ಜಿಮ್‌ನಲ್ಲಿ ಕಸ ಗುಡಿಸುತ್ತಿದ್ದ ವ್ಯಕ್ತಿ ಈಗ ಸ್ಥಳೀಯ ಬಾಡಿ ಬಿಲ್ಡಿಂಗ್‌ನಲ್ಲಿ ಚಾಂಪಿಯನ್‌!

| N/A | Published : Aug 21 2025, 01:00 AM IST

ಜಿಮ್‌ನಲ್ಲಿ ಕಸ ಗುಡಿಸುತ್ತಿದ್ದ ವ್ಯಕ್ತಿ ಈಗ ಸ್ಥಳೀಯ ಬಾಡಿ ಬಿಲ್ಡಿಂಗ್‌ನಲ್ಲಿ ಚಾಂಪಿಯನ್‌!
Share this Article
  • FB
  • TW
  • Linkdin
  • Email

ಸಾರಾಂಶ

ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಇಲ್ಲಿನ ಘಟನೆಯೊಂದು ಉದಾಹರಣೆಯಾಗಿದೆ. ಜಿಮ್‌ಗಳಲ್ಲಿ ಕಸ ಗುಡಿಸಿ, ಸ್ವಚ್ಛತೆ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಪರಿಶ್ರಮದಿಂದ ಸ್ಥಳೀಯ ಬಾಡಿ ಬಿಲ್ಡಿಂಗ್‌ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ.

ಲಖನೌ: ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಇಲ್ಲಿನ ಘಟನೆಯೊಂದು ಉದಾಹರಣೆಯಾಗಿದೆ. ಜಿಮ್‌ಗಳಲ್ಲಿ ಕಸ ಗುಡಿಸಿ, ಸ್ವಚ್ಛತೆ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಪರಿಶ್ರಮದಿಂದ ಸ್ಥಳೀಯ ಬಾಡಿ ಬಿಲ್ಡಿಂಗ್‌ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ. ಸನ್ನಿ ಎಂಬಾತ ಜಿಮ್‌ಗಳಲ್ಲಿ ಸ್ವಚ್ಛತೆ ಮಾಡುವಾಗ ಇತರರು ವ್ಯಾಯಾಮ ಮಾಡುವುದು ನೋಡಿ ಆಸೆಯಾಗಿ, ತಾನು ಹೀಗೆ ಆಗಬೇಕು ಎಂದು ನಿಶ್ಚಯಿಸಿದ್ದಾನೆ. ಬಳಿಕ ಅದಕ್ಕೆ ಅವರ ಸ್ನೇಹಿತರೊಬ್ಬರು ಮನೆಯಲ್ಲಿಯೇ ತರಬೇತಿ ಕೊಡಿಸಿ, ದೇಹವನ್ನು ಕಟ್ಟುಮಸ್ತಾಗಿದ್ದಾರೆ. ಬಳಿಕ ಸನ್ನಿ ಸ್ಥಳೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಗೆಲುವು ಸಾಧಿಸಿದ್ದಾರೆ.

ರಾಷ್ಟ್ರಧ್ವಜದ ಬದಲಿಗೆ ಕಾಂಗ್ರೆಸ್‌ ಧ್ವಜ ಹಾರಿಸಿದ ಕೇರಳ ಸಿಪಿಎಂ ಘಟಕ

ಕೊಚ್ಚಿ: ಇಲ್ಲಿಯ ಎಲೂರು ಬಳಿಯ ಸಿಪಿಎಂ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ದಿನ ಪಕ್ಷವು, ರಾಷ್ಟ್ರಧ್ವಜದ ಬದಲಿಗೆ ಕಾಂಗ್ರೆಸ್‌ನ ಧ್ವಜ ಹಾರಿಸಿ ಪ್ರಮಾದ ಎಸಗಿದೆ. ಪಕ್ಷದ ಸ್ಥಳೀಯ ಹಿರಿಯ ನಾಯಕ ಧ್ವಜಾರೋಹಣಕ್ಕೆ ತ್ರಿವರ್ಣ ಧ್ವಜಕ್ಕೆ ಬದಲು ತಪ್ಪಾಗಿ ಕಾಂಗ್ರೆಸ್‌ ಪಕ್ಷದ ಧ್ವಜ ಹಾರಿಸಿದರು ಎಂದು ಬುಧವಾರ ಇಲ್ಲಿಯ ಸಿಪಿಎಂ ಕಚೇರಿಯಲ್ಲಿ ನಡೆದ ಸ್ಥಳೀಯ ನಾಯಕರು, ಸದಸ್ಯರ ಸಭೆಯಲ್ಲಿ ಪಕ್ಷದ ನಾಯಕರೊಬ್ಬರು ಮುಜುಗರದ ಸನ್ನಿವೇಶ ಸ್ಮರಿಸಿದ್ದಾರೆ. ‘ಕಾಂಗ್ರೆಸ್‌ ಧ್ವಜ ಮೇಲೇರಿದ ನಂತರ 10 ನಿಮಿಷ ಧ್ವಜ ಹಾರಾಡಿತ್ತು. ಬಳಿಕ ಪಕ್ಷದ ನಾಯಕರೊಬ್ಬರು ಇದನ್ನು ಗುರುತಿಸಿದರು. ತಕ್ಷಣ ಧ್ವಜ ಕೆಳಗಿಳಿಸಲಾಯಿತು’ ಎಂದು ನಾಯಕ ಹೇಳಿದ್ದಾರೆ.

