ಸಾರಾಂಶ
ನವದೆಹಲಿ: ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ಕಾಲಮಿತಿ ನಿಗದಿಪಡಿಸಿರುವ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೀಗ ಸುಪ್ರೀಂ ಕೋರ್ಟ್‌ನ ಮುಂದೆ 14 ಪ್ರಶ್ನೆಗಳನ್ನು ಇರಿಸಿದ್ದಾರೆ.
ಸಂವಿಧಾನದಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಲು ಅವಕಾಶ ಇಲ್ಲದಿದ್ದರೂ ನ್ಯಾಯಾಲಯದ ನೀಡಿರುವ ಆದೇಶ ಪ್ರಶ್ನಿಸಿರುವ ರಾಷ್ಟ್ರಪತಿ, ತಮ್ಮ ವಿಶೇಷಾಧಿಕಾರ ಬಳಸಿ ಸುಪ್ರೀಂಗೆ 14 ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗಳಲ್ಲಿ ವಿಧೇಯಕ ಕುರಿತು ನಿರ್ಧರಿಸಲು ರಾಜ್ಯಪಾಲರ ಮುಂದಿರುವ ಅವಕಾಶಗಳೇನು? ಇಂಥ ನಿರ್ಧಾರದ ವೇಳೆ ಸಂಪುಟದ ಸಲಹೆಗೆ ಬದ್ಧವಾಗಿರಬೇಕೇ? ರಾಜ್ಯಪಾಲರ ನಿರ್ಧಾರವನ್ನು ನ್ಯಾಯಾಂಗ ವಿಮರ್ಶೆಗೆ ಒಳಪಡಬಹುದೇ? ನಿರ್ಧಾರ ಕೈಗೊಳ್ಳಲು ಸಂವಿಧಾನ ಗಡುವು ನೀಡದೇ ಇದ್ದರೂ ಅದಕ್ಕೆ ನ್ಯಾಯಾಂಗ ಕಾಲಮಿತಿ ವಿಧಿಸಬಹುದೇ ಎಂಬುದೂ ಸೇರಿದಂತೆ 14 ಪ್ರಶ್ನೆಗಳನ್ನು ಕೇಳಲಾಗಿದೆ.
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏ.8ರಂದು ಮಹತ್ವದ ತೀರ್ಪು ನೀಡಿತ್ತು. ಯಾವುದೇ ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ಗವರ್ನರ್‌ಗೆ 3 ತಿಂಗಳ ಕಾಲಮಿತಿ ನಿಗದಿಪಡಿಸಿತ್ತು. ಅಲ್ಲದೆ, ರಾಜ್ಯಪಾಲರಿಗೆ ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಒಂದಷ್ಟು ನಿರ್ದೇಶಗಳನ್ನೂ ನೀಡಿತ್ತು. ಇದು ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು.
ರಾಷ್ಟ್ರಪತಿಗಳ 14 ಪ್ರಶ್ನೆಗಳು
1. ಸಂವಿಧಾನದ 200ನೇ ವಿಧಿಯಡಿ ಸಲ್ಲಿಸಲಾದ ವಿಧೇಯಕ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರ ಮುಂದೆ ಇರುವ ಸಾಂವಿಧಾನಿಕ ಆಯ್ಕೆಗಳು ಏನೇನು?
2. ಸಂವಿಧಾನದ 200ನೇ ವಿಧಿಯಡಿ ಸಲ್ಲಿಕೆಯಾದ ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರು ತಮ್ಮ ಬಳಿ ಇರುವ ವಿಕಲ್ಪಗಳನ್ನು ಬಳಸುವಾಗ ಸಚಿವರ ಸಮಿತಿ ನೀಡಿದ ಸಲಹೆ ಮತ್ತು ನೆರವಿಗೆ ಬದ್ಧವಾಗಿರಬೇಕೇ?
3. ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ತೆಗೆದುಕೊಂಡ ನಿರ್ಧಾರಗಳ ಕುರಿತು ನ್ಯಾಯಾಂಗ ವಿಮರ್ಶೆ ಮಾಡಬಹುದೇ? ನ್ಯಾಯಾಲಯವು ರಾಜ್ಯಪಾಲರ ಆದೇಶ ಪ್ರಶ್ನಿಸಬಹುದೇ?
4. ಸಂವಿಧಾನದ 361ನೇ ವಿಧಿಯು ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ತೆಗೆದುಕೊಂಡ ನಿರ್ಧಾರಗಳ ಕುರಿತು ನ್ಯಾಯಾಂಗದ ವಿಮರ್ಶೆಗೆ ಸಂಪೂರ್ಣ ತಡೆ ನೀಡುತ್ತದೆಯೇ?
5. ರಾಜ್ಯಪಾಲರ ಅಧಿಕಾರ ಯಾವ ರೀತಿ ಚಲಾಯಿಸಬೇಕು ಮತ್ತು ಎಷ್ಟು ಸಮಯದೊಳಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಸಂವಿಧಾನದಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿದ್ದರೂ ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರ ಅಧಿಕಾರಕ್ಕೆ ನ್ಯಾಯಾಂಗದ ಆದೇಶದ ಮೂಲಕ ಕಾಲಮಿತಿ ನಿಗದಿಪಡಿಸಲು ಸಾಧ್ಯವಿದೆಯೇ ಮತ್ತು ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಮೂಲಕ ಆದೇಶ ನೀಡಬಹುದೇ?
6. ಸಂವಿಧಾನದ 201ನೇ ಅನುಚ್ಛೇದದ ಪ್ರಕಾರ ರಾಷ್ಟ್ರಪತಿಗಳ ವಿವೇಕಾಧಿಕಾರ ನ್ಯಾಯಿಕ ವಿಮರ್ಶೆಗೆ ಒಳಪಡಲು ಸಾಧ್ಯವೇ?
7. ಸಂವಿಧಾನದ 143ನೇ ಅನುಚ್ಛೇದವು ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್‌ನ ಸಲಹೆ ಪಡೆಯಲು ಅವಕಾಶ ನೀಡುತ್ತದೆ. ರಾಜ್ಯಪಾಲರು ಯಾವುದೇ ವಿಧೇಯಕವನ್ನು ರಾಷ್ಟ್ರಪತಿಗಳ ಬಳಿ ಕಳುಹಿಸಿಕೊಟ್ಟಾಗ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಸಲಹೆ ಪಡೆಯಬಹುದೇ?
8. ಸಂವಿಧಾನವು ರಾಷ್ಟ್ರಪತಿಗಳ ಅಧಿಕಾರ ಬಳಕೆಗೆ ಯಾವುದೇ ಸಮಯಮಿತಿ ನಿಗದಿಪಡಿಸಿಲ್ಲ. ನ್ಯಾಯಾಲಯಗಳು ನ್ಯಾಯಿಕ ಆದೇಶಗಳ ಮೂಲಕ ಸಮಯ ಮಿತಿ ನಿಗದಿಪಡಿಸಬಹುದೇ? ಸಂವಿಧಾನದ 201ನೇ ಅನುಚ್ಛೇದದ ಪ್ರಕಾರ ರಾಷ್ಟ್ರಪತಿಗಳು ತಮ್ಮ ಹಕ್ಕುಗಳನ್ನು ಹೇಗೆ ಬಳಸಬೇಕು ಎಂದೂ ನ್ಯಾಯಾಲಯಗಳು ಹೇಳಬಹುದೇ?
9 ಸಂವಿಧಾನದ 143ನೇ ಅನುಚ್ಛೇದವು ರಾಷ್ಟ್ರಪತಿಗೆ ಸುಪ್ರೀಂ ಕೋರ್ಟ್‌ನ ಸಲಹೆ ಪಡೆಯಲು ಅವಕಾಶ ನೀಡುತ್ತದೆ.
