ಹೃದಯ ರಕ್ತನಾಳದಲ್ಲಿ ಊತ - ಸ್ಟಂಟ್‌ ಅಳವಡಿಕೆ ಯಶಸ್ವಿ : ಆಸ್ಪತ್ರೆಯಿಂದ ರಜನಿ ಮನೆಗೆ

| Published : Oct 05 2024, 01:34 AM IST / Updated: Oct 05 2024, 05:16 AM IST

ಸಾರಾಂಶ

ಹೃದಯ ರಕ್ತನಾಳದಲ್ಲಿ ಊತದಿಂದಾಗಿ ಆಸ್ಪತ್ರೆಗೆ ಸೇರಿದ್ದ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಹೀಗಾಗಿ ಗುರುವಾರ ತಡರಾತ್ರಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಚೆನ್ನೈ: ಹೃದಯ ರಕ್ತನಾಳದಲ್ಲಿ ಊತದಿಂದಾಗಿ ಆಸ್ಪತ್ರೆಗೆ ಸೇರಿದ್ದ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಹೀಗಾಗಿ ಗುರುವಾರ ತಡರಾತ್ರಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಹೃದಯದ ರಕ್ತನಾಳದಲ್ಲಿ ಊತ ಸಂಭವಿಸಿದ ಕಾರಣ ರಜನೀಕಾಂತ್ ಅವರನ್ನು ಸೆ.30ರಂದು ಚೆನ್ನೈನಲ್ಲಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆಯ ಬಳಿ ರಕ್ತನಾಳಕ್ಕೆ ಸ್ಟಂಟ್ ಅಳವಡಿಕೆ ಕಾರ್ಯ ನಡೆದಿತ್ತು. ಈ ಎಲ್ಲಾ ಚಿಕಿತ್ಸೆಗಳಿಗೂ ರಜನಿ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಆರೋಗ್ಯವು ಚೇತರಿಕೆ ಕಂಡಿದ್ದರಿಂದ ಅವರನ್ನು ಗುರುವಾರ ತಡರಾತ್ರಿ 11 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ತಿರುಪತಿ ಬೆನ್ನಲ್ಲೇ ಒಡಿಶಾದಲ್ಲಿ ಕಲಬೆರಕೆ ತುಪ್ಪ ಬಳಕೆ ಪತ್ತೆ 

ಕೇಂದ್ರ ಪಾರ: ತಿರುಪತಿ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ಬೆನ್ನಲ್ಲೇ ಒಡಿಶಾದ ಶ್ರೀ ಬಲದೇವ್ಜೆವ್ ದೇವಸ್ಥಾನದಲ್ಲಿ ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಅರ್ಚಕರಲ್ಲಿ ಒಬ್ಬರಾದ ಸರತ್‌ ಪಾತ್ರಿ ಎಂಬುವರು ದೇವಸ್ಥಾನದ ಅಡುಗೆ ಕೋಣೆಯಲ್ಲಿ ಕಲಬೆರಕೆ ತುಪ್ಪದ ಡಬ್ಬಿಗಳನ್ನು ಕಂಡು ಆಡಳಿತ ಸಮಿತಿಯ ಗಮನಕ್ಕೆ ತಂದಿದ್ದಾರೆ.

ನವರಾತ್ರಿಯ ವಿಶೇಷ ಪ್ರಸಾದ ತಯಾರಿಕೆಗೆ ಸರ್ಕಾರಿ ಒಡೆತನದ ಓಎಂಎಫ್‌ಇಡಿಯಿಂದ ಇಂದ ತುಪ್ಪದ 6 ಡಬ್ಬಿಗಳನ್ನು ತರಿಸಲಾಗಿತ್ತು. ಅವುಗಳ ಅಹಿತಕರ ವಾಸನೆ ಹಾಗೂ ಹುಳಿ ರುಚಿಯನ್ನು ಗಮನಿಸಿದ ಅಡುಗೆಯವ ಕೂಡ ಕಲಬೆರಕೆಯ ಶಂಕೆ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ 5 ಡಬ್ಬಿಗಳನ್ನು ಹಿಂದಿರುಗಿಸಲಾಗಿತ್ತು.

ರಾಜ್ಯಗಳಿಗೆ ಖನಿಜ ತೆರಿಗೆ ಹಕ್ಕು ತೀರ್ಪು ಮರುಪರಿಶೀಲನೆ ಇಲ್ಲ: ಕೇಂದ್ರದ ಅರ್ಜಿ ಆಲಿಕೆಗೆ ಸುಪ್ರೀಂ ನಕಾರ

ನವದೆಹಲಿ: ಗಣಿ ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವ ಆದೇಶದ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

‘ಆದೇಶದ ಮರುಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಅವಲೋಕಿಸಲಾಗಿದ್ದು, ಅದರಲ್ಲಿ ಏನೂ ತಪ್ಪಿಲ್ಲ’ ಎಂದು ಸಿಜೆಐ ನೇತೃತ್ವದ 8 ಸದಸ್ಯರ ಪೀಠ ಹೇಳಿದ್ದು, ಮುಕ್ತ ನ್ಯಾಯಾಲಯದಲ್ಲಿ ಅರ್ಜಿಗಳ ವಿಚಾರಣೆಯನ್ನು ತಿರಸ್ಕರಿಸಿದೆ. ಆದರೆ ಈ ಪ್ರಕರಣದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ। ನಾಗರತ್ನಾ, ಕೇಂದ್ರ ಮತ್ತು ರಾಜ್ಯಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. 

ಜೊತೆಗೆ ಮುಕ್ತ ನ್ಯಾಯಾಲಯದ ವಿಚಾರಣೆಗೆ ಅನುಮತಿಸಿದ್ದಾರೆ.ಖನಿಜಗಳ ಮೇಲೆ ತೆರಿಗೆ ವಿಧಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಮಹತ್ವದ ಆದೇಶವನ್ನು ಜು.25ರಂದು ಸುಪ್ರೀಂ ಕೋರ್ಟ್‌ 8:1ರ ಬಹುಮತದಿಂದ ಹೊರಡಿಸಿತ್ತು ಹಾಗೂ ಖನಿಜದ ಮೇಲೆ ಪಾವತಿಸುವ ರಾಯಧನ ತೆರಿಗೆಯಲ್ಲ ಎಂದಿತ್ತು. ಜೊತೆಗೆ ರಾಜ್ಯಗಳ ಈ ಅಧಿಕಾರದ ಮೇಲೆ ಮಿತಿಗಳನ್ನು ನಿಗದಿಪಡಿಸುವ ಸ್ವಾತಂತ್ರ್ಯವನ್ನು ಕೇಂದ್ರಕ್ಕೆ ನೀಡಿತ್ತು. ಇದು ಖನಿಜಭರಿತ ರಾಜ್ಯಗಳ ಆದಾಯ ವೃದ್ಧಿಗೆ ಸಹಕರಿಯಾಯಿತು.