‘ಮೃತ ನೌಕರರ ಪಿಂಚಣಿಗೆ ಅವಿವಾಹಿತ, ವಿಧವಾ, ವಿಚ್ಛೇದಿತ ಪುತ್ರಿ ಅರ್ಹ’

ನವದೆಹಲಿ: ಮೃತ ಸರ್ಕಾರಿ ನೌಕರರ ಅವಿವಾಹಿತ, ವಿಧವಾ ಅಥವಾ ವಿಚ್ಛೇದಿತ ಹೆಣ್ಣುಮಕ್ಕಳು ಕೆಲವು ನಿಗದಿತ ಷರತ್ತುಗಳನ್ನು ಪೂರೈಸಿದರೆ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ಬುಧವಾರ ಮಾಹಿತಿ ನೀಡಿದ್ದಾರೆ. ‘2021ರ ಕೇಂದ್ರ ನಾಗರಿಕ ಸೇವಾ (ಪಿಂಚಣಿ) ನಿಯಮಗಳಲ್ಲಿನ ವಿವಿಧ ನಿಬಂಧನೆಗಳು ಹಾಗೂ 2022ರ ಅ.26ರಂದು ಹೊರಡಿಸಲಾದ ಜ್ಞಾಪಕಪತ್ರದ ಪ್ರಕಾರ ಮೃತ ಸರ್ಕಾರಿ ನೌಕರರ ಅವಿವಾಹಿತ, ವಿಧವಾ ಅಥವಾ ವಿಚ್ಛೇದಿತ ಹೆಣ್ಣುಮಕ್ಕಳು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಮೃತ ನೌಕರರಿಗೆ ಪತ್ನಿ/ಪುತ್ರ ಇಲ್ಲದಿದ್ದರೆ ಅಥವಾ ಅವರು ನಿಗದಿತ ಷರತ್ತುಗಳನ್ನು ಪೂರೈಸದಿದ್ದರೆ, ಕುಟುಂಬ ಪಿಂಚಣಿಯನ್ನು ಇಂಥ ಹೆಣ್ಣುಮಕ್ಕಳಿಗೆ ನೀಡಲಾಗುವುದು. ಇದು ಅಂಥ ಹೆಣ್ಣುಮಕ್ಕಳು ಮರುಮದುವೆಯಾಗುವವರೆಗೆ ಅಥವಾ ಸ್ವಂತ ಸಂಪಾದನೆ ಆರಂಭಿಸುವವರೆಗೆ ಜಾರಿಯಲ್ಲಿರುತ್ತದೆ’ ಎಂದು ತಿಳಿಸಿದರು.

