ಮುಂಬೈ: ಹಿರಿಯ ಚಲನಚಿತ್ರ ನಿರ್ಮಾಪಕ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ (76) ಅವರು ಮುಂಬೈನಲ್ಲಿ ಅನಾರೋಗ್ಯದಿಂದ ನಿಧನರಾದರು. 1950ರಲ್ಲಿ ಜನಿಸಿದ ನಿಹಲಾನಿ 1982ರಲ್ಲಿ ಹತ್ಕಾಡಿ ಸಿನಿಮಾ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಇಲ್ಜಾಮ್, ಆಗ್ ಹಿ ಆಗ್, ಶೋಲಾ ಔರ್ ಶಬ್ನಮ್, ಆಂಖೇನ್, ದಿಲ್ ತೇರಾ ದಿವಾನಾ, ತಲಾಶ್, ರಂಗೀಲಾ ರಾಜಾ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದರು. ಈ ನಡುವೆ ಅವರು 2015- 2017ರ ತನಕ ಸಿಬಿಎಫ್‌ಸಿಯ ಅಧ್ಯಕ್ಷರಾಗಿದ್ದರು. ನಿಹಲಾನಿ ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
==ಚಿನ್ನ ಮಾರಿಲ್ಲ: ಸುದ್ದಿ ಸಂಸ್ಥೆಯ ವರದಿಗೆ ಆರ್‌ಬಿಐ ಸ್ಪಷ್ಟನೆ
ಮುಂಬೈ: ’ಇರಾನ್ ಯುದ್ಧದಿಂದ ಉಂಟಾಗಿರುವ ರುಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ವಿನಿಮಯ ಕುಸಿತದ ಬಿಕ್ಕಟ್ಟಿನಿಂದ ಪಾರಾಗಲು ಆರ್‌ಬಿಐ ತನ್ನ ಸಂಗ್ರಹದ 75 ಟನ್ ಚಿನ್ನ ಮಾರಿರುವ ಸಾಧ್ಯತೆ ಇದೆ’ ಎಂಬ ಬ್ಲೂಮ್‌ಬರ್ಗ್ ಸುಸದ್ದಿ ಸಂಸ್ಥೆಯ ವರದಿಯನ್ನು ರಿಸರ್ವ್ ಬ್ಯಾಂಕ್ ಖುದ್ದು ತಳ್ಳಿ ಹಾಕಿದ್ದು, ಇದು ಸುಳ್ಳುಸುದ್ದಿ ಎಂದು ಸ್ಪಷ್ಟನೆ ನೀಡಿದೆ 1.14 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಲಾಗಿದೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಆರ್‌ಬಿಐ ‘ಈ ವರದಿಗಳು ಸುಳ್ಳು. ಆರ್‌ಬಿಐ ಪ್ರಕಟಿಸುವ ಅಧಿಕೃತ ಮಾಹಿತಿಯನ್ನು ಮಾತ್ರ ಸಾರ್ವಜನಿಕರು ಪಾಲಿಸಿ’ ಎಂದಿದೆ. ಜತೆಗೆ 880.52 ಮೆಟ್ರಿಕ್ ಟನ್ ಚಿನ್ನದ ಸಂಗ್ರಹ ಸ್ಥಿರವಾಗಿದೆ ಎಂದು ಅದು ಹೇಳಿದೆ.
