ಸಾರಾಂಶ
ಆಪರೇಷನ್ ಸಿಂದೂರ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಪ್ರತೀಕಾರ ತೀರಿಸಿಕೊಂಡಿರುವ ಭಾರತ ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಮಾಡಲು ಹೊರಟಿದೆ
ನವದೆಹಲಿ: ಆಪರೇಷನ್ ಸಿಂದೂರ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಪ್ರತೀಕಾರ ತೀರಿಸಿಕೊಂಡಿರುವ ಭಾರತ ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಮಾಡಲು ಹೊರಟಿದೆ. ಉಗ್ರವಾದವನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಪ್ರಾಯ ರೂಪಿಸಲು ಸರ್ವಪಕ್ಷಗಳ ಹಲವು ನಿಯೋಗಗಳನ್ನು ವಿದೇಶಗಳಿಗೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇನ್ನೊಂದೆಡೆ ಪಹಲ್ಗಾಂ ನರಮೇಧಕ್ಕೆ ಕಾರಣವಾದ ಪಾಕಿಸ್ತಾನದ ಮೂಲದ ಎರಡು ಉಗ್ರ ಸಂಘಟನೆಗಳಾದ ಟಿಆರ್‌ಎಫ್ ಹಾಗೂ ಲಷ್ಕರ್ ಎ ತೊಯ್ಬಾ ಬಗ್ಗೆ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಾಕ್ಷ್ಯ ಸಮೇತ ಮಾಹಿತಿ ಒದಗಿಸಿದೆ.
ಪಾಕ್ ಬಣ್ಣ ಬಯಲು:
ಪಾಕ್ ವಿರುದ್ಧ ಬೃಹತ್ ರಾಜತಾಂತ್ರಿಕ ದಾಳಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ತಲಾ 5 ಸಂಸದರನ್ನು ಒಳಗೊಂಡ 5-6 ಸಂಸದರ ನಿಯೋಗವೊಂದನ್ನು ವಿಶ್ವದ ವಿವಿಧ ದೇಶಗಳಿಗೆ ರವಾನಿಸಲು ನಿರ್ಧರಿಸಿದೆ.
ಈ ನಿಯೋಗ ಮೇ 22ರಿಂದ ವಿದೇಶ ಪ್ರವಾಸ ಆರಂಭಿಸಲಿದ್ದು, ಅಮೆರಿಕ, ಬ್ರಿಟನ್, ದಕ್ಷಿಣ ಆಫ್ರಿಕಾ, ಕತಾರ್, ಯುಎಇ ಮತ್ತಿತರ ದೇಶಗಳಿಗೆ ಪ್ರವಾಸ ಮಾಡಲಿದೆ. ಭೇಟಿ ವೇಳೆ ಭಾರತ-ಪಾಕಿಸ್ತಾನ ಸಂಘರ್ಷ, ಆಪರೇಷನ್ ಸಿಂದೂರಕ್ಕೆ ಕಾರಣವಾದ ಅಂಶಗಳು, ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರು ವಿಷಯಗಳ ಕುರಿತು ವಿದೇಶಿ ಗಣ್ಯರಿಗೆ ಸಂಸದರು ವಿದೇಶಗಳಿಗೆ ವಿವರಣೆ ನೀಡಲಿದ್ದಾರೆ. ಈ ಮೂಲಕ ಪಾಕಿಸ್ತಾನದ ಬಂಡವಾಳ ಬಯಲು ಮಾಡುವ ಪ್ರಯತ್ನ ನಡೆಸಲಿದ್ದಾರೆ. ಈ ಸಂಬಂಧ ಈಗಾಗಲೇ ಸಂಸದರಿಗೆ ಆಹ್ವಾನ ಕಳುಹಿಸಲಾಗಿದ್ದು, ಹಿರಿಯ ಸಂಸದರಿಗೆ ಆಯಾ ನಿಯೋಗದ ನೇತೃತ್ವ ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎನ್‌ಸಿಪಿ (ಎಸ್‌ಪಿ), ಜೆಡಿಯು, ಬಿಜೆಡಿ, ಸಿಪಿಎಂ ಮತ್ತು ಇತರೆ ಕೆಲ ಪಕ್ಷಗಳ ನಾಯಕರಿಗೆ ಸಮಿತಿಯಲ್ಲಿ ಸ್ಥಾನ ಸಿಗಲಿದೆ. ಈ ಪೈಕಿ ವಿದೇಶ ವ್ಯವಹಾರಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ, ಕಾಂಗ್ರೆಸ್‌ನ ಶಶಿ ತರೂರ್, ಸಿಂದೂರ ಸಮರ್ಥಿಸಿ, ಪಾಕಿಸ್ತಾನದ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದ ಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಎರಡು ನಿಯೋಗಗಳ ನೇತೃತ್ವ ವಹಿಸುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರವು ಸಂಸದರ ನಿಯೋಗದ ಕುರಿತು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗದಿದ್ದರೂ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ವಿಶ್ವಸಂಸ್ಥೆಗೆ ಮಾಹಿತಿ:
ಇತ್ತೀಚಿನ ಪಹಲ್ಗಾಂ ನರಮೇಧದ ಹಿಂದಿನ ಕೈಗಳಾದ ಲಷ್ಕರ್ ಎ ತೊಯ್ಬಾ ಮತ್ತು ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಉಗ್ರ ಸಂಘಟನೆಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತ ಮಾಹಿತಿ ನೀಡಿದೆ. ಭಾರತೀಯ ನಿಯೋಗವು ಟಿಆರ್‌ಎಫ್ ಮತ್ತು ಎಲ್‌ಇಟಿ ನಡುವಿನ ಸಂಬಂಧವನ್ನು ದೃಢೀಕರಿಸುವ ಬಲವಾದ ಪುರಾವೆಗಳನ್ನು ಒದಗಿಸಿದೆ. ಅದರಲ್ಲಿ ಡಿಜಿಟಲ್ ಸಹಿಗಳು, ಹಣಕಾಸಿನ ವಹಿವಾಟು ಮತ್ತು ಭೌತಿಕ ಸಂಪರ್ಕಗಳು ಒಳಗೊಂಡಿವೆ. ಈ ಎಲ್ಲ ಸಾಕ್ಷ್ಯಗಳು, ಟಿಆರ್‌ಎಫ್ ಸಂಘಟನೆಯು ಎಲ್‌ಇಟಿಗಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಸ್ಪಷ್ಟಪಡಿಸಿವೆ.