ನವದೆಹಲಿ: ದೇಶದಲ್ಲಿ ಬೇಸಿಗೆಯ ಬಿಸಿ ಹೆಚ್ಚಿ 48 ಡಿ.ಸೆ. ವರೆಗೂ ತಲುಪಿರುವ ನಡುವೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು, ಯಾವೆಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ.

ಮೋದಿ ಹೇಳಿದ್ದೇನು?:

- ಜಾಸ್ತಿ ನೀರು ಕುಡಿಯಿರಿ. ಹೊರಗೆ ಹೋಗುವಾಗ ನೀರನ್ನು ತೆಗೆದುಕೊಂಡು ಹೋಗಿ

-ಅನ್ಯರಿಗೂ ನೀರನ್ನು ನೀಡಿ ದಯೆ ತೋರಿಸಿ

-ತಲೆತಿರುಗುವಿಕೆ, ವಾಕರಿಕೆ, ಆಯಾಸವನ್ನು ನಿರ್ಲಕ್ಷಿಸಬೇಡಿ


-ಯಾರಲ್ಲಾದರೂ ಇಂತಹ ಲಕ್ಷಣ ಕಂಡುಬಂದರೆ ತಕ್ಷಣ ಸಹಾಯ ಮಾಡಿ.

-ಮಕ್ಕಳು, ವೃದ್ಧರು ಮತ್ತು ಬಿಸಿಲಲ್ಲಿ ಕೆಲಸ ಮಾಡುವವರು ಬಿಸಿಲಾಘಾತದಿಂದ ಸುರಕ್ಷಿತವಾಗಿರಿ

-ವೃದ್ಧರ ಆರೋಗ್ಯದ ಬಗ್ಗೆ ಆಗಾಗ ಗಮನಹರಿಸಿ ಪರಿಶೀಲಿಸುತ್ತಿರಿ

-ಮಧ್ಯಾಹ್ನ ಸುಡುಬಿಸಿಲಿರುವಾಗ ಹೊರಬರಬೇಡಿ. ಸಾಧ್ಯವಾದಾಗೆಲ್ಲಾ ವಿಶ್ರಮಿಸಿ

-ಮನೆ, ಅಂಗಡಿ, ಕಚೇರಿಗಳ ಹೊರಗೆ ಪ್ರಾಣಿ, ಪಕ್ಷಿಗಳಿಗಾಗಿ ಕುಡಿಯುವ ನೀರು ಇಡಿ

===

ಹಣದುಬ್ಬರದಿಂದ

ಜನ ಬೇಯುತ್ತಿದ್ದಾರೆ

ನಾವು ಬಿಸಿಲನ್ನು ಸಹಿಸಿಕೊಳ್ಳಬಲ್ಲೆವು, ಆದರೆ ಬಿಜೆಪಿ ಪ್ರಾಯೋಜಿತ ಹಣದುಬ್ಬರದ ಬೆಂಕಿಯಿಂದ ಸಾಮಾನ್ಯ ಜನರು ಬೆವರು ಸುರಿಸುತ್ತಿದ್ದಾರೆ. ಮೋದಿಯವರೇ, ನಿಮ್ಮ ಸ್ವಂತ ಸರ್ಕಾರದ ಲೂಟಿಯ ಬಗ್ಗೆ ನೀವು ಎಂದಿಗೂ ಏನನ್ನೂ ಏಕೆ ಹೇಳುವುದಿಲ್ಲ?

-ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್‌ ಅಧ್ಯಕ್ಷ