==
ಇಂದು ಆರ್‌ಬಿಐ ಸಾಲ ನೀತಿ ಪ್ರಕಟ ಬಡ್ಡಿದರ ಯಥಾಸ್ಥಿತಿಯ ನಿರೀಕ್ಷೆ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಸಂಜಯ್ ಮಲ್ಹೋತ್ರಾ, ಶುಕ್ರವಾರ ದ್ವೈಮಾಸಿಕ ಸಾಲ ನೀತಿ ಪ್ರಕಟಿಸಲಿದ್ದಾರೆ. ಈ ವೇಳೆ ರೆಪೋ ದರವನ್ನು ಶೇ.5.25ರಲ್ಲೇ ಮುಂದುವರೆಸುವ ನಿರೀಕ್ಷೆ ಇದೆ. ಹೀಗಾಗದಲ್ಲಿ ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರಗಳು ಯಥಾಸ್ಥಿತಿಯಲ್ಲೇ ಮುಂದುವರೆಯುವ ನಿರೀಕ್ಷೆ ಇದೆ. ಮಧ್ಯಪ್ರಾಚ್ಯ ಯುದ್ಧವು ದೇಶದ ಆರ್ಥಿಕ ಬೆಳವಣಿಗೆಗೆ ಸವಾಲೊಡ್ಡುತ್ತಿರುವ ಹೊತ್ತಿನಲ್ಲಿ ಬುಧವಾರದಿಂದ ಆರಂಭವಾದ ಹಣಕಾಸು ನೀತಿ ಸಮಿತಿಯ 3 ದಿನದ ಸಭೆಯಲ್ಲಿ ಈ ದರದ ಬಗ್ಗೆ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
==ಕೇರಳದಲ್ಲಿ ಇಸ್ಲಾಂ ಸ್ನೇಹಿ ಜಿಮ್ ಆರಂಭ ವಿವಾದ
ತಿರುವನಂತಪುರಂ: ಇಸ್ಲಾಮಿಕ್ ಸ್ನೇಹಿ ನಿಯಮ ಜಾರಿಗೆ ತರುವುದಾಗಿ ಕೇರಳದ ಪಾಲಕ್ಕಾಡ್‌ನಲ್ಲಿ ಜಿಮ್‌ನ ಮಾಲೀಕರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪಾಲಕ್ಕಾಡ್‌ನ ಪುತ್ತುನಗರಂನಲ್ಲಿ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇದೀಗ ನವೀಕರಣಗೊಂಡಿರುವ ಜಿಮ್‌ನ ಮಾಲೀಕ ನವಾಜ್ ಮುತ್ತು, ಪ್ರಚಾರದ ವಿಡಿಯೋವೊಂದರಲ್ಲಿ ‘ ನಾವು ಕೇರಳದ ಮೊದಲ ಇಸ್ಲಾಮಿಕ್ ಸ್ನೇಹಿ ಜಿಮ್ ಪ್ರಾರಂಭಿಸುತ್ತೇವೆ. ಇಲ್ಲಿ ಜೋರಾದ ಸಂಗೀತ ಇರುವುದಿಲ್ಲ. ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಸಮಯ ನಿಗದಿ ಪಡಿಸುತ್ತೇವೆ. ಅಲ್ಲದೇ ಬೇರೆ ಬೇರೆ ತರಬೇತುದಾರರು ಇರುತ್ತಾರೆ’ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಇದು ಮುಸ್ಲಿಮರಿಗೆಂದೇ ಆರಂಭಿಸಲಾಗಿದೆಯೇ? ಎಂದು ಜಿಮ್ ಮಾಲೀಕನನ್ನು ಪ್ರಶ್ನಿಸಿದ್ದಾರೆ. ಈ ಬೆನ್ನಲ್ಲೇ ಮೂಲ ವಿಡಿಯೋ ಡಿಲೀಟ್ ಮಾಡಲಾಗಿದ್ದು, ‘ಈ ಜಿಮ್ ಅನ್ನು ಎಲ್ಲ ಧರ್ಮದವರಿಗೆ ಎಂದು ಆರಂಭಿಸಲಾಗಿದೆ. ಇದು ಮುಸ್ಲಿಮರಿಗೆ ಮಾತ್ರ ಅಲ್ಲ’ ಎಂದು ನವಾಜ್ ಸ್ಪಷ್ಟನೆ ನೀಡಿದ್ದಾರೆ.
