒಡಿಶಾದ ಕಿಯೋಂಜಾರ್ ಕೆಂಡು ಲೀಫ್ ವಿಭಾಗದ ಅರಣ್ಯಾಧಿಕಾರಿ (ಡಿಎಫ್‌ಒ) ನಿತ್ಯಾನಂದ ನಾಯಕ್ ಅವರ ನಿವಾಸಗಳ ಮೇಲೆ ವಿಚಕ್ಷಣ ದಳದ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದಾರೆ. 

ಈ ವೇಳೆ 115 ದುಬಾರಿ ಬೆಲೆಯ ನಿವೇಶನಗಳು, ಸಣ್ಣ ಶಸ್ತ್ರಾಗಾರ, 1.55 ಲಕ್ಷ ರು. ಹಣ, 200 ಗ್ರಾಂ ಚಿನ್ನ, ತೇಗದ ಕಲಾಕೃತಿಗಳ ಸಂಗ್ರಹ, 2 ವಾಹನಗಳು ಹಾಗೂ 10 ಕೋಟಿ ರು.ಗೂ ಅಧಿಕ ಮೌಲ್ಯದ ವಿವಿಧ ಆಸ್ತಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಅಂಗುಲ್‌ನ ಮದನಮೋಹನ ಪಟ್ನಾದಲ್ಲಿರುವ ನಾಯಕ್‌ರ ಪೋಷಕರ ನಿವಾಸ, ಕಿಯೋಂಜಾರ್‌ನಲ್ಲಿನ ಸರ್ಕಾರಿ ಕ್ವಾರ್ಟರ್ಸ್ ಮತ್ತು ನಯಾಗಢದ ಕೊಮಾಂಡದಲ್ಲಿರುವ ಅವರ ಮಗನ ಮನೆ ಸೇರಿ 7 ಸ್ಥಳಗಳಲ್ಲಿ ದಾಳಿ ನಡೆದಿದೆ. ಈ ದಾಳಿಯಲ್ಲಿ 115 ನಿವೇಶನಗಳು ಪತ್ತೆಯಾಗಿವೆ. 

ಇವುಗಳಲ್ಲಿ 53 ನಾಯಕ್‌ರ ಹೆಸರಿನಲ್ಲಿ, 42 ಅವರ ಪತ್ನಿ ಹೆಸರಲ್ಲಿ, 16 ಇಬ್ಬರು ಗಂಡುಮಕ್ಕಳ ಹೆಸರಲ್ಲಿ ಹಾಗೂ 4 ಮಗಳ ಹೆಸರಿನಲ್ಲಿವೆ. ಪ್ರತಿ ಪ್ಲಾಟ್‌ಗಳ ಮಾರುಕಟ್ಟೆ ಮೌಲ್ಯ 10 ಕೋಟಿ ರು.ಗಿಂತಲೂ ಅಧಿಕ ಎನ್ನಲಾಗಿದೆ. ಸಣ್ಣ ಶಸ್ತ್ರಾಗಾರದಲ್ಲಿ 1 ರೈಫಲ್, ಕತ್ತಿಗಳು, ಈಟಿ ಮೊದಲಾದ ಆಯುಧಗಳು ದೊರೆತಿವೆ. ನಾಯಕ್‌ರ ಬ್ಯಾಂಕ್ ಖಾತೆ, ವಿಮೆ, ಅಂಚೆ ಮತ್ತು ಇತರೆ ಠೇವಣಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮತ್ತಷ್ಟು ಆಸ್ತಿಗಳು ಪತ್ತೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಇಂಜಿನಿಯರ್‌ ಒಬ್ಬರಿಗೆ ಸೇರಿದ 105 ಅಕ್ರಮ ನಿವೇಶನಗಳ ಪತ್ತೆಯಾಗಿತ್ತು.

Read more Articles on