ಸಾರಾಂಶ
ನವದೆಹಲಿ: ಕೇಂದ್ರದಲ್ಲಿ ಎನ್‌ಡಿಎ ಹ್ಯಾಟ್ರಿಕ್ ಸಾಧಿಸಿದರೂ, ಅದರ ಸ್ಥಾನಬಲಕ್ಕೆ ಭಾರೀ ಪೆಟ್ಟು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಇನ್ನೊಂದು ಮಹತ್ವದ ಹೊಣೆ ವಹಿಸಿಕೊಳ್ಳುವಂತೆ ಒತ್ತಡ ಹೆಚ್ಚುತ್ತಿದೆ.
ಈ ಬಾರಿ 99 ಸ್ಥಾನ ಗೆದ್ದು, ಬಿಜೆಪಿ ನಂತರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ಗೆ ಅಧಿಕೃತ ವಿಪಕ್ಷ ಸ್ಥಾನ ಸಿಗಲಿದೆ. ಈ ಸ್ಥಾನವನ್ನು ಸ್ವತಃ ರಾಹುಲ್ ವಹಿಸಿಕೊಳ್ಳಬೇಕು ಎಂಬ ಆಗ್ರಹ ಪಕ್ಷದೊಳಗೆ ಹೆಚ್ಚಿದೆ.ಈ ಹಿಂದೆ ಎರಡು ಬಾರಿ ರಾಹುಲ್‌ಗೆ ಈ ಹುದ್ದೆಯ ಅವಕಾಶ ಇತ್ತಾದರೂ, ತಾವು ಪಕ್ಷದ ಅಧ್ಯಕ್ಷನಾಗಿರುವ ಕಾರಣ ಏಕಕಾಲದಲ್ಲಿ ಎರಡು ಹುದ್ದೆ ನಿರ್ವಹಿಸುವುದು ಸಾಧ್ಯವಿಲ್ಲ ಎಂದು ರಾಹುಲ್ ಅವಕಾಶ ದೂರ ತಳ್ಳಿದ್ದರು.
ಹೀಗಾಗಿ 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು 2019ರಲ್ಲಿ ಅಧೀರ್ ರಂಜನ್ ಚೌಧರಿ ಈ ಹೊಣೆ ಹೊತ್ತುಕೊಂಡಿದ್ದರು. ಆದರೆ ರಾಹುಲ್‌ಗೆ ಈ ಬಾರಿ ಅಂಥ ಯಾವುದೇ ಹೊಣೆ ಇಲ್ಲದ ಹಿನ್ನೆಲೆಯಲ್ಲಿ ಅವರೇ ವಿಪಕ್ಷ ನಾಯಕರಾಗಬೇಕೆಂಬ ಬೇಡಿಕೆ ಪಕ್ಷದೊಳಗೆ ಕೇಳಿಬಂದಿದೆ.ಕಳೆದ 10 ವರ್ಷಗಳಲ್ಲಿ ವಿಪಕ್ಷಗಳ ಮುಖವಾಣಿಯಾಗಿ ಕೆಲಸ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಕ್ಷಕ್ಕೆ ಗೆಲುವು ತಂದುಕೊಡಲಾಗದ ಎಂಬ ಹಣೆಪಟ್ಟಿಯೂ ಅವರಿಂದ ದೂರವಾಗಿದೆ. ಮುಂದಿನ ದಿನಗಳಲ್ಲಿ ಎನ್‌ಡಿಎ ವಿರುದ್ಧ ಮತ್ತಷ್ಟು ಸಂಘಟಿತ ಹೋರಾಟಕ್ಕೆ ರಾಹುಲ್ ನೇತೃತ್ವದ ಅವಶ್ಯಕವಿದೆ ಎಂಬ ಕಾರಣ ನೀಡಿ ಕಾಂಗ್ರೆಸ್ ನಾಯಕರು ರಾಹುಲ್‌ಗೆ ವಿಪಕ್ಷ ನಾಯಕರಾಗುವಂತೆ ಆಗ್ರಹ ಮಾಡಿದ್ದಾರೆ.ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಿಗೆ ಕೇಂದ್ರ ಸಚಿವ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಸಿಗುತ್ತದೆ.
ಕೇಂದ್ರ ಸರ್ಕಾರ ಮತ್ತು ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡುವಾಗ ವಿಪಕ್ಷ ನಾಯಕರಿಗೆ ಸದಸ್ಯತ್ವ ಇರುತ್ತದೆ.ಲೋಕಸಭೆಯ ಒಟ್ಟು ಸದಸ್ಯ ಬಲದ ಶೇ.10ರಷ್ಟು ಸ್ಥಾನ ಪಡೆದರೆ ಮಾತ್ರವೇ ಅಧಿಕೃತ ವಿಪಕ್ಷ ನಾಯಕನ ಸ್ಥಾನ ಮಾನ ಸಿಗುತ್ತದೆ. ಅಂದರೆ 55 ಸ್ಥಾನ ಗೆಲ್ಲಬೇಕು. 2014ರಲ್ಲಿ ಕೇವಲ 44 ಮತ್ತು 2019ರಲ್ಲಿ 51 ಸ್ಥಾನ ಗೆದ್ದ ಕಾರಣ ಕಾಂಗ್ರೆಸ್‌ಗೆ ಈ ಸ್ಥಾನ ಸಿಕ್ಕಿರಲಿಲ್ಲ.