ದಿಲ್ಲಿ: ಮತ್ತೆ 50 ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಕರೆ

ನವದೆಹಲಿ: ವರ್ಷಾರಂಭದಲ್ಲಿ ಭಾರಿ ಸುದ್ದಿಯಾಗಿದ್ದ ಹುಸಿ ಬಾಂಬ್‌ ಬೆದರಿಕೆ ಕರೆಗಳು ಮತ್ತೆ ಹಾವಳಿ ಆರಂಭಿಸಿದ್ದು, ಬುಧವಾರ ದೆಹಲಿಯ 50ಕ್ಕೂ ಹೆಚ್ಚಿನ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕರೆ ಇ-ಮೇಲ್‌ಗಳು ಬಂದಿವೆ. ಇಲ್ಲಿನ ಆಂಧ್ರ ಶಾಲೆ, ರಾಹುಲ್ ಮಾಡೆಲ್‌ ಶಾಲೆ, ಮ್ಯಾಕ್ಸ್‌ಫೋರ್ಟ್‌ ಶಾಲೆ, ಎಸ್‌ಕೆವಿ, ಆಂಧ್ರ ಶಾಲೆ ಸೇರಿದಂತೆ 50 ಶಾಲೆಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬಂದಿವೆ. ಎಸ್‌ಕೆವಿ ಶಾಲೆ ಮತ್ತು ಆಂಧ್ರ ಶಾಲೆಗಳಿಗೆ ಕ್ರಮವಾಗಿ ಬೆಳಗ್ಗೆ 7.40 ಮತ್ತು 7.42ಕ್ಕೆ ಇ-ಮೇಲ್‌ಗಳು ಬಂದಿವೆ. ಪರಿಣಾಮ ಅಗ್ನಿಶಾಮಕ ಸಿಬ್ಬಂದಿ, ಬಾಂಬ್‌ ನಿಷ್ಕ್ರಿಯ ಸಿಬ್ಬಂದಿ ಪೊಲೀಸರು ಪರಿಶೀಲನೆ ಮಾಡಿ ಹುಸಿ ಎಂದು ಖಾತ್ರಿಪಡಿಸಿದ್ದಾರೆ. ಸೋಮವಾರವೂ ಸಹ 32 ಶಾಲೆಗಳಿಗೆ ಹುಸಿ ಬಾಂಬ್‌ ಕರೆಗಳು ಬಂದಿದ್ದವು.

ಭಾರತದಲ್ಲಿ ಹಸೀನಾ ಪಕ್ಷದ ಕಚೇರಿ ವಿರುದ್ಧ ಬಾಂಗ್ಲಾ ಕಿಡಿ: ಆರೋಪ ಅಲ್ಲಗಳೆದ ಭಾರತ

ಢಾಕಾ: ಬಾಂಗ್ಲಾದೇಶದ ಪರಿತ್ಯಕ್ತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಆಶ್ರಯ ಕೊಟ್ಟ ಕಾರಣ ಭಾರತದ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಬಾಂಗ್ಲಾ ಮಧ್ಯಂತರ ಸರ್ಕಾರ, ಇದೀಗ ಬಾಂಗ್ಲಾವಿರೋಧಿಯಾದ ಯಾವುದೇ ರಾಜಕೀಯ ಪಕ್ಷಕ್ಕೆ ಭಾರತ ಪ್ರೋತ್ಸಾಹ ನೀಡಬಾರದು ಎಂದು ತಾಕೀತು ಮಾಡಿದೆ. ಬಾಂಗ್ಲಾ ನಿಷೇಧಿತ ಹಸೀನಾ ನೇತೃತ್ವದ ಅವಾಮಿ ಲೀಗ್‌ ಭಾರತದಲ್ಲಿ ಕಚೇರಿ ಸ್ಥಾಪಿಸುತ್ತಿದೆ ಎಂಬ ವರದಿಗಳ ಹಿನ್ನೆಲೆ, ‘ಭಾರತದಲ್ಲಿ ನಿರ್ಮಾಣವಾಗಿರುವ ಲೀಗ್‌ನ ಕಚೇರಿಯನ್ನು ತಕ್ಷಣ ಮುಚ್ಚಿಸಬೇಕು. ಬಾಂಗ್ಲಾ ವಿರೋಧಿಯಾದ ಯಾವುದೇ ಚಟುವಟಿಕೆಗೆ ಭಾರತ ಅವಕಾಶ ನೀಡಬಾರದು’ ಎಂದು ಆಗ್ರಹಿಸಿದೆ. ಇದಕ್ಕೆ ಕೆಂಡಾಮಂಡಲವಾಗಿರುವ ಭಾರತ, ಇತರ ದೇಶಗಳನ್ನು ಗುರಿಯಾಗಿಸಿಕೊಳ್ಳುವ ಯಾವುದೇ ಪಕ್ಷಗಳಿಗೆ ತನ್ನ ನೆಲದಲ್ಲಿ ಭಾರತ ಅವಕಾಶ ಕೊಡುವುದಿಲ್ಲ ಎಂದು ಪ್ರತ್ಯುತ್ತರ ನೀಡಿದೆ.

Read more Articles on