ಸಾರಾಂಶ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 18 ದಿನಗಳನ್ನು ಕಳೆದಿರುವ ಭಾರತೀಯ ಶುಭಾಂಶು ಶುಕ್ಲಾ ಹಾಗೂ ಇತರೆ ಮೂವರು ಗಗನಯಾತ್ರಿಗಳು ಐಎಸ್‌ಎಸ್‌ನಿಂದ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಪ್ರವೇಶಿಸಿ, ಧರೆಯತ್ತ ತಮ್ಮ 22 ತಾಸುಗಳ ಪ್ರಯಾಣವನ್ನು ಆರಂಭಿಸಿದ್ದಾರೆ.
ನವದೆಹಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 18 ದಿನಗಳನ್ನು ಕಳೆದಿರುವ ಭಾರತೀಯ ಶುಭಾಂಶು ಶುಕ್ಲಾ ಹಾಗೂ ಇತರೆ ಮೂವರು ಗಗನಯಾತ್ರಿಗಳು ಐಎಸ್‌ಎಸ್‌ನಿಂದ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಪ್ರವೇಶಿಸಿ, ಧರೆಯತ್ತ ತಮ್ಮ 22 ತಾಸುಗಳ ಪ್ರಯಾಣವನ್ನು ಆರಂಭಿಸಿದ್ದಾರೆ.
ಭಾರತೀಯ ಕಾಲಮಾನ ಸೋಮವಾರ ಮಧ್ಯಾಹ್ನ 2.37ಗೆ ಗಗನಯಾತ್ರಿಗಳು ನೌಕೆಯನ್ನು ಏರಿದ್ದು, ಅದು 4:45ಕ್ಕೆ ಅನ್‌ಡಾಕ್ (ಐಎಸ್‌ಎಸ್‌ನಿಂದ ಬೇರ್ಪಡುವಿಕೆ) ಆಗಿದೆ ಹಾಗೂ ಭೂಮಿಯತ್ತ ಪಯಣ ಆರಂಭಿಸಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನೌಕೆ ಭೂಸ್ಪರ್ಶ ಮಾಡಲಿದೆ.
ನಿರ್ಗಮನ ಪ್ರಕ್ರಿಯೆಯನ್ನು ನಾಸಾ ಬಾಹ್ಯಾಕಾಶ ಕೇಂದ್ರದಿಂದ ನೇರ ಪ್ರಸಾರ ಮಾಡಲಾಗಿದೆ.
ಐಎಸ್‌ಎಸ್‌ನಲ್ಲಿ 433 ಗಂಟೆ ಕಳೆದು, 288 ಬಾರಿ ಭೂಮಿಗೆ ಪ್ರದಕ್ಷಿಣೆ ಹಾಕಿದ್ದ ಶುಕ್ಲಾ, ಪೆಗ್ಗಿ ವಿಟ್ಸನ್, ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ, ಟಿಬೋರ್ ಕಾಪು ಅವರನ್ನು ಭಾನುವಾರ ಅಧಿಕೃತವಾಗಿ ಬೀಳ್ಕೊಡಲಾಗಿತ್ತು.
ಇದೇ ವೇಳೆ ನೀರನ್ನು ಬಳಸಿ ಶೂನ್ಯ ಗುರುತ್ವದ ಪ್ರಯೋಗವನ್ನು ಶುಭಾಂಶು ನಡೆಸಿದ ಪ್ರಯೋಗವನ್ನು ಬಿಡುಗಡೆ ಮಾಡಲಾಗಿದೆ.
ಭೂಸ್ಪರ್ಶ ಪ್ರಕ್ರಿಯೆ ಹೇಗೆ?:
ಅನ್‌ಡಾಕಿಂಗ್ ಆದಬಳಿಕ ನೌಕೆಯು ಐಎಸ್‌ಎಸ್‌ನಿಂದ ದೂರ ಸರಿಯಲು ಹಲವು ಸುತ್ತಿನಲ್ಲಿ ಎಂಜಿನ್ ಕೆಲಸ ಮಾಡುತ್ತದೆ. ಭೂಮಿಯ ವಾತಾವರಣದ ಪ್ರವೇಶಕ್ಕೆ ಮುಂಚಿತವಾಗಿ ಹೀಟ್‌ಶೀಲ್ಡ್‌ಅನ್ನು ಮುಂದಕ್ಕೆ ತಿರುಗಿಸಲಾಗುತ್ತದೆ. ಇದು ಬಾಹ್ಯಾಕಾಶ ನೌಕೆಯನ್ನು 1,600 ಡಿಗ್ರಿ ಸೆಲ್ಸಿಯಸ್ ತಾಪದಿಂದ ರಕ್ಷಿಸುತ್ತದೆ.
2 ಹಂತಗಳಲ್ಲಿ ಪ್ಯಾರಾಚೂಟ್ ನಿಯೋಜನೆಯಾಗುತ್ತದೆ. ಮೊದಲು ಸುಮಾರು 5.7 ಕಿ.ಮೀ ಎತ್ತರದಲ್ಲಿ ನೌಕೆಯನ್ನು ಸ್ಥಿರಗೊಳಿಸುವ ಪ್ಯಾರಾಚ್ಯೂಟ್‌ಗಳು ತೆರೆದುಕೊಂಡರೆ, ನಂತರ 2 ಕಿ.ಮೀ ಎತ್ತರದಲ್ಲಿ ಮುಖ್ಯ ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತವೆ.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನೌಕೆಯು ಅಮೆರಿಕದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸ್ಪ್ಲ್ಯಾಷ್ ಡೌನ್ ಆಗಲಿದೆ. ಅದನ್ನು ಬಳಿಕ ವಿಶೇಷ ದೋಣಿಯಲ್ಲಿ ದಡಕ್ಕೆ ಸಾಗಿಸಲಾಗುವುದು.
ವಾಪಸಾತಿಯ ಬಳಿಕ ಗಗನಯಾತ್ರಿಗಳ ದೇಹ ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಅವರಿಗಾಗಿ 7 ದಿನ ಪುನಶ್ಚೇತನ ಕಾರ್ಯಕ್ರಮ ನಡೆಸಲಾಗುವುದು. ನಂತರ ಅವರು ಸಾರ್ವಜನಿಕರ ಭೇಟಿಗೆ ಲಭ್ಯರಿರುತ್ತಾರೆ.