ನಕಲಿ ತುಪ್ಪ, ಕಾಣಿಕೆ ಹುಂಡಿಗೆ ಕನ್ನ ಹಗರಣದ ಬಳಿಕ ಹಿಂದೂಗಳ ಪವಿತ್ರ ಆರಾಧನಾ ಸ್ಥಳ ತಿರುಪತಿಯಲ್ಲೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಪಟ್ಟು ಸಾರಿಗಾ ದುಪಟ್ಟಾ ಅಥವಾ ಶಾಲು (ಸನ್ಮಾನದ ವೇಳೆ ಹಾಕುವ ಶಾಲುಗಳು) ಗಳ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ.

- ನಕಲಿ ತುಪ್ಪದ ನಂತರ ಇನ್ನೊಂದು ಅಕ್ರಮ

- ಗೆಸ್ಟ್‌ಗಳಿಗೆ ಪಾಲಿಸ್ಟರ್ ಶಾಲು ಹಾಕಿ ಮೋಸ!

----

ಅಕ್ರಮ ಹೇಗೆ?

- ದೇಗುಲಕ್ಕೆ ರೇಷ್ಮೆ ಬದಲು ಪಾಲಿಸ್ಟರ್‌ ಶಾಲು ಪೂರೈಕೆ

- ಗಣ್ಯರು, ಅತಿಥಿಗಳ ಆಶೀರ್ವಾದಕ್ಕೆ ಬಳಸುತ್ತಿದ್ದ ಶಾಲು

- 2015ರಿಂದ ಒಂದೇ ಸಂಸ್ಥೆಯಿಂದ ಟಿಟಿಡಿಗೆ ಶಾಲು ಪೂರೈಕೆ

- 300 ರು. ಶಾಲಿಗೆ 1,300 ರು. ಬಿಲ್‌. ₹55 ಕೋಟಿ ವಂಚನೆ

- ನಕಲಿ ತುಪ್ಪ ಬಳಿಕ ನಕಲಿ ರೇಷ್ಮೆ ಶಾಲು ಹಗರಣ ಬೆಳಕಿಗೆ

--

ತಿರುಪತಿ: ನಕಲಿ ತುಪ್ಪ, ಕಾಣಿಕೆ ಹುಂಡಿಗೆ ಕನ್ನ ಹಗರಣದ ಬಳಿಕ ಹಿಂದೂಗಳ ಪವಿತ್ರ ಆರಾಧನಾ ಸ್ಥಳ ತಿರುಪತಿಯಲ್ಲೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಪಟ್ಟು ಸಾರಿಗಾ ದುಪಟ್ಟಾ ಅಥವಾ ಶಾಲು (ಸನ್ಮಾನದ ವೇಳೆ ಹಾಕುವ ಶಾಲುಗಳು) ಗಳ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ. ರೇಷ್ಮೆ ಹೆಸರಲ್ಲಿ ಪಾಲಿಸ್ಟರ್‌ ಶಾಲು ಪೂರೈಸಿ, 55 ಕೋಟಿ ರು. ಅಕ್ರಮ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಎಸಿಬಿ ತನಿಖೆ ನಡೆಸುವಂತೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಆಂಧ್ರ ಸರ್ಕಾರಕ್ಕೆ ಮನವಿ ಮಾಡಿದೆ.

ತಿರುಪತಿಯಲ್ಲಿ ದಾನಿಗಳಿಗೆ, ಗಣ್ಯರಿಗೆ, ವಿದ್ವಾಂಸರಿಗೆ ಆಶೀರ್ವಚನದ ರೂಪದಲ್ಲಿ ರೇಷ್ಮೆ ಶಾಲು ಹೊದಿಸಿ ಗೌರವಿಸಲಾಗುತ್ತದೆ. ಆದರೆ ಟಿಟಿಡಿಗೆ ಪೂರೈಕೆಯಾಗುತ್ತಿರುವ ಈ ಶಾಲುಗಳ ಕುರಿತು ಅನುಮಾನ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಂತರಿಕ ತನಿಖೆ ನಡೆಸಲಾಗಿತ್ತು. ಬಳಿಕ ಶಾಲುಗಳನ್ನು ಧರ್ಮಾವರಂನ ಶ್ರೀ ಸತ್ಯಸಾಯಿ ಮತ್ತು ಬೆಂಗಳೂರಿನ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಲ್ಯಾಬೋರೇಟರಿಗಳಿಗೆ ಶಾಲು ಸ್ಯಾಂಪಲ್‌ ಕಳುಹಿಸಿಕೊಡಲಾಗಿತ್ತು. ವರದಿಯಲ್ಲಿ ಶಾಲಿಗೆ ರೇಷ್ಮೆ ಬದಲು ಪಾಲಿಸ್ಟರ್‌ ಬಳಸಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು.

