- ಲೆಬನಾನ್‌ಗೂ ಅನ್ವಯಿಸಲಿದೆ ಎಂದ ಪಾಕ್
- ಅನ್ವಯಿಸಲ್ಲ ಎಂದ ಅಮೆರಿಕ, ಇಸ್ರೇಲ್- ಪಾಕಿಸ್ತಾನ ಎಡವಟ್ಟು ಮಾಡಿತೇ?
- ಕೊನೆಗೆ ಪಾಕ್ ಮಾತು ನಂಬಿ ಇರಾನ್ ಬೇಸ್ತುಇಸ್ಲಾಮಾಬಾದ್/ಟೆಹ್ರಾನ್: ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲೇ ಅಮೆರಿಕ-ಇರಾನ್ ನಡುವೆ ಬುಧವಾರ ಏರ್ಪಟ್ಟ 2 ವಾರಗಳ ತಾತ್ಕಾಲಿಕ ಕದನ ವಿರಾಮ ಕುರಿತ ಗೊಂದಲ ಗುರುವಾರವೂ ಮುಂದುವರೆದಿದೆ. ಈ ಗೊಂದಲಕ್ಕೆ ಕಾರಣ ಮಧ್ಯವರ್ತಿಯಾಗಿ ಕೆಲಸ ಮಾಡಿದ ಪಾಕಿಸ್ತಾನ ಎಂಬ ಆರೋಪ ಕೇಳಿಬರುತ್ತಿದೆ.ಡೀಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ‘ಕದನ ವಿರಾಮ ತಕ್ಷಣದಿಂದಲೇ ಜಾರಿಗೆ ಬರಲಿದೆ, ಲೆಬನಾನ್ ಸೇರಿ ಇತರೆ ದೇಶಗಳಿಗೂ ಇದು ಅನ್ವಯವಾಗಲಿದೆ’ ಎಂದು ಘೋಷಿಸಿದ್ದರು. ಇದನ್ನೇ ನಂಬಿದ್ದ ಇರಾನ್, ಲೆಬನಾನ್‌ಗೂ ಕದನವಿರಾಮ ಅನ್ವಯ ಎಂದಿತ್ತು.
ಆದರೆ ಇದರ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ‘ಕದನ ವಿರಾಮಕ್ಕೂ ಲೆಬನಾನ್ ಬಂಡುಕೋರರಿಗೂ ಯಾವುದೇ ಸಂಬಂಧ ಇಲ್ಲ’ ಎಂದಿದ್ದರು ಹಾಗೂ. ಲೆಬನಾನ್ ಮೇಲೆ ಬುಧವಾರ ಇಸ್ರೇಲ್ ಕಂಡು ಕೇಳರಿಯದ ಕ್ಷಿಪಣಿ ದಾಳಿ ನಡೆಸಿತ್ತು. ಇದು 250 ಜನರ ಸಾವಿಗೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ‘ಕದನವಿರಾಮ ಕೇವಲ ಇರಾನ್‌ಗೆ ಅನ್ವಯ. ಲೆಬನಾನ್‌ಗೆ ಇಲ್ಲ. ಬಹುಶಃ ಇರಾನ್ ಈ ವಿಚಾರದಲ್ಲಿ ಗೊಂದಲಕ್ಕೀಡಾಗಿದೆ’ ಎಂದಿದ್ದರು.
2 ಭಿನ್ನ ಸಂಧಾನ ಪ್ರತಿ ನೀಡಿದ ಪಾಕ್?:‘ಈ ಗೊಂದಲಕ್ಕೆ ಮಾತುಕತೆ ವಹಿಸಿದ ಪಾಕಿಸ್ತಾನ ಕಾರಣ. ಇರಾನ್-ಅಮೆರಿಕದ ಪ್ರತಿನಿಧಿಗಳ ನಡುವೆ ಮಧ್ಯವರ್ತಿಯಾಗಿ ಪಾಕಿಸ್ತಾನ ಕೆಲಸ ಮಾಡಿತ್ತು. ಪಾಕಿಸ್ತಾನವು ಕದನವಿರಾಮದ ಅಂಶಗಳಿರುವ ಒಂದೇ ರೀತಿಯ ಪ್ರತಿಯನ್ನು ಉಭಯ ದೇಶಗಳಿಗೆ ನೀಡಿಲ್ಲ. ಅಮೆರಿಕಕ್ಕೆ ಒಂದು ರೀತಿಯ ಪ್ರತಿ ಹಾಗೂ ಇರಾನ್‌ಗೆ ಇನ್ನೊಂದು ರೀತಿಯ ಪ್ರತಿಯನ್ನು ನೀಡಿದೆ. ಇದು ಗೊಂದಲಕ್ಕೆ ಕಾರಣ’ ಎಂದು ಇರಾನಿ ಮಾಧ್ಯಮಗಳು ವರದಿ ಮಾಡಿವೆ.
ಹೀಗಾಗಿ ಕದನ ವಿರಾಮದ ಹೊಣೆಗಾರಿಕೆ ನಿಭಾಯಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಇದರ ಪರಿಣಾಮ, ‘ಇಸ್ರೇಲ್ ಕದನವಿರಾಮ ಉಲ್ಲಂಘಿಸಿದೆ’ ಎಂದು ಆರೋಪಿಸಿರುವ ಇರಾನ್, ಹೋರ್ಮುಜ್ ಜಲಸಂಧಿ ಮುಚ್ಚಿದೆ ಹಾಗೂ ‘ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಿಲ್ಲಿಸದಿದ್ದರೆ ಕದನವಿರಾಮಕ್ಕೆ ಇತಿಶ್ರೀ ಹಾಕುವೆ’ ಎಂದು ಬೆದರಿಕೆ ಹಾಕಿದೆ.===
ಲೆಬನಾನ್ ಮೇಲೆ ಇಸ್ರೇಲ್ ದಾಳಿಗೆ 300 ಬಲಿಬೈರೂತ್: ಬುಧವಾರ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 300 ಮಂದಿ ಸಾವನ್ನಪ್ಪಿದ್ದು, 1000ಕ್ಕೂ ಹೆಚ್ಚು ನಾಗಕರಿಕರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಇದು ಕಳೆದ 5 ವಾರಗಳಿಂದ ನಡೆದಿರುವ ಲೆಬನಾನಿನ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಒಂದೇ ದಿನ ಸಾವನ್ನಪ್ಪಿದ್ದ ಅತ್ಯಧಿಕ ಸಂಖ್ಯೆಯಾಗಿದೆ.ಲೆಬನಾನ್ ಕದನವಿರಾಮದ ಭಾಗವಲ್ಲ ಎಂದು ಹೇಳಿದ್ದ ಇಸ್ರೇಲ್, ಬುಧವಾರ ಲೆಬನಾನ್‌ನ ವಿವಿಧ ಕಡೆ ಭಾರಿ ದಾಳಿ ನಡೆಸಿತ್ತು.
==ಇಸ್ರೇಲ್ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ಖಾಸೆಮ್ ಆಪ್ತ ಬಲಿ
ಬೈರೂತ್: ಇರಾನ್ ಕದನ ವಿರಾಮ ಲೆಬನಾನ್‌ಗೆ ಅನ್ವಯಿಸಲ್ಲ ಎಂದು ಹೇಳಿದ್ದ ಇಸ್ರೇಲ್, ಲೆಬನಾನ್ ಮೇಲೆ ಮುಗಿ ಬಿದ್ದಿದ್ದು, ಇಸ್ರೇಲ್ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸೆಮ್‌ನ ಆಪ್ತನಾದ ಅಲಿ ಯೂಸುಫ್ ಹರ್ಷಿಯನ್ನು ಹತ್ಯೆ ಮಾಡಿದೆ.ಈ ಬಗ್ಗೆ ಸ್ವತಃ ಹೇಳಿಕೆ ನೀಡಿರುವ ಇಸ್ರೇಲ್ ಸೇನೆ, ‘ಇಸ್ರೇಲ್ ರಕ್ಷಣಾ ಪಡೆ ಬೈರೂತ್ ಪ್ರದೇಶದ ಮೇಲೆ ದಾಳಿ ಮಾಡಿದೆ. ಈ ವೇಳೆ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸೆಮ್‌ನ ಆಪ್ತ ಕಾರ್ಯದರ್ಶಿಯಾಗಿದ್ದ ಆತನ ಸೋದರಳಿಯ ಅಲಿ ಯೂಸುಫ್ ಹರ್ಷಿಯನ್ನು ಹತ್ಯೆಗೈಯಲಾಗಿದೆ’ ಎಂದಿದೆ.ಹರ್ಷಿ, ಖಾಸೆಮ್‌ಗೆ ನಿಕಟ ಸಹವರ್ತಿ ಮತ್ತು ವೈಯಕ್ತಿಕ ಸಲಹೆಗಾರರಾಗಿದ್ದ ಮತ್ತು ಕಚೇರಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಅದು ಹೇಳಿದೆ.==
ಲೆಬನಾನ್ ಜತೆ ಮಾತುಕತೆಗೆ ರೆಡಿ: ನೆತನ್ಯಾಹುಟೆಲ್ ಅವಿವ್: ಕದನವಿರಾಮವು ಲೆಬನಾನ್ ಅನ್ನು ಒಳಗೊಂಡಿಲ್ಲ ಎಂದಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ರಾತ್ರಿ ಕೊಂಚ ತಣ್ಣಗಾಗಿದ್ದು, ಲೆಬನಾನ್ ಸರ್ಕಾರದ ಜತೆ ಮಾತುಕತೆಗೆ ಸಿದ್ಧರಿದ್ದೇವೆ ಎಂದಿದ್ದಾರೆ.ಲೆಬನಾನ್ ಪ್ರಧಾನಿಯು ಇಸ್ರೇಲ್ ಜತೆ ಮಾತುಕತೆಗೆ ಒಲವು ತೋರಿದ್ದರು. ಇದಕ್ಕೆ ನೆತನ್ಯಾಹು ಪ್ರತಿಕ್ರಿಯಿಸಿ, ‘ಲೆಬನಾನ್‌ನ ಹಿಜ್ಬುಲ್ಲಾ ಉಗ್ರರನ್ನು ನಿಶ್ಶಸ್ತ್ರ ಮಾಡುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಲೆಬನಾನ್ ಪ್ರಧಾನಿ ಮಾತುಕತೆಗೆ ಒಲವು ತೋರಿರುವುದನ್ನು ನಾವು ಸ್ವಾಗತಿಸುತ್ತೇವೆ’ ಎಂದಿದ್ದಾರೆ.
ಇರಾನ್-ಅಮೆರಿಕ ಕದನವಿರಾಮ ಹೊರತಾಗ್ಯೂ ಲೆಬನಾನ್ ಮೇಲೆ ಬುಧವಾರ ಇಸ್ರೇಲ್ ಭೀಕರ ದಾಳಿ ಮಾಡಿದ ಪರಿಣಾಮ 203 ಜನ ಸಾವನ್ನಪ್ಪಿದ್ದರು.