ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯ : ಕೇಂದ್ರದ ವಿರುದ್ಧ ಕೇರಳದಲ್ಲಿ ಪಂಚರಾಜ್ಯಗಳ ಕಹಳೆ

| Published : Sep 13 2024, 01:31 AM IST / Updated: Sep 13 2024, 06:34 AM IST

ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯ : ಕೇಂದ್ರದ ವಿರುದ್ಧ ಕೇರಳದಲ್ಲಿ ಪಂಚರಾಜ್ಯಗಳ ಕಹಳೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಬ್ಬಿಸಿದ ಕೂಗಿಗೆ ಇದೀಗ ನಿಧಾನವಾಗಿ ಬೇರೆ ಬೇರೆ ರಾಜ್ಯಗಳ ಬೆಂಬಲ ಕೇಳಿಬರತೊಡಗಿದೆ.

 ತಿರುವನಂತಪುರಂ :  ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಬ್ಬಿಸಿದ ಕೂಗಿಗೆ ಇದೀಗ ನಿಧಾನವಾಗಿ ಬೇರೆ ಬೇರೆ ರಾಜ್ಯಗಳ ಬೆಂಬಲ ಕೇಳಿಬರತೊಡಗಿದೆ. ಕೇರಳದಲ್ಲಿ ಗುರುವಾರ ಈ ಬಗ್ಗೆ ಬಿಜೆಪಿಯೇತರ ಐದು ರಾಜ್ಯಗಳ ವಿತ್ತ ಸಚಿವರ ಸಮಾವೇಶ ನಡೆದಿದ್ದು, ಅದರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾಗವಹಿಸಿ, ಕೇಂದ್ರ ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಸರ್ಕಾರ ಸೆಸ್‌ ಹಾಗೂ ಸರ್‌ಚಾರ್ಜ್‌ಗಳನ್ನು ಹೆಚ್ಚೆಚ್ಚು ವಿಧಿಸುವ ಮೂಲಕ ರಾಜ್ಯಗಳ ತೆರಿಗೆ ಪಾಲನ್ನು (ಡಿವಿಸಿವ್‌ ಪೂಲ್‌) ಕಡಿಮೆ ಮಾಡುತ್ತಿದೆ’ ಎಂದು 16ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಗೆಂದು ಏರ್ಪಡಿಸಿದ್ದ ಸಮಾವೇಶವನ್ನು ಉದ್ಘಾಟಿಸಿ ಪಿಣರಾಯಿ ಆರೋಪಿಸಿದರು. ಸಿದ್ದರಾಮಯ್ಯ ಕೂಡ ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಎಂಟು ರಾಜ್ಯಗಳಿಗೆ ಪತ್ರ ಬರೆದು ಎಲ್ಲರೂ ಕೇಂದ್ರದ ವಿರುದ್ಧ ಒಗ್ಗಟ್ಟಾಗಲು ಕೋರಿದ್ದರು.

ಕರ್ನಾಟಕ ಸೇರಿ 5 ರಾಜ್ಯಗಳು ಭಾಗಿ:

ತಿರುವನಂತಪುರದಲ್ಲಿ ನಡೆದ ಸಮಾವೇಶದಲ್ಲಿ ಕರ್ನಾಟಕದಿಂದ ಸಚಿವ ಕೃಷ್ಣಬೈರೇಗೌಡ, ಕೇರಳದ ವಿತ್ತ ಸಚಿವ ಕೆ.ಎನ್‌.ಬಾಲಗೋಪಾಲ, ತೆಲಂಗಾಣದ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಪಂಜಾಬ್‌ ಸಚಿವ ಹರಪಾಲ್‌ ಸಿಂಗ್‌ ಚೀಮಾ, ತಮಿಳನಾಡಿನ ಸಚಿವ ತಂಗಂ ತೆಣ್ಣರಸು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಮಾಜಿ ವಿತ್ತ ಸಲಹೆಗಾರ ಡಾ.ಅರವಿಂದ ಸುಬ್ರಮಣಿಯನ್‌ ಅವರಂತಹ ಆರ್ಥಿಕ ತಜ್ಞರೂ ಭಾಗವಹಿಸಿದ್ದರು.

16ನೇ ವಿತ್ತ ಆಯೋಗ ಗಮನಿಸಲಿ:

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪಿಣರಾಯಿ, ಕೇಂದ್ರ ಸರ್ಕಾರದ ಸೆಸ್‌ ಹಾಗೂ ಸರ್‌ಚಾರ್ಜ್‌ಗಳು ಹೆಚ್ಚುತ್ತಿದ್ದು, ಅದರಿಂದಾಗಿ ರಾಜ್ಯಗಳಿಗೆ ಹಂಚುವ ತೆರಿಗೆಯ ಒಟ್ಟು ಮೊತ್ತ ಕಡಿಮೆಯಾಗುತ್ತಿದೆ. 16ನೇ ಹಣಕಾಸು ಆಯೋಗ ಇದನ್ನು ಗಮನಿಸಿ, ಕೇಂದ್ರ ಸರ್ಕಾರ ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆಯನ್ನು ಮರಳಿ ಹಂಚಿಕೆ ಮಾಡುವಾಗ ರಾಜ್ಯಗಳಿಗೆ ಹೆಚ್ಚು ಪಾಲು ಸಿಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯಗಳಿಗೆ ಕೇಂದ್ರವು ತೆರಿಗೆ ಹಂಚಿಕೆ ಮಾಡಲು ಬಳಸುವ ಒಟ್ಟಾರೆ ತೆರಿಗೆಯ ಮೊತ್ತವನ್ನು ಈಗಿನ ಶೇ.41ರಿಂದ ಶೇ.50ಕ್ಕೆ ಹೆಚ್ಚಿಸಬೇಕು ಎಂದು ಈ ಹಿಂದೆಯೂ ದಕ್ಷಿಣದ ರಾಜ್ಯಗಳು ಮನವಿ ಮಾಡಿವೆ. ಈಗಲಾದರೂ ಇದನ್ನು ಹಣಕಾಸು ಆಯೋಗ ಪರಿಗಣಿಸಬೇಕು. ದೇಶದಲ್ಲಿಂದು ಒಕ್ಕೂಟ ವ್ಯವಸ್ಥೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅನೇಕ ರಾಜ್ಯಗಳು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಕೋರ್ಟ್‌ಗೆ ಹೋಗುವ ಸಂದರ್ಭ ಎದುರಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.