ಕರ್ರೆಗುಂಟ ಗುಡ್ಡ ಈಗ ನಕ್ಸಲ್‌ ಮುಕ್ತ : ಅತಿ ದೊಡ್ಡ ಕಾರ್‍ಯಾಚರಣೆ ಯಶಸ್ವಿ

| N/A | Published : May 02 2025, 12:10 AM IST / Updated: May 02 2025, 04:30 AM IST

ಕರ್ರೆಗುಂಟ ಗುಡ್ಡ ಈಗ ನಕ್ಸಲ್‌ ಮುಕ್ತ : ಅತಿ ದೊಡ್ಡ ಕಾರ್‍ಯಾಚರಣೆ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಛತ್ತೀಸ್‌ಗಢ -ತೆಲಂಗಾಣ ಗಡಿಯಲ್ಲಿನ, ಸಮುದ್ರ ಮಟ್ಟದಿಂದ 5000 ಅಡಿ ಎತ್ತರದಲ್ಲಿರುವ ಕರ್ರೆಗುಂಟ ಗುಡ್ಡವನ್ನು ಮಾವೋವಾದಿಗಳ ನಿಯಂತ್ರಣದಿಂದ ಮುಕ್ತಗೊಳಿಸುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿವೆ.

ನವದೆಹಲಿ : ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿನ, ಸಮುದ್ರ ಮಟ್ಟದಿಂದ 5000 ಅಡಿ ಎತ್ತರದಲ್ಲಿರುವ ಕರ್ರೆಗುಂಟ ಗುಡ್ಡವನ್ನು ಮಾವೋವಾದಿಗಳ ನಿಯಂತ್ರಣದಿಂದ ಮುಕ್ತಗೊಳಿಸುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿವೆ. ಒಂಬತ್ತು ದಿನಗಳ ನಕ್ಸಲ್‌ ವಿರೋಧಿ ಕಾರ್ಯಾಚರಣೆ ಬಳಿಕ ಭದ್ರತಾಪಡೆಗಳು ಬೆಟ್ಟದಲ್ಲಿ ತ್ರಿವರ್ಣ ಧ್ವಜ ಹಾರಿಸಿವೆ. 

ಕರ್ರೆಗಟ್ಟ ಬೆಟ್ಟವು ಹಿದ್ಮಾ, ದೇವಾ, ದಾಮೋದರ್‌, ಆಜಾದ್‌ ಮತ್ತು ಸುಜಾತ ಅವರಂಥ ಕುಖ್ಯಾತ ನಕ್ಸಲರುಗಳ ಅಡಗುತಾಣವಾಗಿತ್ತು. ನಕ್ಸಲ್‌ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿತ್ತು. ಇದೀಗ ಭದ್ರತಾಪಡೆಗಳು ಆ ಬೆಟ್ಚವನ್ನು ನಕ್ಸಲ್‌ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿವೆ.

ಸುಮಾರು 500 -1000 ನಕ್ಸಲರು ಈ ಬೆಟ್ಟದಲ್ಲಿ ಸಭೆ ಸೇರಲಿದ್ದಾರೆಂಬ ಮಾಹಿತಿ ಆಧರಿಸಿ ಏ.21ರಂದು ಭದ್ರತಾಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ದೇಶದ ಇತಿಹಾಸದಲ್ಲೇ ಅತಿದೊಡ್ಡ ಎನ್ನಲಾದ ಈ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್‌, ಡ್ರೋನ್‌ಗಳನ್ನೂ ಬಳಸಲಾಗಿತ್ತು. ಪೊಲೀಸರು ಸೇರಿ 24 ಸಾವಿರ ಭದ್ರತಾ ಪಡೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.

ಈ ಕಾರ್ಯಾಚರಣೆ 9 ದಿನಗಳ ಬಳಿಕ ದೊಡ್ಡ ಯಶಸ್ಸು ಕಂಡಿದ್ದು, 800 ಚದರ ಕಿ.ಮೀ ವ್ಯಾಪ್ತಿಯ ಇಡೀ ಬೆಟ್ಟ ಪ್ರದೇಶವನ್ನು ಭದ್ರತಾ ಪಡೆಗಳು ತಮ್ಮ ವಶಕ್ಕೆ ಪಡೆದುಕೊಂಡಿವೆ. ಇದು ನಕ್ಸಲರ ಕಾರ್ಯಾಚರಣೆ ಬಿದ್ದ ದೊಡ್ಡ ಪೆಟ್ಟು ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಅರಣ್ಯದಲ್ಲಿ ಅಡಗಿರಬಹುದಾದ ನಕ್ಸಲರಿಗಾಗಿ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆ ಮುಂದುವರೆಸಿವೆ.

2024ರ ಬಳಿಕ ಭದ್ರತಾ ಪಡೆಗಳು ಛತ್ತೀಸ್‌ಗಢವೊಂದರಲ್ಲೇ 350ಕ್ಕೂ ಹೆಚ್ಚು ನಕ್ಸಲರನ್ನು ಹೊಡೆದುರುಳಿಸಿವೆ. ಈ ಪೈಕಿ ಈ ವರ್ಷವೊಂದರಲ್ಲೇ 128 ನಕ್ಸಲರು ಹತರಾಗಿದ್ದಾರೆ. 300 ನಕ್ಸಲರು ಈವರೆಗೆ ಶರಣಾಗಿದ್ದಾರೆ.