ಆನೆ ದಾಳಿಗೆ 3 ಬಲಿ: ಯಾತ್ರೆ ಬಿಟ್ಟು ವಯನಾಡಿಗೆ ರಾಹುಲ್‌ ದೌಡು

| Published : Feb 18 2024, 01:32 AM IST

ಸಾರಾಂಶ

17 ದಿನದಲ್ಲಿ ಕಾಡಾನೆ ದಾಳಿಗೆ ವಯನಾಡಲ್ಲಿ 3 ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಸದರಾಗಿರುವ ರಾಹುಲ್‌ ಗಾಂಧಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸುತ್ತಿದ್ದಾರೆ.

ವಯನಾಡ್‌: ಕೇರಳದ ವಯನಾಡಿನಲ್ಲಿ ಆನೆ ಸೇರಿದಂತೆ ಕಾಡುಪ್ರಾಣಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಭಾರತ್‌ ಜೋಡೋ ನ್ಯಾಯ ಯಾತ್ರೆಯನ್ನು ಬಿಟ್ಟು ರಾಹುಲ್‌ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರ ವಯನಾಡಿಗೆ ದೌಡಾಯಿಸಿದ್ದಾರೆ.

ಪ್ರಸ್ತುತ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಾಗುತ್ತಿರುವ ಯಾತ್ರೆಯನ್ನು ಮೊಟಕುಗೊಳಿಸಿ ರಾಹುಲ್‌ ವಯನಾಡಿಗೆ ಆಗಮಿಸಿದ್ದಾರೆ. ಶುಕ್ರವಾರವಷ್ಟೇ ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಿಯೊಬ್ಬರು ಬಲಿಯಾಗಿದ್ದರು. ಇದರೊಂದಿಗೆ ಕಳೆದ 17 ದಿನದಲ್ಲಿ ಮೂರು ಜನರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಆನೆ ದಾಳಿಗೆ ತುತ್ತಾದವರನ್ನು ಭೇಟಿ ಮಾಡಲು ಮತ್ತು ವಯನಾಡು ಪ್ರದೇಶದಲ್ಲಿ ಉಂಟಾಗಿರುವ ಕಾಡುಪ್ರಾಣಿ- ಮಾನವ ಸಂಘರ್ಷದ ಪರಿಶೀಲನೆ ನಡೆಸಲು ರಾಹುಲ್‌ ವಯನಾಡಿಗೆ ತೆರಳಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಈ ನಡುವೆ ವಯನಾಡಲ್ಲಿ ಅರಣ್ಯ ಇಲಾಖೆ ವಿರುದ್ಧ ಜನರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಪುಲ್ಪಲ್ಲಿ ಎಂಬಲ್ಲಿ ಶಂಕಿತ ಹುಲಿಯ ದಾಳಿಯಲ್ಲಿ ಸಾವನ್ನಪ್ಪಿದ ಹಸುವನ್ನು ಅರಣ್ಯ ಇಲಾಖೆಯ ವಾಹನದ ಮೇಲೆ ಕಟ್ಟಿಹಾಕಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರು ಅಧಿಕಾರಿಗಳ ಮೇಲೆ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಕುರ್ಚಿಗಳನ್ನು ಎಸೆದು ಹಿಂಸಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಲಾಠಿ ಪ್ರಹಾರ ನಡೆಸಿದರು.