ಇಂದಿನಿಂದ ಹೊಸ ವಿತ್ತೀಯ ವರ್ಷ: ಹಲವು ಬದಲಾವಣೆ

| Published : Apr 01 2024, 12:49 AM IST / Updated: Apr 01 2024, 07:02 AM IST

ಸಾರಾಂಶ

ಹೊಸ ತೆರಿಗೆ ಪದ್ಧತಿ ಜಾರಿ, ಫಾಸ್ಟ್ಯಾಗ್‌ ಕೆವೈಸಿ ಮಾಡಿಸದಿದ್ರೆ ಡಬಲ್‌ ಟೋಲ್‌ ಶುಲ್ಕ, ಕೆಲವು ಡೆಬಿಟ್‌ ಕಾರ್ಡ್‌ ಶುಲ್ಕ ಹೆಚ್ಚಳ, ಮ್ಯೂಚುವಲ್‌ ಫಂಡ್‌ ಕೆವೈಸಿ ನವೀಕರಣ ಕಡ್ಡಾಯ ಮುಂತಾದ ಬದಲಾವಣೆಗಳು ಇಂದಿನಿಂದ ಜಾರಿಯಾಗಲಿವೆ.

ನವದೆಹಲಿ: ಸೋಮವಾರ ಹೊಸ ವಿತ್ತೀಯ ವರ್ಷ ಅರಂಭವಾಗಲಿದ್ದು, ಹಲವು ಬದಲಾವಣೆಗಳಿಗೆ ನಾಂದಿ ಹಾಡಲಿದೆ. ಈ ಬದಲಾವಣೆಗಳೇನು ಎಂಬ ಕಿರು ಮಾಹಿತಿ ಇಲ್ಲಿದೆ.ಡೆಬಿಟ್‌ ಕಾರ್ಡ್‌ ಶುಲ್ಕ ಹೆಚ್ಚಳ ಎಸ್‌ಬಿಐ ತಮ್ಮ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ನಿರ್ದಿಷ್ಟ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕವನ್ನು 75 ರು.ಗಳಷ್ಟು ಹೆಚ್ಚಿಸಿದೆ, 2024ರ ಏ.1ರಿಂದ ಜಾರಿಗೆ ಬರುತ್ತದೆ.

ಮ್ಯೂಚುವಲ್‌ ಫಂಡ್‌

ಏ.1ರಿಂದ, ತಮ್ಮ ಕೆವೈಸಿ ಅನ್ನು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ನವೀಕರಣ ಮಾಡದ ಹೂಡಿಕೆದಾರರಿಗೆ ಯಾವುದೇ ಮ್ಯೂಚುವಲ್ ಫಂಡ್‌ ವಹಿವಾಟುಗಳನ್ನು ಮಾಡಲು ಅನುಮತಿಸಲಾಗುವುದಿಲ್ಲ.ವಿಮಾ ಪಾಲಿಸಿ ಡಿಜಿಟಲೀಕರಣ ಕಡ್ಡಾಯಏಪ್ರಿಲ್ 1, 2024 ರಿಂದ ವಿಮಾ ಪಾಲಿಸಿಗಳ ಡಿಜಿಟಲೀಕರಣ ಕಡ್ಡಾಯವಾಗಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೇಳಿದೆ. ಇದರ ಅಡಿ ಜೀವ, ಆರೋಗ್ಯ ಮತ್ತು ಸಾಮಾನ್ಯ ವಿಮೆ ಸೇರಿದಂತೆ ವಿವಿಧ ವರ್ಗಗಳ ಎಲ್ಲಾ ವಿಮಾ ಪಾಲಿಸಿಗಳನ್ನು ವಿದ್ಯುನ್ಮಾನವಾಗಿ ನೀಡಲಾಗುವುದು.

