ಸಾರಾಂಶ
ಚೆನ್ನೈ: ಹಿಂದಿ ಹೇರಿಕೆ, ಎನ್‌ಇಪಿ ಜಾರಿ, ಅನುದಾನ ಸೇರಿದಂತೆ ನಾನಾ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೇರಾನೇರ ಸಂಘರ್ಷಕ್ಕೆ ಇಳಿದಿರುವ ತಮಿಳುನಾಡಿನ ಡಿಎಂಕೆ ಸರ್ಕಾರ, ಇದೀಗ ಭಾರತದ ಅಧಿಕೃತ ರುಪಾಯಿ ಚಿಹ್ನೆಗೇ ಕೊಕ್ ನೀಡಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದು ಬಜೆಟ್ ಪ್ರತಿಯಲ್ಲಿ ದೇವನಾಗರಿ ಲಿಪಿಯಲ್ಲಿ ಬರೆಯಲಾದ ಅಧಿಕೃತ ರುಪಾಯಿ ಚಿಹ್ನೆಯಾದ ₹ ಬದಲಿಗೆ ತಮಿಳಿನಲ್ಲಿ ರುಬಾಯಿ ಎಂದು ಬರೆಯಲು ಬಳಸುವ ಪದದ ಮೊದಲ ಅಕ್ಷರವನ್ನು ಮುದ್ರಿಸಿದೆ. ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆಯುವ ಡಿಎಂಕೆ ಸರ್ಕಾರದ ಈ ಕ್ರಮ ಭಾರೀ ವಿವಾದಕ್ಕೂ ಕಾರಣವಾಗಿದೆ. ತಮಿಳಿನಲ್ಲಿ ರುಪಾಯಿ ಚಿಹ್ನೆ ಬರೆಯಬಾರದು ಎಂದೇನಿಲ್ಲ ಎಂದು ತನ್ನ ನಡೆಯನ್ನು ಡಿಎಂಕೆ ಸರ್ಕಾರ ಸಮರ್ಥಿಸಿಕೊಂಡಿದ್ದರೆ, ಇದು ಅಧಿಕೃತ ರುಪಾಯಿ ಚಿಹ್ನೆ ರೂಪಿಸಿದ ತಮಿಳುನಾಡು ಮೂಲದ ವ್ಯಕ್ತಿಗೆ ಮಾಡಿದ ಅವಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಿಡಿಕಾರಿದ್ದಾರೆ.
ಚಿಹ್ನೆಗೆ ಕೊಕ್:
ಮಾ.14ರಂದು ಮಂಡನೆಯಾಗಲಿರುವ ತಮಿಳುನಾಡು ಬಜೆಟ್‌ಗೆ ಸಂಬಂಧಿಸಿದಂತೆ ‘#ದ್ರಾವಿಡನ್ ಮಾದರಿ ಮತ್ತು #ಟಿಎನ್‌ಬಜೆಟ್2025’ ಎಂಬ ಹ್ಯಾಷ್‌ಟ್ಯಾಗ್ ನೊಂದಿಗೆ ತಮಿಳುನಾಡು ಸರ್ಕಾರ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ 2023-24ನೇ ಸಾಲಿನ ಬಜೆಟ್‌ನಲ್ಲಿ ರುಪಾಯಿ ಚಿಹ್ನೆ ಬಳಸಿದ್ದನ್ನು ಪ್ರದರ್ಶಿಸಿದ್ದರೆ, 2024-25ನೇ ಬಜೆಟ್‌ನಲ್ಲಿ ರುಪಾಯಿ ಚಿಹ್ನೆ ಕುರಿತ ದೇವನಾಗರಿಕ ಲಿಪಿ ಬದಲಾಗಿ ತಮಿಳಿನ ‘ರು’ ಅಕ್ಷರವನ್ನು ಬಳಸಲಾಗಿದೆ.
ಇದೇ ಮೊದಲ ಬಾರಿಗೆ ತಮಿಳುನಾಡು ಸರ್ಕಾರವು ರಾಷ್ಟ್ರೀಯ ಕರೆನ್ಸಿಯ ಚಿಹ್ನೆಯನ್ನು ತಿರಸ್ಕರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿ ಕೇಂದ್ರದ ಜತೆಗೆ ತಿಕ್ಕಾಟ ನಡೆಯುತ್ತಿರುವ ಹೊತ್ತಿನಲ್ಲೇ ತಮಿಳುನಾಡು ಸರ್ಕಾರ ಈ ಬದಲಾವಣೆ ಮಾಡಿದೆ.
ಈ ನಡುವೆ ತಮಿಳುನಾಡು ಸರ್ಕಾರದ ಕ್ರಮವನ್ನು ಡಿಎಂಕೆ ವಕ್ತಾರ ಸರವಣನ್ ಸಮರ್ಥಿಸಿಕೊಂಡಿದ್ದಾರೆ. ಇದು ಅಧಿಕೃತ ರುಪಾಯಿ ಚಿಹ್ನೆಯ ತಿರಸ್ಕಾರ ಅಲ್ಲ. ಬದಲಾಗಿ ತಮಿಳುಭಾಷೆಗೆ ಉತ್ತೇಜನ ನೀಡುವ ಪ್ರಯತ್ನವಾಗಿದೆ ಎಂದಿದ್ದಾರೆ.
