ಕೇಂದ್ರ ಬಜೆಟ್ : ಸ್ಟಾಂಡರ್ಡ್‌ ಡಿಡೆಕ್ಷನ್, ತೆರಿಗೆ ಸ್ಲ್ಯಾಬ್‌ ಏರಿಕೆ, ₹17500 ತೆರಿಗೆ ಉಳಿತಾಯ

| Published : Jul 24 2024, 12:23 AM IST / Updated: Jul 24 2024, 05:10 AM IST

ಸಾರಾಂಶ

ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳು ಬದಲಾಗಬಹುದು, ಸ್ಟಾಂಡರ್ಡ್ ಡಿಡಕ್ಷನ್‌ ಮೊತ್ತದಲ್ಲಿ ಏರಿಕೆಯಾಗಬಹುದು ಎಂಬ ನಿರೀಕ್ಷೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಡೇರಿಸಿದ್ದಾರೆ.

ದೆಹಲಿ:  ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳು ಬದಲಾಗಬಹುದು, ಸ್ಟಾಂಡರ್ಡ್ ಡಿಡಕ್ಷನ್‌ ಮೊತ್ತದಲ್ಲಿ ಏರಿಕೆಯಾಗಬಹುದು ಎಂಬ ನಿರೀಕ್ಷೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಡೇರಿಸಿದ್ದಾರೆ. ಆದರೆ ಅದರಲ್ಲಿ ಒಂದು ಷರತ್ತು ಇದೆ. ಏನೆಂದರೆ- ಹೊಸ ತೆರಿಗೆ ಪದ್ಧತಿಯಡಿ ನೀವು ತೆರಿಗೆ ಪಾವತಿ ಮಾಡಿದರೆ ಮಾತ್ರ. ಹಳೆ ಪದ್ಧತಿಯನ್ನೇ ಈಗಲೂ ಬಳಸಿದರೆ ನಿಮಗೆ ಯಾವುದೇ ಲಾಭವಾಗದು. ಅದೇ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡರೆ ವರ್ಷಕ್ಕೆ 17500 ರು.ಗಳನ್ನು ಉಳಿಸಬಹುದು.

ಹೊಸ ತೆರಿಗೆ ಪದ್ಧತಿಯನ್ನು ಬಳಸುವ ಸಂಬಳದಾರರಿಗೆ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50 ಸಾವಿರ ರು.ನಿಂದ 75 ಸಾವಿರ ರು.ಗೆ ಏರಿಕೆ ಮಾಡಲಾಗಿದೆ. ಪಿಂಚಣಿದಾರರ ಕೌಟುಂಬಿಕ ಪಿಂಚಣಿ ಡಿಡಕ್ಷನ್‌ ಅನ್ನು 15 ಸಾವಿರ ರು.ನಿಂದ 25 ಸಾವಿರ ರು.ಗೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ನಾಲ್ಕು ಕೋಟಿ ವ್ಯಕ್ತಿಗಳು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಹೊಸ ತೆರಿಗೆ ಸ್ಲ್ಯಾಬ್‌:

ಹೊಸ ಆದಾಯ ತೆರಿಗೆ ಪದ್ಧತಿಯಡಿ ಸ್ಲ್ಯಾಬ್‌ಗಳನ್ನು ಕೂಡ ಪರಿಷ್ಕರಿಸಲಾಗಿದೆ. ಅದರ ಪ್ರಕಾರ- 3 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. 3ರಿಂದ 7 ಲಕ್ಷ ರು. ಆದಾಯಕ್ಕೆ ಶೇ.5, 7ರಿಂದ 10 ಲಕ್ಷ ರು. ಆದಾಯಕ್ಕೆ ಶೇ.10, 10ರಿಂದ 12 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.15, 12ರಿಂದ 15 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.20 ಹಾಗೂ 15 ಲಕ್ಷ ರು. ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಇರಲಿದೆ ಎಂದು ಹೇಳಿದ್ದಾರೆ.

ಈ ಬದಲಾವಣೆಗಳಿಂದಾಗಿ ಸಂಬಳದಾರ ನೌಕರರು ಹೊಸ ತೆರಿಗೆ ಪದ್ಧತಿಯಡಿ ವಾರ್ಷಿಕ 17,500 ರು.ಗಳನ್ನು ಉಳಿಸಬಹುದಾಗಿದೆ ಎಂದು ನಿರ್ಮಲಾ ವಿವರಿಸಿದ್ದಾರೆ.

