ಸಾರಾಂಶ
ನವದೆಹಲಿ : ಸಂಸತ್ ಆವರಣದಲ್ಲಿ ಗುರುವಾರ ನಡೆದ ಕಾಂಗ್ರೆಸ್-ಬಿಜೆಪಿ ಸಂಸದರ ಸಂಘರ್ಷಕ್ಕೆ ಸಂಬಂಧಿಸಿದಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ದಿಲ್ಲಿ ಕ್ರೈಂ ಬ್ರಾಂಚ್ ಕೈಗೆತ್ತಿಕೊಂಡಿದೆ. ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸರು ಪ್ರಕರಣವನ್ನು ದೆಹಲಿಯ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾರೆ.
ಈ ಸಂಬಂಧ ರಾಹುಲ್ ಅವರನ್ನು ಶೀಘ್ರವೇ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಮತ್ತೊಂದೆಡೆ ಗಾಯಗೊಂಡಿರುವ ಇಬ್ಬರು ಸಂಸದರ ಹೇಳಿಕೆಯನ್ನು ಪೊಲೀಸರು ದಾಖಲಿಸುವ ಸಾಧ್ಯತೆಯಿದೆ.
ಐಸಿಯುನಲ್ಲಿ ಸಂಸದರು:
ಈ ನಡುವೆ ಗಲಾಟೆಯಲ್ಲಿ ಗಾಯಗೊಂಡಿದ್ದ ಬಿಜೆಪಿ ಸಂಸದರಾದ ಒಡಿಶಾದ ಪ್ರತಾಪ್ ಸಾರಂಗಿ, ಉತ್ತರ ಪ್ರದೇಶದ ಮುಕೇಶ್ ರಜಪೂತ್ ಆರೋಗ್ಯ ಸದ್ಯ ಸುಧಾರಿಸಿದೆ. ಆದರೂ ಇಬ್ಬರಿಗೂ ಶುಕ್ರವಾರ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.‘ಮುಕೇಶ್ ರಜಪೂತ್ ಅವರಿಗೆ ಇನ್ನೂ ಸ್ವಲ್ಪ ತಲೆ ತಿರುಗುವಿಕೆ ಮತ್ತು ತಲೆ ಭಾರವಿದೆ. ಸಾರಂಗಿ ಅವರಿಗೂ ಹಳೆಯ ಹೃದಯ ಸಮಸ್ಯೆಯಿದೆ. ಈಗಾಗಲೇ ಅವರ ಹೃದಯದಲ್ಲಿ ಸ್ಟಂಟ್ ಇದೆ. ಅವರನ್ನು ಐಸಿಯು ನಿಗಾದಲ್ಲಿ ಇಡಲಾಗಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಯಾವಾಗ ವಾರ್ಡ್‌ಗೆ ಸ್ಥಳಾಂತರಿಸಬೇಕು ಎಂದು ಹೇಳುತ್ತಾರೆ’ ಎಂದು ವೈದ್ಯರು ಹೇಳಿದ್ದಾರೆ.
ಹತಾಶೆಯಿಂದ ಎಫ್‌ಐಆರ್ ದಾಖಲು
‘ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಹತಾಶೆಯ ಸಂಕೇತವಾಗಿದೆ. ಅವರು ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ. ರಾಹುಲ್ ಜೀ ಎಂದಿಗೂ ಯಾರನ್ನೂ ತಳ್ಳಲು ಸಾಧ್ಯವಿಲ್ಲ. ನಾನು ಅವರ ಸಹೋದರಿ. ಅವರನ್ನು ಬಲ್ಲೆ. ಅಂತಹ ಕೆಲಸವನ್ನು ಅವರು ಎಂದಿಗೂ ಮಾಡಲು ಸಾಧ್ಯವಿಲ್ಲ’ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಈ ನಡುವೆ, ಕಾಂಗ್ರೆಸ್ ಸಂಸದ ಜೈರಾಂ ರಮೇಶ್, ‘ಬೇಕೆಂದೇ ಈ ಗದ್ದಲವನ್ನು ಬಿಜೆಪಿ ಸೃಷ್ಟಿಸಿದೆ’ ಎಂದು ಆರೋಪಿಸಿದ್ದಾರೆ.
ಸಂಸದರನ್ನು ದೂಡುವುದು ಗಂಡಸ್ತನವಲ್ಲ: ರಾಹುಲ್‌ಗೆ ರಿಜಿಜು ಚಾಟಿ
ನವದೆಹಲಿ: ಸಂಸತ್‌ನಲ್ಲಿ ಗುರುವಾರ ನಡೆದ ಸಂಸದರ ನೂಕಾಟಕ್ಕೆ ಘಟನೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದ್ದಾರೆ. ''''''''ಸಂಸದರನ್ನು ದೂರುವುದು ಗಂಡಸ್ತನವಲ್ಲ'''''''' ಎಂದು ಟೀಕಿಸಿದ್ದಾರೆ.ಎನ್‌ಡಿಟೀವಿಗೆ ಸಂದರ್ಶನ ನೀಡಿದ ಅವರು, ‘ಸಂಸತ್ತಿನಲ್ಲಿ ಮಾತಿನ ಚಕಮಕಿ 1952ರಿಂದಲೂ ಇತ್ತು. ಇದು ಹೊಸದೇನಲ್ಲ. ಆದರೆ ಘಟನೆಯ ಕಾರಣಕ್ಕೆ ಗಾಯವಾಯಿತು. ಪೊಲೀಸ್ ಕೇಸ್ ಆಯಿತು. ಇದು ದುರಾದೃಷ್ಟಕರ. ಸಂಸದರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿರೋಧ ಪಕ್ಷದ ನಾಯಕರು ಮಧ್ಯಪ್ರವೇಶಿಸ ಬಾರದಿತ್ತು. ರಾಹುಲ್ ಗಾಂಧಿಯವರು ಟೀ ಶರ್ಟ್ ಧರಿಸಿ ಸಂಸತ್‌ಗೆ ಬರುವುದು ಪುರುಷತ್ವ ಅಲ್ಲ. ಸ್ನಾಯುಶಕ್ತಿಯು ಉತ್ತಮ ಸಂಸದೀಯ ಪಟು ಎನ್ನುವುದರ ಸಂಕೇತವೂ ಅಲ್ಲ’ ಎಂದರು.
