ಶಬರಿಮಲೆ ದೇಗುಲದ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಳ್ಳಾರಿಯ ಚಿನ್ನದ ವ್ಯಾಪಾರಿ ಸೇರಿ ಇಬ್ಬರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

- ರೊದ್ದಂ ಜ್ಯುವೆಲ್ಲರಿ ಮಾಲೀಕನ ಬಂಧನ- ಕೇರಳ ಎಸ್‌ಐಟಿಯಿಂದ ಕಾರ್ಯಾಚರಣೆ

---

- ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿ ಎಂಬಾತ ಶಬರಿಮಲೆಯಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ- ದೇಗುಲದ ಚಿನ್ನದ ಕವಚಗಳನ್ನು ಮರುಲೇಪನ ಮಾಡಿಸಿಕೊಡುವುದಾಗಿ ನಂಬಿಸಿ ಅವನ್ನು ಪಡೆದಿದ್ದ- ವಾಪಸ್‌ ಕೊಡುವಾಗ 4 ಕೇಜಿ ಚಿನ್ನ ಕಡಿತವಾಗಿತ್ತು. ಅದರಲ್ಲಿ 400 ಗ್ರಾಂ ಚಿನ್ನ ಬಳ್ಳಾರಿಗೆ ಬಂದಿತ್ತು- ಬಳ್ಳಾರಿ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಆ ಚಿನ್ನವನ್ನು ಪೊಟ್ಟಿ ಹಸ್ತಾಂತರಿಸಿದ್ದ ಆರೋಪ ಬಂದಿತ್ತು- ಆ ಪ್ರಕರಣ ಸಂಬಂಧ ಈ ಹಿಂದೆ ಕೇರಳ ಎಸ್‌ಐಟಿ ಬಳ್ಳಾರಿಯಲ್ಲಿ ದಾಳಿ ನಡೆಸಿತ್ತು. ಈಗ ವ್ಯಾಪಾರಿ ಸೆರೆ

---

ತಿರುವನಂತಪುರಂ/ಬಳ್ಳಾರಿ: ಶಬರಿಮಲೆ ದೇಗುಲದ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಳ್ಳಾರಿಯ ಚಿನ್ನದ ವ್ಯಾಪಾರಿ ಸೇರಿ ಇಬ್ಬರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತರ ಹೆಸರು ಚೆನ್ನೈ ಸ್ಮಾರ್ಟ್‌ ಕ್ರಿಯೇಷನ್ಸ್ ಕ್ರಿಯೇಷನ್ಸ್‌ ಸಿಇಒ ಪಂಕಜ್‌ ಭಂಡಾರಿ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮಾಲೀಕ ಗೋವರ್ಧನ್‌. ಇಬ್ಬರನ್ನೂ ಬಂಧಿಸಿ ತಿರುವನಂತಪುರದ ಕ್ರೈಂ ಬ್ರಾಂಚ್‌ಗೆ ಕರೆತರಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೇರಿದೆ.

ಆರೋಪವೇನು?:

2019ರಲ್ಲಿ, ಈ ಹಿಂದೆ ಶಬರಿಮಲೆಯಲ್ಲಿ ಅರ್ಚಕನಾಗಿ ಸೇವೆ ಸಲ್ಲಿಸಿದ್ದ ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿ ವಿಗ್ರಹಗಳ ಚಿನ್ನಲೇಪಿತ ಕವಚಗಳ ಮರುಲೇಪನ ಕಾರ್ಯ ವಹಿಸಿಕೊಂಡಿದ್ದ. ಮರುಲೇಪನದ ಬಳಿಕ ಅವುಗಳನ್ನು ಮರಳಿಸುವಾಗ ಸುಮಾರು 4 ಕೆಜಿ ಚಿನ್ನದಲ್ಲಿ ಕಡಿತವುಂಟಾಗಿತ್ತು. ಈ ವೇಳೆ, ಈ ಪೈಕಿ 400 ಗ್ರಾಂ ಚಿನ್ನವನ್ನು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಪೊಟ್ಟಿ ಹಸ್ತಾಂತರಿಸಿದ್ದ ಎಂದು ಆರೋಪಿಸಲಾಗಿದೆ. ಹೀಗಾಗಿ ಗೋವರ್ಧನ್‌ರ ಬಂಧನವಾಗಿದೆ. ಈ ಹಿಂದೆ ಗೋವರ್ಧನ್‌ ಅವರ ಬಳ್ಳಾರಿ ಚಿನ್ನದಂಗಡಿ ಮೇಲೆ ಕೇರಳ ಎಸ್‌ಐಟಿ ದಾಳಿ ಮಾಡಿತ್ತು.

ಮರುಲೇಪನ ಮಾಡಿದ ಚೆನ್ನೈ ಮೂಲದ ಸ್ಮಾರ್ಟ್‌ ಕ್ರಿಯೇಶನ್ಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಕಜ್‌ ಭಂಡಾರಿ ಅವರ ಕಂಪನಿಯಲ್ಲಿ ಕವಚಗಳ ಎಲೆಕ್ಟ್ರೋಪ್ಲೇಟಿಂಗ್‌ ಮಾಡಲಾಗಿತ್ತು.

ಈಗಾಗಲೇ ಕೇಸಲ್ಲಿ ಪೊಟ್ಟಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಇ.ಡಿ. ತನಿಖೆ ಹಾದಿ ಸುಗಮ:

ಇನ್ನೊಂದೆಡೆ, ಚಿನ್ನ ನಾಪತ್ತೆ ಪ್ರಕರಣದಲ್ಲಿ ಎಸ್‌ಐಟಿ ಮತ್ತು ಕೇರಳ ಪೊಲೀಸದು ದಾಖಲಿಸಿರುವ ಎಫ್‌ಐಆರ್‌ಗಳ ಪ್ರತಿಯನ್ನು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಹಸ್ತಾಂತರಿಸಲು ಶುಕ್ರವಾರ ಕೇರಳ ವಿಚಕ್ಷಣ ನ್ಯಾಯಾಲಯ ಅನುಮತಿಸಿದೆ. ಇದರೊಂದಿಗೆ, ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಯ ತನಿಖೆ ನಡೆಸಲು ಇ.ಡಿ.ಗೆ ಹಾದಿ ಸುಗಮವಾಗಿದೆ.