ಸಿದ್ದರಾಮಯ್ಯ ಪತ್ನಿಯನ್ನು ನಾವು ಹೊರಗೆ ತಂದಿಲ್ಲ : ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ

| Published : Oct 07 2024, 07:56 AM IST

HD Kumaraswamy

ಸಾರಾಂಶ

ಗೌರವಯುತವಾಗಿ ಮನೆಯಲ್ಲಿದ್ದ ನಿಮ್ಮ ಮಡದಿಯನ್ನು ಹೊರಗೆ ತರುವ ಕೆಲಸ ಮಾಡಿದವರು ವಿರೋಧ ಪಕ್ಷದವರಲ್ಲ. ಅದು ನೀವೇ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ

ಬೆಂಗಳೂರು: ಗೌರವಯುತವಾಗಿ ಮನೆಯಲ್ಲಿದ್ದ ನಿಮ್ಮ ಮಡದಿಯನ್ನು ಹೊರಗೆ ತರುವ ಕೆಲಸ ಮಾಡಿದವರು ವಿರೋಧ ಪಕ್ಷದವರಲ್ಲ. ಅದು ನೀವೇ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಶನಿವಾರ ಮಾನ್ವಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವತ್ತೂ ಮನೆಯಿಂದ ಆಚೆಗೆ ಬಂದು ರಾಜಕಾರಣದ ಕಡೆ ಮುಖ ಮಾಡದ, ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ವಿಪಕ್ಷಗಳು ರಾಜಕಾರಣಕ್ಕೆ ಎಳೆದು ತಂದಿವೆ. ನಾನು ಏನು ತಪ್ಪು ಮಾಡಿದ್ದೇನೆ? ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ಎಳೆಯಬೇಕಿತ್ತಾ? ಆಕೆ ಏನು ತಾನೆ ತಪ್ಪು ಮಾಡಿದ್ದಾಳೆ ಎಂದು ಪ್ರಶ್ನಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ ಎಚ್‌ಡಿಕೆ, ಗೌರಯುತವಾಗಿ ಮನೆಯಲ್ಲಿದ್ದ ನಿಮ್ಮ ಮಡದಿಯನ್ನು ಹೊರಗೆ ತರುವ ಕೆಲಸ ಮಾಡಿದ್ದು ನೀವೇ ಹೊರತೂ ವಿಪಕ್ಷದವರಲ್ಲ ಎಂದಿದ್ದಾರೆ. ಇದೇ ವೇಳೆ ‘ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ 14 ತಿಂಗಳು ನಾನು ಏನು ಅಭಿವೃದ್ಧಿ ಕೆಲಸ ಮಾಡಿದ್ದೆ. ಈಗ ನೀವು ಮುಖ್ಯಮಂತ್ರಿಯಾಗಿ 15 ತಿಂಗಳು ಏನು ಸಾಧನೆ ಮಾಡಿದ್ದೀರಿ ಎಂದು ಬಹಿರಂಗ ಚರ್ಚೆಗೆ ಬನ್ನಿ’ ಎಂದೂ ಅವರು ಸವಾಲು ಎಸೆದಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ನಿತ್ಯ ವೈಫಲ್ಯ ಅನುಭವಿಸುತ್ತಿದೆ.

ಆದರೆ, ಸಿದ್ದರಾಮಯ್ಯ ಅವರು ‘ನನ್ನನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿಕೆ ನೀಡುತ್ತಾರೆ. ಸರ್ಕಾರ ಮಾತ್ರ ಹಗರಣಗಳ ಸುತ್ತ ಗಿರಕಿ ಹೊಡೆಯುತ್ತಿದೆ ಲೇವಡಿ ಮಾಡಿದರು. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ 38 ಶಾಸಕರಿದ್ದು ಕಾಂಗ್ರೆಸ್‌ ಸಹಕಾರ ನೀಡದಿದ್ದರೂ 14 ತಿಂಗಳು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದೇನೆ. ಕೊಟ್ಟ ಕುದುರೆ ಏರಲರಿಯದವರು ಎಂದು ನನ್ನನ್ನು ಹಂಗಿಸುತ್ತಾರೆ. ನನಗೆ ಯಾವ ಕುದುರೆ ಕೊಟ್ಟಿದ್ದರು. ಈಗ ಬಹುಮತವಿರುವ ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು 15 ತಿಂಗಳು ಮುಖ್ಯಮಂತ್ರಿಯಾಗಿ ಏನೆಲ್ಲಾ ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.

ರಾಜಕೀಯ ಲಾಭಕ್ಕೆ ಜಾತಿ ಗಣತಿ: ಮಾತೆತ್ತಿದರೆ ನಾನು ಅಹಿಂದ ಪರ ಎನ್ನುತ್ತೀರಿ. ಆದರೆ ಅಹಿಂದ ವರ್ಗಕ್ಕೆ ನೀವು ಏನು ಮಾಡಿದ್ದೀರಿ. ವಾಲ್ಮೀಕಿ ಹಗರಣದಲ್ಲಿ ಹಣ ಲೂಟಿ ಹೊಡೆದಿರುವುದು ನಿಮಗೆ ಗೊತ್ತಿರಲಿಲ್ಲವೇ. ಇಷ್ಟು ದಿವಸ ಜಾತಿ ಗಣತಿ ವರದಿಯ ಅನುಷ್ಠಾನಕ್ಕೆ ಮುಂದಾಗದವರು ಈಗ ರಾಜಕೀಯ ಲಾಭಕ್ಕೆ ಜಾತಿ ಗಣತಿ ವರದಿಯ ಅನುಷ್ಠಾನದ ಮಾತನ್ನಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಅನಾಹುತ: ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಂದಿದ್ದರೂ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿಲ್ಲ. ಆದರೆ ತಮಿಳುನಾಡಿಗೆ ನೀರು ಹರಿಸಿದ್ದೀರಿ. ಶನಿವಾರ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ಸಾಕಷ್ಟು ಅನಾಹುತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಸಾವಿರಾರು ಜನ ಜಾಗರಣೆ ಮಾಡಿದ್ದಾರೆ. ರಾಜ್ಯಾದ್ಯಂತ ಬೆಳೆ ಹಾನಿ ಸಂಭವಿಸಿ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸಿದ್ದರಾಮಯ್ಯ ಸೇರಿದಂತೆ ಯಾವುದೇ ಸಚಿವರಿಗೆ ಸಮಸ್ಯೆ ಪರಿಹರಿಸುವ ಚಿಂತನೆ ಇಲ್ಲ ಎಂದು ಟೀಕಿಸಿದರು. ನಗರದಲ್ಲಿ ಗುಂಡಿ ಮುಚ್ಚಲು ಪಾಲಿಕೆಗೆ ಗಡುವು ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹಾರೆ ಹಿಡಿದು ಅವರೇ ಗುಂಡಿ ಮುಚ್ಚಲು ಹೊರಟಿದ್ದರು. ಮಳೆಯಿಂದ ಈಗ ರಸ್ತೆಗಳ ಸ್ಥಿತಿ ಏನಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಇವರ ಅಭಿವೃದ್ಧಿ ಕೆಲಸಗಳನ್ನು ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದರು.