ಸಾರಾಂಶ
ಭಾಗಲ್ಪುರ : ಪ್ರಧಾನಿ ನರೇಂದ್ರ ಮೋದಿ ಅವರ ಗಯಾ ಭೇಟಿ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಮತ ಚೋರ ಬಿಹಾರಕ್ಕೆ ಬಂದರೂ ಮತ ಚೋರಿ ಬಗ್ಗೆ ಒಂದೂ ಮಾತನಾಡಲಿಲ್ಲ’ ಎಂದಿದ್ದಾರೆ.
ಭಾಗಲ್ಪುರದಲ್ಲಿ ಮತ ಅಧಿಕಾರ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಚುನಾವಣಾ ಆಯೋಗವು ನಿಮ್ಮ ಮತಗಳನ್ನು ಕದಿಯಲು ನಡೆಸಿದ ಪ್ರಯತ್ನವೇ ಮತಪಟ್ಟಿ ಪರಿಷ್ಕರಣೆ. ಅವರು ನಿಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ‘ಮತ ಚೋರ್’ ಗಯಾಜಿಗೆ ಬಂದಿದ್ದರು, ಆದರೆ ಚುನಾವಣಾ ಆಯೋಗದ ಸಹಾಯದಿಂದ ನಿಮ್ಮ ಸರ್ಕಾರ ಮತಗಳನ್ನು ಕದಿಯಲು ಮಾಡಿದ ಪ್ರಯತ್ನದ ಬಗ್ಗೆ ಅವರು ಒಂದು ಮಾತು’ ಆಡಲಿಲ್ಲ’ ಎಂದರು.
ಆಧಾರ್ ಪರಿಗಣಿಸಿ: ಚು.ಆಯೋಗಕ್ಕೆ ಸುಪ್ರೀಂ ಸೂಚನೆ
ನವದೆಹಲಿ : ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಯಿಂದ ಹೊರಗುಳಿಯಲ್ಪಟ್ಟಿರುವ 65 ಲಕ್ಷ ಮಂದಿಗೆ ಆಕ್ಷೇಪಣೆ ಸಲ್ಲಿಸಲು ಆನ್‌ಲೈನ್ ಮೂಲಕವೂ ಅವಕಾಶ ನೀಡಬೇಕು. ಚುನಾವಣಾ ಆಯೋಗ ಪಟ್ಟಿಮಾಡಿದ 11 ದಾಖಲೆಗಳು ಅಥವಾ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ನೀಡಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆಯೋಗಕ್ಕೆ ಶುಕ್ರವಾರ ಸ್ಪಷ್ಟ ನಿರ್ದೇಶನ ನೀಡಿದೆ.ಪ್ರಕರಣದ ವಿಚಾರಣೆ ನಡೆಸಿದ ನ್ಯಾ। ಸೂರ್ಯಕಾಂತ್ ಮತ್ತು ನ್ಯಾ। ಜೋಯ್‌ಮಾಲ್ಯ ಬಗಾಚಿ ಅವರಿದ್ದ ಪೀಠವು, ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕೈಬಿಡಲಾಗಿರುವ ಮತದಾರರ ಹೆಸರು ಮರು ಸೇರ್ಪಡೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ವಹಿಸಿವೆ ಎಂದು ಚಾಟಿ ಬೀಸಿತು.
65 ಲಕ್ಷ ಮತದಾರರನ್ನು ತೆಗೆದುಹಾಕಿದ್ದರೂ 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಯಾವುದೇ ಆಕ್ಷೇಪ ಸಲ್ಲಿಸಲು ಯಾಕೆ ಮುಂದೆ ಬಂದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿತು. ಜತೆಗೆ, ಎಲ್ಲ ರಾಜಕೀಯ ಪಕ್ಷಗಳು ತಮ್ಮ ಬೂತ್‌ಮಟ್ಟದ ಏಜೆಂಟರಿಗೆ ಮತದಾರರ ಕರಡುಪಟ್ಟಿಯಿಂದ ಕೈಬಿಡಲಾಗಿರುವವರ ಆಕ್ಷೇಪಣಾ ಅರ್ಜಿ ಸಲ್ಲಿಸಲು ನೆರವು ನೀಡಬೇಕು. ಒಂದು ವೇಳೆ ರಾಜಕೀಯ ಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಂಡಿದ್ದರೆ ಇಂಥ ಸಮಸ್ಯೆಗಳನ್ನು ತಪ್ಪಿಸಬಹುದಿತ್ತು ಎಂದು ಹೇಳಿತು.ಬಳಿಕ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸೆ.8ಕ್ಕೆ ಮುಂದೂಡಿತು.