ಸಾರಾಂಶ
ಕೇಪ್ ಕೆನವೆರಲ್: ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ದಲ್ಲಿ ಸಿಲುಕಿದ್ದ ಭಾರತ ಮೂಲದ ಬಾಹ್ಯಾಕಾಶ ಸುನಿತಾ ವಿಲಿಯಮ್ಸ್ ಮತ್ತು ನಾಸಾದ ಬಾಹ್ಯಾಕಾಶ ಯಾನಿ ಬುಚ್ ವಿಲ್ಮೋರ್ ಅವರು ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3 ಗಂಟೆಗೆ ಭೂಮಿಗೆ ಮರಳಲಿದ್ದಾರೆ.
ಎಲ್ಲವೂ ಪೂರ್ವ ಯೋಜನೆಯಂತೆ ನಡೆದರೆ ಸುನಿತಾ, ಬುಚ್ ಜೊತೆಗೆ ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಸಹ ಆಕಾಶದಿಂದ ಧರೆಗಿಳಿಯಲಿದ್ದಾರೆ. ಈ ನಾಲ್ವರು ಗಗನಯಾತ್ರಿಗಳನ್ನು ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಕಂಪನಿಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಭೂಮಿಗೆ ಕರೆತರಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿ ನೀಡಿದೆ.
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 8.30ಕ್ಕೆ ಐಎಸ್‌ಎಸ್‌ನಿಂದ ನೌಕೆ ಹೊರಡಲಿದೆ. ಬುಧವಾರ ಮುಂಜಾನೆ 3 ಗಂಟೆ ಫ್ಲೋರಿಡಾದ ಸಮುದ್ರದ ಮೇಲೆ ನೌಕೆಯು ಇಳಿಯಲಿದೆ. ಅಲ್ಲಿಂದ ವಿಶೇಷ ದೋಣಿಗಳ ಮೂಲಕ ಕರಾವಳಿಗೆ ಆಗಮಿಸಲಿದ್ದಾರೆ. ಇದರ ಸಂಪೂರ್ಣ ಪ್ರಕ್ರಿಯೆಯನ್ನು ನಾಸಾ ನೇರ ಪ್ರಸಾರ ಮಾಡಲಿದೆ.
ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಇತ್ತೀಚೆಗೆ ಫ್ಲೋರಿಯಾದ ಕೆನಡಿ ಬಾಹ್ಯಾಕಾಶ ನೆಲೆಯಿಂದ ಉಡ್ಡಯನಗೊಂಡ 29 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿತ್ತು.
ಸುನಿತಾ ಮತ್ತು ಬುಚ್ 8 ದಿನಗಳ ಕೆಲಸಕ್ಕೆಂದು ಐಎಸ್‌ಎಸ್‌ಗೆ ತೆರಳಿದ್ದರು. ಅದರೆ ಅವರು ತೆರಳಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರ ಆಗಮನ ಪದೇ ಪದೇ ಮುಂದೂಡಿಕೆಯಾಗಿ 8 ತಿಂಗಳಷ್ಟು ವಿಸ್ತರಣೆಗೊಂಡಿತ್ತು.