ಸಾರಾಂಶ
ಶಿಕ್ಷಣ ಮತ್ತು ಉದ್ಯೋಗಕ್ಕೆ ಇರುವ ಶೇ.50ರಷ್ಟು ಮೀಸಲು ಮಿತಿ ರದ್ದು ಮಾಡಬೇಕು. ತಮಿಳುನಾಡು ಸರ್ಕಾರ ಶೆ.78ರಷ್ಟು ಮೀಸಲು ನೀಡಬಹುದಾದರೆ ಅದನ್ನು ಮಹಾರಾಷ್ಟ್ರದಲ್ಲಿ ಏಕೆ ಜಾರಿಗೆ ತರಲಾಗದು ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಒತ್ತಾಯಿಸಿದ್ದಾರೆ.
ಮುಂಬೈ: ಶಿಕ್ಷಣ ಮತ್ತು ಉದ್ಯೋಗಕ್ಕೆ ಇರುವ ಶೇ.50ರಷ್ಟು ಮೀಸಲು ಮಿತಿ ರದ್ದು ಮಾಡಬೇಕು. ತಮಿಳುನಾಡು ಸರ್ಕಾರ ಶೆ.78ರಷ್ಟು ಮೀಸಲು ನೀಡಬಹುದಾದರೆ ಅದನ್ನು ಮಹಾರಾಷ್ಟ್ರದಲ್ಲಿ ಏಕೆ ಜಾರಿಗೆ ತರಲಾಗದು ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಒತ್ತಾಯಿಸಿದ್ದಾರೆ. ಅಲ್ಲದೆ ಇಂಥ ಮಿತಿ ತೆಗೆದು ಹಾಕುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಸಾಂಗ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪವಾರ್ ಇಂಥದ್ದೊಂದು ಬೇಡಿಕೆ ಮುಂದಿಟ್ಟಿದ್ದಾರೆ.
ಆದರೆ ಪವಾರ್ ಬೇಡಿಕೆಯನ್ನು ಸಂವಿಧಾನ ಶಿಲ್ಪಿಮತ್ತು ಮೀಸಲು ನೀತಿ ಹರಿಹಾರ ಡಾ. ಬಿ.ಆರ್. ಅಂಬೇಡ್ಕರ್ ಮೊಮ್ಮಗ, ಪ್ರಕಾಶ್ ಅಂಬೆಡ್ಕರ್ ‘ಬೌದ್ಧಿಕ ದಿವಾಳಿತನದ ಸಂಕೇತ’ ಎಂದು ಟೀಕಿಸಿದ್ದಾರೆ.
ಮೀಸಲು ಎಂಬುದು ಅಭಿವೃದ್ಧಿಯ ವಿಚಾರವಲ್ಲ. ಶೇ.75ರಷ್ಟು ಮೀಸಲು ಕೇಳುವುದು ಜನರಿಗೆ ಸುರಕ್ಷಿತ ಜೀವನ ಒದಗಿಸುವ ಜವಾಬ್ದಾರಿಯಿಂದ ದೂರ ಓಡುವುದಕ್ಕೆ ಸಮ. ಹಾಗೆ ನೀಡುವುದಿದ್ದರೆ ಮೊದಲು ನಿಮ್ಮದೇ ಪ್ರಾಬಲ್ಯ ಇರುವ ಮಹಾರಾಷ್ಟ್ರ ಸಹಕಾರ ಸಂಸ್ಥೆಗಳಲ್ಲಿ ಶೇ.75ರಷ್ಟು ಮೀಸಲು ನೀಡಿ ಎಂದು ಸವಾಲು ಹಾಕಿದ್ದಾರೆ.