‘ಬಾಂಗ್ಲಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಹಾಗೂ ಪಲಾಯನಕ್ಕೆ ಅಮೆರಿಕ ಕಾರಣ’ ಎಂಬ ಆರೋಪವನ್ನು ಜೋ ಬೈಡೆನ್‌ ಸರ್ಕಾರ ಸೋಮವಾರ ತಳ್ಳಿಹಾಕಿದೆ.

ವಾಷಿಂಗ್ಟನ್‌: ‘ಬಾಂಗ್ಲಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಹಾಗೂ ಪಲಾಯನಕ್ಕೆ ಅಮೆರಿಕ ಕಾರಣ’ ಎಂಬ ಆರೋಪವನ್ನು ಜೋ ಬೈಡೆನ್‌ ಸರ್ಕಾರ ಸೋಮವಾರ ತಳ್ಳಿಹಾಕಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಕರೀನ್‌ ಜೀನ್ ಪೀರ್‌, ‘ಇದರಲ್ಲಿ (ಬಾಂಗ್ಲಾ ವಿದ್ಯಮಾಣ) ನಮ್ಮ ಪಾತ್ರ ಏನೂ ಇಲ್ಲ. ಈ ಬಗ್ಗೆ ಹರಡುತ್ತಿರುವ ಸುದ್ದಿಗಳೆಲ್ಲ ಸುಳ್ಳು. ತಮ್ಮನ್ನಾಳುವ ನಾಯಕರನ್ನು ಆರಿಸುವುದು ಬಾಂಗ್ಲಾ ಜನರ ಆಯ್ಕೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೆಂಟ್‌ ಮಾರ್ಟಿನ್‌ ದ್ವೀಪವನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟಿದ್ದರೆ ತಾನು ಅಧಿಕಾರದಲ್ಲಿ ಮುಂದುವರೆಯಬಹುದಿತ್ತು ಎಂದು ಹಸೀನಾ ತಮ್ಮ ಪದತ್ಯಾಗ ಭಾಷಣದಲ್ಲಿ ಹೇಳಿದ್ದರು ಎಂದು ವರದಿಯಾಗಿತ್ತು. ಈ ಬಗ್ಗೆ ಅಮೆರಿಕ ಪ್ರತಿಕ್ರಿಯಿಸಿದೆ.

ಆದರೆ ಹಸೀನಾರ ಪುತ್ರ ಸಜೀಬ್ ವಾಜಿದ್‌, ‘ನನ್ನ ತಾಯಿ ಯಾವುದೇ ಪದತ್ಯಾಗ ಭಾಷಣ ಸಿದ್ಧಪಡಿಸಿರಲಿಲ್ಲ. ಇದು ಸುಳ್ಳು’ ಎಂದಿದ್ದರು.

==

ಶೇಖ್‌ ಹಸೀನಾ ಮೇಲೆ ಕೊಲೆ ಕೇಸ್‌!

ಢಾಕಾ: ಅಧಿಕಾರ ಕಳೆದುಕೊಂಡು ಬಾಂಗ್ಲಾದೇಶ ಬಿಟ್ಟು ಭಾರತಕ್ಕೆ ಪರಾರಿ ಆಗಿರುವ ಬಾಂಗ್ಲಾದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ಹಾಗೂ 6 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಕಳೆದ ತಿಂಗಳು ಬಾಂಗ್ಲಾದಲ್ಲಿ ನಡೆದ ಗಲಭೆಯಲ್ಲಿ ದಿನಸಿ ಅಂಗಡಿ ಮಾಲೀಕನೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ.

ವಿವಾದಿತ ಮಿಸಲಾತಿ ವಿರೋಧಿಸಿ ಹಸೀನಾ ನೇತೃತ್ವದ ಅವಾಮಿ ಲೀಗ್‌ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಜು.19ರಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದ ಅಬು ಸೈಯದ್‌ ಎಂಬಾತನ ಹಿತೈಷಿಯೊಬ್ಬರು ಹಸೀನಾ, ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಒಬೈದುಲ್‌ ಕ್ವಾದರ್‌, ಮಾಜಿ ಗೃಹ ಸಚಿವ ಅಸಾದುಜ್ಜಮನ್ ಖಾನ್‌ ಕಮಲ್, ಮಾಜಿ ಪೊಲೀಸ್ ಅಧಿಕಾರಿ ಚೌಧರಿ ಅಬ್ದುಲ್ಲಾಹ್‌ ಅಲ್‌ ಮಮುನ್‌ ಹಾಗೂ ಅನೇಕ ಪೊಲೀಸ್‌ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.ಹಸೀನಾ ರಾಜೀನಾಮೆಯ ನಂತರ ನಡೆದ ಹಿಂಸಾಚಾರದಲ್ಲಿ 230ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, ಒಟ್ಟಾರೆ ಮೀಸಲಾತಿ ವಿರೋಧಿ ಪ್ರತಿಭಟನೆಯಲ್ಲಿ ಒಟ್ಟು 560 ಮಂದಿ ಬಲಿಯಾಗಿದ್ದಾರೆ.

==

ವಿಧ್ವಂಸಕರ ಶಿಕ್ಷಿಸಿ: ಹಸೀನಾ ಮೊದಲ ಹೇಳಿಕೆ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಪದಚ್ಯುತಗೊಂಡ ನಂತರ ತಮ್ಮ ಮೊದಲ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಜುಲೈನಲ್ಲಿ ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಗೆ ಒತ್ತಾಯಿಸಿದ್ದಾರೆ.ದಿಲ್ಲಿಯಲ್ಲಿರುವ ಹಸೀನಾ ಪರ ಪುತ್ರ ವಾಜಿದ್ ಹೇಳಿಕೆ ಬಿಡುಗಡೆ ಮಾಡಿ, ‘ಕಳೆದ ಜುಲೈನಿಂದ ವಿಧ್ವಂಸಕತೆ ಅನೇಕ ಜೀವಗಳು ಕಳೆದುಹೋಗಿವೆ. ಅವರಿಗೆ ನನ್ನ ಸಂತಾಪಗಳು. ಈ ನಿಮಿತ್ತ ಆ.15 ರಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಗೌರವಯುತವಾಗಿ ಮತ್ತು ಗಂಭೀರತೆಯಿಂದ ಆಚರಿಸಲು ನಾನು ನಿಮಗೆ ಮನವಿ ಮಾಡುತ್ತೇನೆ’ ಎಂದಿದ್ದಾರೆ.