10. ಸಂವಿಧಾನದ 200, 201ನೇ ಅನುಚ್ಛೇದದ ಪ್ರಕಾರ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ನಿರ್ಧಾರಗಳು ಕಾನೂನು ರಚನೆಯಾಗುವ ಮೊದಲೇ ಕಾನೂನು ವಿಮರ್ಶೆಗೆ ಒಳಪಡುತ್ತದೆಯೇ? ನ್ಯಾಯಾಲಯ ಯಾವುದೇ ವಿಧೇಯಕ ಕಾನೂನಾಗಿ ಬದಲಾಗುವ ಮೊದಲೇ ಅದರ ಕುರಿತು ತೀರ್ಪು ನೀಡಬಹುದೇ?
11. ಸಂವಿಧಾನದ ಅನುಚ್ಛೇದ 142ರ ಅಡಿ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಸಾಂವಿಧಾನಿಕ ಕಾರ್ಯ ಮತ್ತು ಆದೇಶವನ್ನು ಬದಲಾಯಿಸಲು ಸಾಧ್ಯವಿದೆಯೇ?
12. ರಾಜ್ಯವಿಧಾನಮಂಡಲದಿಂದ ರಚಿತವಾದ ಕಾನೂನು ರಾಜ್ಯಪಾಲರ ಅನುಮೋದನೆಯಿಲ್ಲದೆ ಜಾರಿಯಾಗಲು ಸಾಧ್ಯವಿದೆಯೇ?
13. ಸಂವಿಧಾನದ 145(3)ನೇ ಅನುಚ್ಛೇದದ ಪ್ರಕಾರ, ಸಾಂವಿಧಾನಿಕ ವಿಮರ್ಶೆಗೆ ಸಂಬಂಧಿಸಿದ ಮಹತ್ವದ ವಿಚಾರದ ವಿಚಾರಣೆಯು ಐವರು ನ್ಯಾಯಾಧೀಶರ ಪಂಚಪೀಠದ ಮುಂದೆಯೇ ನಡೆಯಬೇಕು. ಹೀಗಾಗಿ ತನ್ನ ಮುಂದೆ ಬರುವ ಯಾವುದೇ ವಿಚಾರ ಸಾಂವಿಧಾನಿಕ ವಿಮರ್ಶೆಗೆ ಸಂಬಂಧಿಸಿದ್ದೋ ಅಥವಾ ಅಲ್ಲವೋ ಎಂದು ಮೊದಲು ನಿರ್ಧರಿಸುವುದು ಸುಪ್ರೀಂ ಕೋರ್ಟ್‌ನ ಯಾವುದೇ ಪೀಠಕ್ಕೆ ಅನಿವಾರ್ಯತೆ ಇಲ್ಲವೇ?
14. 142ನೇ ಅನುಚ್ಛೇದದ ಪ್ರಕಾರ ಸುಪ್ರೀಂ ಕೋರ್ಟ್‌ನ ಅಧಿಕಾರವು ಪ್ರಕ್ರಿಯಾತ್ಮಕ ಕಾನೂನಿನ ವಿಚಾರಕ್ಕಷ್ಟೇ ಸೀಮಿತವೇ ಅಥವಾ 142ನೇ ಅನುಚ್ಛೇದವು ಸಾಂವಿಧಾನ ಅಥವಾ ಅಸ್ತಿತ್ವದಲ್ಲಿರುವ ಕಾನೂನಿನ ವಿಧಿಗಳ ವಿರುದ್ಧವಾಗಿ ಆದೇಶ ನೀಡಲು, ನಿರ್ದೇಶನ ನೀಡಲು ಅನುಮತಿ ನೀಡುತ್ತದೆಯೇ? ಸಂವಿಧಾನದ 131ನೇ ಅನುಚ್ಛೇದದ ಅಡಿಯ ಮೊಕದ್ದಮೆಗಳನ್ನು ಹೊರತುಪಡಿಸಿ ಸಂವಿಧಾನವು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದವನ್ನು ಪರಿಹರಿಸಲು ತಡೆಯುತ್ತದೆಯೇ?