==ದಿಲ್ಲಿ ಬೆನ್ನಲ್ಲೇ ಬಿಹಾರದಲ್ಲಿ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಢ: 5 ಬಲಿ
ಮುಜಫ್ಫರ್‌ನಗರ: ದೆಹಲಿ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ 21 ಮಂದಿ ಬಲಿ ಪಡೆದ ಬೆನ್ನಲ್ಲೇ ಬಿಹಾರದ ಮುಜಫ್ಫರ್‌ನಗರದ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಬ್ರಹ್ಮಾಪುರ ಪ್ರದೇಶದ ಪ್ರಸಾದ್ ಆಸ್ಪತ್ರೆಯಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ದುರ್ಘಟನೆ ಸಂಭವಿಸಿದೆ. ಘಟನೆ ನಡೆದಾಗ ಐಸಿಯುನಲ್ಲಿ 13-15 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 5 ರೋಗಿಗಳು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ಮೃತರ ಸಾವಿಗೆ ಸಿಎಂ ಸಾಮ್ರಾಟ್ ಚೌಧರಿ ಸಂತಾಪ ಸೂಚಿಸಿದ್ದು, 4 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.
==ಮಾರುತಿಯಿಂದ ದೇಶದ ಮೊದಲ ಫ್ಲೆಕ್ಸ್-ಫ್ಯುಯೆಲ್ ಕಾರು ಬಿಡುಗಡೆವ್ಯಾಗನಾರ್ ಆರ್ ಫ್ಲೆಕ್ಸ್-ಫ್ಯುಯೆಲ್ ಕಾರು ಬಿಡುಗಡೆನವದೆಹಲಿ: ಭಾರತದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ದೇಶದ ಮೊದಲ ಫ್ಲೆಕ್ಸ್-ಫ್ಯುಯೆಲ್ ಕಾರನ್ನು ಗುರುವಾರ ಬಿಡುಗಡೆ ಮಾಡಿದೆ. ವ್ಯಾಗನಾರ್ ಆರ್ ಮಾಡೆಲ್‌ನ ಈ ಕಾರು ಎಥೆನಾಲ್ ಮಿಶ್ರಿತ ಇಂಧನದಿಂದ ಚಲಿಸಬಲ್ಲದು.
ಈ ಫ್ಲೆಕ್ಸ್-ಪ್ಯುಯೆಲ್ ಕಾರಿನ ವಿಶೇಷತೆಯೇನೆಂದರೆ ಗ್ರಾಹಕರು ಈ ಕಾರನ್ನು ಇ20 ದಿಂದ ಇ100 ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಲ್ಲೂ ಸಂಚರಿಸಬಲ್ಲದಾಗಿದೆ. ಅಂದರೆ 1 ಲೀಟರ್ ಪೆಟ್ರೋಲ್‌ನಲ್ಲಿ ಶೇ.20 ಎಥೆನಾಲ್ ಮತ್ತು ಶೇ.80ರಷ್ಟು ಪೆಟ್ರೋಲ್‌ನಿಂದ ಹಿಡಿದು ಶೇ.100ರಷ್ಟು ಎಥೆನಾಲ್ ಇದ್ದರೂ ಕಾರು ಚಲಾಯಿಸಬಹುದು. ಇದಕ್ಕಾಗಿ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯಬೀಳುವುದಿಲ್ಲ. ಅಡ್ವಾನ್ಸ್ಡ್ ಇಸಿಯು ಕ್ಯಾಲಿಬರೇಷನ್‌ನಿಂದಾಗಿ ಇದೆಲ್ಲ ಸಾಧ್ಯವಾಗಿದೆ.ಈಗಾಗಲೇ ಮಾರುತಿಯ ಈ ಜನಪ್ರಿಯ ವ್ಯಾಗನಾರ್ ಬ್ರಾಂಡ್‌ನಡಿ ಸಿಎನ್‌ಜಿ ಮತ್ತು ಎಲ್‌ಪಿಜಿ ಇಂಧನ ಬಳಸುವ ಕಾರುಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ. ಇದೀಗ ಫ್ಲೆಕ್ಸ್-ಫ್ಯುಯೆಲ್ ವ್ಯಾಗನಾರ್ ಈ ಸಾಲಿಗೆ ಹೊಸ ಸೇರ್ಪಡೆಯಾಗಿದೆ.