ಆಂಧ್ರದ ಚಿತ್ತೂರಿನ ನಗರಿಯ ವಿಆರ್‌ಎಸ್‌ ಎಕ್ಸ್‌ಪೋರ್ಟ್‌ ಮತ್ತು ಅದರ ಅಂಗಸಂಸ್ಥೆಗಳು ಕಳೆದ 10 ವರ್ಷಗಳಿಂದ ಟಿಟಿಡಿಗೆ ಈ ಶಾಲುಗಳನ್ನು ಪೂರೈಸುತ್ತಿದ್ದವು. ಇತ್ತೀಚೆಗಷ್ಟೇ ಈ ಸಂಸ್ಥೆಗೆ ಪ್ರತಿ ಶಾಲಿಗೆ 1,389 ರು. ದರದಂತೆ 15 ಸಾವಿರ ಶಾಲುಗಳ ಪೂರೈಕೆ ಟೆಂಡರ್‌ ನೀಡಲಾಗಿತ್ತು. ಮೂಲಗಳ ಪ್ರಕಾರ ಈ ಶಾಲಿನ ಬೆಲೆ 300ಕ್ಕಿಂತಲೂ ಕಡಿಮೆ ಎನ್ನಲಾಗಿದೆ.

ಹಗರಣ ಬೆಳಕಿಗೆ ಬಂದಿದ್ದು ಹೇಗೆ?:

ಇತ್ತೀಚೆಗೆ 21,600 ಶಾಲುಗಳ ಖರೀದಿ ಪ್ರಸ್ತಾಪ ಬಂದಾಗ ಟಿಟಿಡಿ ಬೋರ್ಡ್‌ ಕೆಲ ಆಕ್ಷೇಪಗಳ ಹಿನ್ನೆಲೆಯಲ್ಲಿ ಈಗಾಗಲೇ ಪೂರೈಕೆಯಾಗುತ್ತಿರುವ ಶಾಲುಗಳ ಗುಣಮಟ್ಟ ಪರಿಶೀಲಿಸಲು ಮುಂದಾಗಿದೆ. ನಿಯಮಗಳ ಪ್ರಕಾರ ಶುದ್ಧ ರೇಷ್ಮೆಯಿಂದ ನೇಯ್ದ ಹಾಗೂ ಸಿಲ್ಕ್‌ ಮಾರ್ಕ್‌ ಆರ್ಗನೈಸೇಷನ್‌ ಆಫ್‌ ಇಂಡಿಯಾದ ಸಿಲ್ಕ್‌ ಮಾರ್ಕ್‌ ಇರುವ ಶಾಲುಗಳನ್ನು ಟಿಟಿಡಿಗೆ ಪೂರೈಸಬೇಕು. ಅದರಂತೆ ಟಿಟಿಡಿ ಸೂಚನೆಯಂತೆ ವಿಚಕ್ಷಣಾ ವಿಭಾಗವು ನಗರಿಯ ವಿಆರ್‌ಎಸ್‌ ಎಕ್ಸ್‌ಪೋರ್ಟ್‌ ಸಂಸ್ಥೆ ಪೂರೈಸುತ್ತಿದ್ದ ಶಾಲುಗಳ ಸ್ಯಾಂಪಲ್‌ ಅನ್ನು ಬೆಂಗಳೂರು ಮತ್ತು ಧರ್ಮಾವರಂನ ಲ್ಯಾಬ್‌ಗೆ ಕಳುಹಿಸಿಕೊಟ್ಟಿತ್ತು. ಎರಡೂ ಲ್ಯಾಬ್‌ಗಳ ವರದಿಗಳು ಶಾಲಿನಲ್ಲಿ ಸಿಲ್ಕ್ ಬದಲು ಪಾಲಿಸ್ಟರ್‌ ಬಳಸಿರುವುದು ಖಚಿತಪಡಿಸಿದವು. ಅಲ್ಲದೆ, ಶಾಲಿನಲ್ಲಿ ಕಡ್ಡಾಯವೆಂದು ಸೂಚಿಸಲಾಗಿದ್ದ ರೇಷ್ಮೆ ಗುಣಮಟ್ಟ ಖಾತ್ರಿಪಡಿಸುವ ಹೋಲೋಗ್ರಾಂ ಕೂಡ ಇಲ್ಲದಿರುವುದು ಬೆಳಕಿಗೆ ಬಂತು.

--

ಕೋಟ್‌

350 ರು.ಗಳ ಶಾಲು ಅನ್ನು 1,300 ರು.ಗೆ ಬಿಲ್‌ ಮಾಡಲಾಗುತ್ತಿತ್ತು. ಈವರೆಗೆ ಅವರು 50 ಕೋಟಿ ರು.ಗೂ ಹೆಚ್ಚು ನಷ್ಟ ಮಾಡಿದ್ದಾರೆ. ಈ ಕುರಿತು ನಾವು ಎಸಿಬಿಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ.

- ಬಿ.ಆರ್‌.ನಾಯ್ಡು, ಟಿಟಿಡಿ ಮುಖ್ಯಸ್ಥ