ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಇಂದು 3 ಗಂಟೆ ಕುತೂಹಲಕಾರಿ ಪಾಡ್‌ ಕಾಸ್ಟ್‌

| N/A | Published : Mar 16 2025, 01:48 AM IST / Updated: Mar 16 2025, 06:57 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3 ತಾಸಿನ ಪಾಡ್‌ಕಾಸ್ಟ್‌ ಭಾನುವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3 ತಾಸಿನ ಪಾಡ್‌ಕಾಸ್ಟ್‌ ಭಾನುವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕೃತಕ ಬುದ್ಧಿಮತ್ತೆ ಸಂಶೋಧಕ ಹಾಗೂ ಖ್ಯಾತ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ ಅವರು ಮೋದಿ ಸಂದರ್ಶನ ನಡೆಸಿದ್ದಾರೆ.‘ಇದು ನಿಜಕ್ಕೂ ಫ್ರಿಡ್‌ಮನ್‌ ಅವರೊಂದಿಗಿನ ಆಕರ್ಷಕ ಸಂಭಾಷಣೆಯಾಗಿತ್ತು, ನನ್ನ ಬಾಲ್ಯ, ಹಿಮಾಲಯದಲ್ಲಿನ ವರ್ಷಗಳು ಮತ್ತು ಸಾರ್ವಜನಿಕ ಜೀವನದ ಪ್ರಯಾಣವನ್ನು ನೆನಪಿಸಿಕೊಳ್ಳುವುದು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ. ಟ್ಯೂನ್ ಮಾಡಿ ಮತ್ತು ಈ ಸಂವಾದದ ಭಾಗವಾಗಿರಿ!’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಫ್ರಿಡ್‌ಮನ್‌ ಟ್ವೀಟ್‌ ಮಾಡಿ, ‘ಇದು ನನ್ನ ಜೀವನದ ಅತ್ಯಂತ ಶಕ್ತಿಶಾಲಿ ಸಂಭಾಷಣೆಗಳಲ್ಲಿ ಒಂದಾಗಿದೆ’ ಎಂದಿದ್ದಾರೆ. ಅಲ್ಲದೆ, ‘ಮೋದಿ ನವರಾತ್ರಿ ವೇಳೆ 9 ದಿನ ಉಪವಾಸ ಮಾಡುತ್ತಾರೆ. ನಾನು ಕೂಡ ಮೋದಿ ಜತೆ ಮಾತಾಡುವ ಮುನ್ನ 3 ದಿನ ಉಪವಾಸ ಮಾಡಿದೆ’ ಎಂದಿದ್ದಾರೆ.

ಫ್ರಿಡ್‌ಮನ್ ಈ ಹಿಂದೆ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್, ಜೆಫ್ ಬೆಜೋಸ್ ಮತ್ತು ವೊಲೊಡಿಮಿರ್ ಜೆಲೆನ್ಸ್ಕಿ ಸೇರಿ ಉನ್ನತ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಪಾಡ್‌ಕಾಸ್ಟ್‌ ನಡೆಸಿದ್ದಾರೆ.

ಇತ್ತೀಚೆಗೆ ನವೋದ್ಯಮಿ ನಿಖಿಲ್‌ ಕಾಮತ್‌ ಜತೆ ಮೋದಿ ಪಾಡ್‌ಕಾಸ್ಟ್‌ ನಡೆಸಿದ್ದರು.