ಬಿಜೆಪಿ ಟೀಕೆ:
ತಮಿಳುನಾಡು ಸರ್ಕಾರದ ಈ ಕ್ರಮವನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ತಮಿಳು ವ್ಯಕ್ತಿಯೇ ವಿನ್ಯಾಸಗೊಳಿಸಿದ ಭಾರತದ ಅಧಿಕೃತ ರುಪಾಯಿ ಚಿಹ್ನೆಗೆ ತಮಿಳುನಾಡು ಸರ್ಕಾರ ಅವಮಾನ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ತಮಿಳು ವ್ಯಕ್ತಿಯೊಬ್ಬ ಸಿದ್ಧಪಡಿಸಿದ ರುಪಾಯಿ ಚಿಹ್ನೆಯನ್ನು ಇಡೀ ಭಾರತವೇ ಒಪ್ಪಿಕೊಂಡು ಕರೆನ್ಸಿಯ ಭಾಗವಾಗಿಸಿದೆ. ಡಿಎಂಕೆ ನಾಯಕನ ಪುತ್ರನೇ ಇದನ್ನು ವಿನ್ಯಾಸಗೊಳಿಸಿದ್ದಾನೆ. ಆದರೆ ಸ್ಟಾಲಿನ್ ಅವರು ರಾಷ್ಟ್ರಮಟ್ಟದಲ್ಲಿ ತಮಿಳಿಗರನ್ನು ನಗೆಪಾಟಲಿಗೀಡಾಗುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಕೂಡ ತಮಿಳುನಾಡು ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಕ್ಕಿನ ಹೆಸರಲ್ಲಿ ಜನರನ್ನು ಎತ್ತಿಕಟ್ಟುವಂಥ ಮೂರ್ಖತನದ ಕೆಲಸವನ್ನು ಸ್ಟಾಲಿನ್ ಅವರು ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಸ್ಟಾಲಿನ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಇದು ಹಾಸ್ಯಾಸ್ಪದ. ಡಿಎಂಕೆ ಮಾಜಿ ಶಾಸಕನ ಪುತ್ರನೇ ವಿನ್ಯಾಸಗೊಳಿಸಿದ ರುಪಾಯಿ ಚಿಹ್ನೆಗೇ ಇದೀಗ ಸ್ಟಾಲಿನ್ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಡಿಎಂಕೆ ನಾಯಕ ಪುತ್ರ ರಚಿಸಿದ್ದ ರುಪಾಯಿ ಚಿಹ್ನೆ
ದೇಶವೇ ಅಪ್ಪಿ, ಒಪ್ಪಿಕೊಂಡಿರುವ ರುಪಾಯಿ ಚಿಹ್ನೆಯನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಮುಖಂಡನೊಬ್ಬನ ಪುತ್ರ ಎಂಬುದು ವಿಶೇಷ. ಐಐಟಿ ಪ್ರೊಫೆಸರ್ ಮತ್ತು ಡಿಎಂಕೆ ಮಾಜಿ ಶಾಸಕ ಎನ್.ಧರ್ಮಲಿಂಗಂ ಅವರ ಪುತ್ರ ಉದಯ್ ಕುಮಾರ್ ಧರ್ಮಲಿಂಗಂ ಅವರು ಸದ್ಯ ಭಾರತ ಅಧಿಕೃತವಾಗಿ ಬಳಸುತ್ತಿರುವ ರುಪಾಯಿ ಚಿಹ್ನೆಯ ಹಿಂದಿನ ಕರ್ತೃ. 2010ರ ಜು.15ರಂದು ಆಗಿನ ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಭಾರತೀಯ ಕರೆನ್ಸಿಯಲ್ಲಿ ಬಳಕೆಯಲ್ಲಿರುವ ಹಾಲಿ ರುಪಾಯಿ ಚಿಹ್ನೆಯನ್ನು ಪರಿಚಯಿಸಿತು.
ರುಪಾಯಿ ಚಿಹ್ನೆಗಾಗಿ ಸರ್ಕಾರವು ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿದ್ದು, ಅದರಲ್ಲಿ ಆಗ ಐಐಟಿ ಮುಂಬೈನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಉದಯ್ ಕುಮಾರ್ ಕುಮಾರ್ ಪಾಲ್ಗೊಂಡಿದ್ದರು. ನೂರಾರು ಸ್ಪರ್ಧಿಗಳಲ್ಲಿ ಉದಯ್ ಕುಮಾರ್ ಅವರ ವಿನ್ಯಾಸವನ್ನು ಸರ್ಕಾರ ಅಧಿಕೃತ ಚಿಹ್ನೆಯಾಗಿ ಬಳಸಿಕೊಳ್ಳಲು ಆಯ್ಕೆಮಾಡಿಕೊಂಡಿತ್ತು. ದೇವನಾಗರಿ ಮತ್ತು ರೋಮನ್ ಅಕ್ಷರಗಳನ್ನು ಆಧಾರವಾಗಿಟ್ಟುಕೊಂಡು ಭಾರತದ ಹೊಸ ರುಪಾಯಿ ಚಿಹ್ನೆಯನ್ನು ರೂಪಿಸಿದ್ದಾಗಿ ಉದಯ್ ಕುಮಾರ್ ಹೇಳಿಕೊಂಡಿದ್ದರು. ದೇವನಾಗರಿಯಲ್ಲಿ ರುಪಯ್ಯಾಗೆ ‘ರಾ’ ಮತ್ತು ರೋಮನ್‌ನ ರುಪೀ ‘ಆರ್’ ಅಕ್ಷರವನ್ನು ಜೋಡಿಸಿ ಅಂತಿಮ ವಿನ್ಯಾಸ ರೂಪಿಸಲಾಗಿದೆ. ಈ ಮೂಲಕ ರುಪಾಯಿ ಚಿಹ್ನೆಗೆ ದೇಸಿ ಮತ್ತು ಅಂತಾರಾಷ್ಟ್ರೀಯ ಗುರುತು ನೀಡಲಾಗಿದೆ ಎಂದು ಅವರು ಹೇಳಿಕೊಂಡಿದ್ದರು.