ಹೊಸ ತೆರಿಗೆ ಪದ್ಧತಿಕೇಂದ್ರ ಸರ್ಕಾರದ ಹೊಸ ತೆರಿಗೆ ವ್ಯವಸ್ಥೆ ಏ.1ರಿಂದ ತನ್ನಿಂತಾನೇ ಆರಂಭವಾಗಲಿದೆ. ವ್ಯಕ್ತಿಗಳು ಹಳೆಯ ತೆರಿಗೆ ಪದ್ಧತಿಯೇ ಇರಬೇಕು ಎಂದು ಆಯ್ಕೆ ಮಾಡದೇ ಹೋದರೆ ಹೊಸ ವ್ಯವಸ್ಥೆಯ ಪ್ರಕಾರ ತೆರಿಗೆ ಸ್ವಯಂಚಾಲಿತವಾಗಿ ಅವರಿಗೆ ಅನ್ವಯಿಸಲಿದೆ. ಆದರೆ ಹೊಸ ತೆರಿಗೆ ಪದ್ಧತಿಯಲ್ಲಿನ ಆದಾಯ ತೆರಿಗೆ ಸ್ಲ್ಯಾಬ್‌ಗಳು ಬದಲಾಗದೆ ಉಳಿಯುತ್ತವೆ. ಏಕೆಂದರೆ ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಘೋಷಿಸಿಲ್ಲ. ವಾರ್ಷಿಕ 7 ಲಕ್ಷ ರು.ವರೆಗೆ ಆದಾಯ ಗಳಿಸುವ ಯಾವುದೇ ವ್ಯಕ್ತಿ ಮೇಲೆ ಯಾವುದೇ ತೆರಿಗೆ ಪಾವತಿ ಭಾರ ಇರುವುದಿಲ್ಲ.

ಫಾಸ್ಟ್‌ ಟ್ಯಾಗ್‌ನ ಹೊಸ ನಿಯಮನೀವು ಬ್ಯಾಂಕ್‌ನೊಂದಿಗೆ ನಿಮ್ಮ ಕಾರಿನ ಫಾಸ್ಟ್‌ಟ್ಯಾಗ್‌ನ ಕೆವೈಸಿ ನವೀಕರಿಸದಿದ್ದರೆ, ಏ.1 ರಿಂದ ನೀವು ಸಮಸ್ಯೆಗಳನ್ನು ಎದುರಿಸಬಹುದು. 

ಬ್ಯಾಂಕ್‌ಗಳು ನಿಷ್ಕ್ರಿಯಗೊಳಿಸುವುದನ್ನು ತಪ್ಪಿಸಲು ಮಾರ್ಚ್ 31 ರ ಮೊದಲು ನಿಮ್ಮ ಫಾಸ್ಟ್‌ಟ್ಯಾಗ್‌ಗಾಗಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿತ್ತು. ಕೆವೈಸಿ ಮಾಡಿಸದಿದ್ದವರು ಹೆದ್ದಾರಿಯಲ್ಲಿ ದುಪ್ಪಟ್ಟು ಟೋಲ್‌ ಕಟ್ಟಬೇಕು.ವಿಮಾ ಪಾಲಿಸಿಗಳಿಗೆ ಸರೆಂಡರ್ ಮೌಲ್ಯಏ.1, 2024 ರಿಂದ, 3 ವರ್ಷಗಳ ಅವಧಿಯವರೆಗೆ ವಿಮಾ ಪಾಲಿಸಿಗಳನ್ನು ಸರೆಂಡರ್ ಮಾಡಿದರೆ ಸರೆಂಡರ್ ಮೌಲ್ಯವು ಒಂದೇ ಆಗಿರುತ್ತದೆ ಅಥವಾ ಇನ್ನೂ ಕಡಿಮೆ ಇರಲಿದೆ. ಆದರೆ ಪಾಲಿಸಿಗಳನ್ನು 4 ಮತ್ತು 7ನೇ ವರ್ಷಗಳ ನಡುವೆ ಸರೆಂಡರ್ ಮಾಡಿದರೆ, ಸರೆಂಡರ್ ಮೌಲ್ಯದಲ್ಲಿ ಸ್ವಲ್ಪ ಹೆಚ್ಚಳವಾಗಬಹುದು. ಅಕಾಲಿಕವಾಗಿ ಪಾಲಿಸಿದಾರರು ಪಾಲಿಸಿ ಮುಕ್ತಾಯಗೊಳಿಸಿದಾಗ ವಿಮಾದಾರರು ಪಾಲಿಸಿದಾರರಿಗೆ ವಿತರಿಸಿದ ಮೊತ್ತವನ್ನು ಸರೆಂಡರ್‌ ಮೌಲ್ಯ ಅನ್ನುತ್ತಾರೆ.