ರಾಜ್ಯಸಭೆ ಉತ್ಪಾದಕತೆ ಶೇ.40, ಲೋಕಸಭೆ ಉತ್ಪಾದಕತೆ ಶೇ.58
ಪಿಟಿಐ ನವದೆಹಲಿಜಾರ್ಜ್ ಸೊರೋಸ್ ವಿವಾದ, ಅದಾನಿ ಹಗರಣ, ಅಂಬೇಡ್ಕರ್ ಕುರಿತ ಗೃಹ ಸಚಿವ ಅಮಿತ್ ಶಾ ಹೇಳಿಕೆ, ಸಂಭಲ್ ಹಿಂಸಾಚಾರ ಹಾಗೂ ರಾಹುಲ್ ಗಾಂಧಿ ಅವರಿಂದ ಬಿಜೆಪಿ ಸಂಸದರ ಮೇಲೆ ಹಲ್ಲೆ- ಹೀಗೆ ವಿವಿಧ ವಿಷಯಗಳ ಕಾರಣ ಸುದ್ದಿ ಮಾಡಿದ ಸಂಸತ್ತಿನ ಚಳಿಗಾಲದ ಅಧಿವೇಶನ ಶುಕ್ರವಾರ ಅಂತ್ಯಗೊಂಡಿದೆ. ರಾಜ್ಯಸಭೆ ಕೇವಲ ಶೇ.40 ಉತ್ಪಾದಕತೆ ಹಾಗೂ ಲೋಕಸಭೆ ಶೇ.58 ಉತ್ಪಾದಕತೆ ದಾಖಲಿಸಿವೆ.
ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕೂಡ ಅಮಿತ್ ಶಾ, ರಾಹುಲ್ ಗಾಂಧಿ ವಿವಾದಗಳ ಕಾರಣ ಕಲಾಪ ಮುಂದೂಡಿಕೆ ಆಯಿತು. ಪದೇ ಪದೇ ಈ ರೀತಿ ಗದ್ದಲ ನಡೆಯುತ್ತಿರುವ ಕಾರಣ ಸಭಾಪತಿಗಳು ಬೇಸರಿಸಿ, ‘ವಿದೇಶಗಳು ನಮ್ಮ ಸಂಸದರ ವರ್ತನೆ ನೋಡುತ್ತಿದ್ದಾರೆ’ ಎಂದರು ಹಾಗೂ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.ಏಕದೇಶ-ಏಕ ಚುನಾವಣೆ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಕಳಿಸಿದ್ದು, ಈ ಅಧಿವೇಶನದ ಮಹತ್ವದ ಅಂಶವಾಗಿದೆ. ಕೆಲವು ವಿಧೇಯಕ ಅಂಗೀಕರಿಸಲಾಗಿದೆ. ಸಂವಿಧಾನ ಸ್ವೀಕಾರಕ್ಕೆ 75 ವರ್ಷ ಸಂದ ಕಾರಣ 4 ದಿನ ಅಬಾಧಿತ ಚರ್ಚೆ ನಡೆದಿದ್ದೇ ಈ ಕಲಾಪದ ಸಾಧನೆ. ಮಿಕ್ಕೆಲ್ಲ ಕಲಾಪಗಳು ಗದ್ದಲದಲ್ಲಿ ಆಹುತಿ ಆಗಿವೆ.
ರಾಜ್ಯಸಭೆ ಕಲಾಪ:ನ.25ರಿಂದ ಆರಂಭವಾಗಿದ್ದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಕೇವಲ 43.27 ತಾಸು ಚರ್ಚೆ ನಡೆದಿವೆ. ಇದರ ಒಟ್ಟು ಉತ್ಪಾದಕತೆ ಶೇ.40.03 ಮಾತ್ರ.
ಇನ್ನು ಲೋಕಸಭೆಯು ರಾಜ್ಯಸಭೆಗಿಂತ ಹೆಚ್ಚು ಉತ್ಪಾದಕತೆ ದಾಖಲಿಸಿದ್ದು, ಶೇ.57.87ರಷ್ಟು ಉತ್ಪಾದಕತೆ ದಾಖಲಿಸಿದೆ. ಸಂವಿಧಾನದ ಮೇಲೆ 16 ತಾಸು ಚರ್ಚೆ ನಡೆದಿದ್ದೇ ಇದಕ್ಕೆ ಅಧಿಕ ಕೊಡುಗೆ ನೀಡಿದೆ.20 ದಿನದ ಕಲಾಪದಲ್ಲಿ 12 ದಿನ ಮಾತ್ರ ಪ್ರಶ್ನೋತ್ತರ ಕಲಾಪ ನಡೆದಿದೆ. ಪ್ರತಿ ಕಲಾಪವೂ 10 ನಿಮಿಷ ಮೀರಿಲ್ಲ.