ಏ.1ರಿಂದ ಜಾರಿಗೆ: 

ಹೊಸ ಆದಾಯ ತೆರಿಗೆ ಪದ್ಧತಿಯಡಿಯಲ್ಲಿ ಹೊಸ ಸ್ಲ್ಯಾಬ್‌ಗಳು 2024ರ ಏ.1ರಿಂದ ಜಾರಿಗೆ ಬರಲಿವೆ. 2025-26ನೇ ಸಾಲಿನ ಆದಾಯ ತೆರಿಗೆಗೆ ಅನ್ವಯವಾಗಲಿವೆ. ಹೊಸ ತೆರಿಗೆ ಪದ್ಧತಿಯನ್ನು ಮೂರನೇ ಎರಡರಷ್ಟು ತೆರಿಗೆದಾರರು ಬಳಸುತ್ತಿದ್ದಾರೆ. 2023-24ರಲ್ಲಿ 8.16 ಕೋಟಿ ತೆರಿಗೆದಾರರು ಈ ಪದ್ಧತಿಯನ್ನು ಬಳಕೆ ಮಾಡಿದ್ದಾರೆ ಎಂದು ನಿರ್ಮಲಾ ಅವರು ಮಾಹಿತಿ ನೀಡಿದ್ದಾರೆ.

 50 ಲಕ್ಷ ರು. ಮೇಲ್ಪಟ್ಟ ಆಸ್ತಿ ಮಾರಾಟಕ್ಕೆ 1% ಟಿಡಿಎಸ್‌ 

50 ಲಕ್ಷ ರು. ಹಾಗೂ ಅದಕ್ಕೂ ಹೆಚ್ಚಿನ ಸ್ಥಿರಾಸ್ತಿಯನ್ನು ಮಾರಾಟ ಮಾಡಿದರೆ ಶೇ.1ರಷ್ಟು ಟಿಡಿಎಸ್‌ ಅನ್ವಯವಾಗಲಿದೆ. ಹಲವಾರು ಖರೀದಿದಾರರು ಹಾಗೂ ಹಲವಾರು ಮಾರಾಟದಾರರು ಇದ್ದರೂ ವಹಿವಾಟಿಗೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಮಹಿಳೆಯರು ಆಸ್ತಿ ಖರೀದಿಸಲು ಕೇಂದ್ರದಿಂದ ಮತ್ತಷ್ಟು ಉತ್ತೇಜನ

ನವದೆಹಲಿ: ಮಹಿಳೆಯರು ಖರೀದಿಸುವ ಆಸ್ತಿಗಳ ಮೇಲಿನ ಸುಂಕವನ್ನು ಮತ್ತಷ್ಟು ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಲಿದೆ ಹಾಗೂ ಇದನ್ನು ನಗರಾಭಿವೃದ್ಧಿ ಯೋಜನೆಗಳ ಪ್ರಮುಖ ಅಂಶವನ್ನಾಗಿ ಮಾಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ತಮ್ಮ ಕೇಂದ್ರ ಬಜೆಟ್ ಭಾಷಣದಲ್ಲಿ ನಿರ್ಮಾಲಾ, ಹೆಚ್ಚಿನ ಸ್ಟ್ಯಾಂಪ್‌ ಡ್ಯೂಟಿ (ಮುದ್ರಾಂಕ ಶುಲ್ಕ) ವಿಧಿಸುವ ರಾಜ್ಯಗಳು, ಈ ಶುಲ್ಕವನ್ನು ಕಡಿತಗೊಳಿಸುವುದರ ಕಡೆಗೆ ಗಮನ ನೀಡಬೇಕು ಹಾಗೂ ಇದು ಎಲ್ಲಾ ಆಸ್ತಿ ಖರೀದಿಗಳಿಗೂ ಅನ್ವಯವಾಗಬೇಕು ಎಂದರು. ಇದೇ ವೇಳೆ ಮಹಿಳೆಯರು ಖರೀದಿಸುವ ಆಸ್ತಿ ಮೇಲಿನ ಸುಂಕ ಈಗಾಗಲೇ ಕಡಿಮೆ ಇದ್ದು, ಅದನ್ನು ಮತ್ತಷ್ಟು ಕಡಿತಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು.

ಹೆಚ್ಚಿನ ಮುದ್ರಾಂಕ ಶುಲ್ಕದ ಕಾರಣದಿಂದಲೇ ಮನೆಗಳ ಬೆಲೆ ಗಗನಕ್ಕೇರಿದೆ ಎನ್ನುವುದನ್ನು ಅರಿತಿರುವ ಕೇಂದ್ರವು, ಇದೇ ಕಾರಣಕ್ಕೆ ಭ್ರಷ್ಟಾಚಾರ ಹಾಗೂ ನಗದು ರೂಪದಲ್ಲಿ ಹೆಚ್ಚು ವಹಿವಾಟು ಆಗುತ್ತಿದೆ ಎಂದು ತಿಳಿಸಿದೆ.ಇದೇ ವೇಳೆ ಆಧಾರ್‌ ಸಂಖ್ಯೆ ಬದಲು ಆಧಾರ್‌ ನೋಂದಣಿ ಸಂಖ್ಯೆಯನ್ನು ನಮೂದಿಸುವ ಪದ್ಧತಿಯನ್ನು ಕೈಬಿಡಲು ಯೋಜಿಸಲಾಗಿದೆ ಎಂದು ತಿಳಿಸಿದರು.