ಸಾರಾಂಶ
ಶ್ರೀನಗರ : ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯಸ್ಥಾನಮಾನ ದೊರಕಿಸುವ ಸಲುವಾಗಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹಿಸುವ ಅಭಿಯಾನವನ್ನು ಆರಂಭಿಸಲಿದ್ದೇವೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ.
ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಮಾಡದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ. ರಾಜ್ಯ ಸ್ಥಾನ ಮಾನದ ಬಗ್ಗೆ ಸುಪ್ರೀಂ ಕೋರ್ಟು ಪಹಲ್ಗಾಂ ದಾಳಿ ಪ್ರಸ್ತಾಪಿಸಿದ್ದು, ನಿಜಕ್ಕೂ ದುರದೃಷ್ಟಕರ. ಪಹಲ್ಗಾಂ ದಾಳಿಕೋರರು ಮತ್ತು ಅದರ ಹಿಂದಿನ ಪಾಕಿಸ್ತಾನವು ನಮಗೆ ರಾಜ್ಯ ಸ್ಥಾನ ಕೊಡುವ ಬಗ್ಗೆ ನಿರ್ಧರಿಸಬೇಕೆ?’ ಎಂದು ಪ್ರಶ್ನಿಸಿದರು. ಜೊತೆಗೆ ‘ಮನೆ ಮನೆಗೂ ತೆರಳಿ ಸಹಿ ಸಂಗ್ರಹಿಸಿ, ಅದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತೇವೆ’ಎಂದು ಹೇಳಿದರು.
ರಾಜ್ಯಗಳ ಅಧಿಕಾರ ಕಸಿಯಲು ಕೇಂದ್ರ ಯತ್ನ: ಸ್ಟಾಲಿನ್ ಕಿಡಿ
ಚೆನ್ನೈ : ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯಗಳಿಂದ ಅಧಿಕಾರವನ್ನು ಕಬಳಿಸಲು ಯತ್ನಿಸುತ್ತಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.ಶುಕ್ರವಾರ ಚೆನ್ನೈನಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಸ್ಟಾಲಿನ್, ‘ಕೇಂದ್ರ ಸರ್ಕಾರವು ರಾಜ್ಯಗಳಿಗ ಹೆಚ್ಚುವರಿ ಅಧಿಕಾರವನ್ನು ಕೊಡುವ ಬದಲಿಗೆ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಅಧಿಕಾರಿ ಕಿತ್ತುಕೊಳ್ಳುತ್ತಿದೆ. ನಮಗೆ ಕೊಡಬೇಕಾದರ ನಿಧಿಗಳನ್ನು ಕೊಡುತ್ತಿಲ್ಲ. ಇದಕ್ಕೆ ನಮಗಿರುವ ಒಂದೇ ಮಾರ್ಗ ಅದುವೇ ನ್ಯಾಯಾಂಗ. ನಮಗೆ ಈಗ ಸಮಯ ಬಂದಿದೆ. ನಾವು ಕಾನೂನು ಸಮರ ಆರಂಭಿಸುತ್ತೇವೆ’ ಎಂದು ಹೇಳಿದರು.
ಬಿಜೆಪಿ ಆಳ್ವಿಕೆಯಲ್ಲಿ ಭಾರತ ನಿಜವಾಗಿಯೂ ಸ್ವತಂತ್ರವಾಗಿಲ್ಲ: ದೀದಿ
ಕೋಲ್ಕತಾ : ಭಾರತವು ಬಿಜೆಪಿ ಆಳ್ವಿಕೆಯಲ್ಲಿ ನಿಜವಾಗಿಯೂ ಸ್ವತಂತ್ರವಾಗಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಮಮತಾ,‘ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ನಿರಾಶಾವಾದಿ ಬಿಜೆಪಿಯ ಆಡಳಿತದಲ್ಲಿ ಜನರು ಇನ್ನು ಸ್ವಾತಂತ್ರ್ಯರಾಗಿಲ್ಲ. ಬಿಜೆಪಿಯು ಜನರ ಮತದಾನ ಹಕ್ಕು, ವಾಕ್ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳನ್ನು ಕಸಿಯುತ್ತಿದೆ’ ಎಂದು ಆರೋಪಿಸಿದರು.ನಾವು ದೇಶದಲ್ಲಿ ರಾಷ್ಟ್ರೀಯ ಐಕ್ಯತೆ ಮತ್ತು ಕೋಮು ಸೌಹಾರ್ದತೆ ಸಮಾಜ ಮೂಲಕ ನಿಜವಾದ ಸ್ವಾತಂತ್ರ್ಯ ಪಡೆಯಲು ಹೋರಾಡುತ್ತೇವೆ ಎಂದು ಮಮತಾ ಹೇಳಿದರು.
ಆಸ್ಟ್ರೇಲಿಯಾದಲ್ಲಿ ಸ್ವಾತಂತ್ರ್ಯ ದಿನಕ್ಕೆ ಖಲಿಸ್ತಾನಿಗಳಿಂದ ಅಡ್ಡಿ
ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಕಚೇರಿಯ ಹೊರಗೆ ಭಾರತೀಯರು ಏರ್ಪಡಿಸಿದ್ದ 79ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮಕ್ಕೆ ಖಲಿಸ್ತಾನಿಗಳು ಅಡ್ಡಿಪಡಿಸಿದ ಘಟನೆ ನಡೆದಿದೆ.ಭಾರತೀಯರು ಶಾಂತಿಯುತವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಜಮಾಯಿಸಿದ್ದರು. ಈ ವೇಳೆ ತಮ್ಮ ಧ್ವಜಗಳೊಂದಿಗೆ ಬಂದ ಖಲಿಸ್ತಾನಿಗಳು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಆಗ ಮಾತಿನ ಜಟಾಪಟಿ ನಡೆದಿದೆ. ಖಲಿಸ್ತಾನಿಗಳ ಘೋಷಣೆಗಳಿಗೆ ಪ್ರತಿಯಾಗಿ ಭಾರತೀಯರು ದೇಶಭಕ್ತಿ ಗೀತೆಗಳನ್ನು ಹಾಡಿ ಸವಾಲೆಸೆದಿದ್ದಾರೆ.ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆ ಬಳಿಕ ಭಾರತೀಯರು, ‘ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’ ಘೋಷಣೆ ಕೂಗಿ ಸಂಭ್ರಮದಿಂದ ಧ್ವಜಾರೋಹಣ ಮಾಡಿದ್ದಾರೆ ಎಂದು ದಿ ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.
ಕರ್ನಾಟಕ ರೀತಿ ಆಂಧ್ರದಲ್ಲೂ ಸ್ತ್ರೀಯರಿಗೆ ಉಚಿತ ಬಸ್ ಯಾನ
ಅಮರಾವತಿ : ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ ಯೋಜನೆ’ ರೀತಿ ನೆರೆಯ ಆಂಧ್ರ ಪ್ರದೇಶವೂ ‘ಸ್ತ್ರೀ ಶಕ್ತಿ’ ಯೋಜನೆಯನ್ನು ಶುಕ್ರವಾರ ಜಾರಿಗೆ ತಂದಿದೆ.ಸ್ವಾತಂತ್ರ್ಯ ದಿನದಂದು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಸಚಿವ ನಾರಾ ಲೋಕೇಶ್ ಅವರು ಸ್ತ್ರೀಶಕ್ತಿಗೆ ಚಾಲನೆ ನೀಡಿದರು. ಈ ವೇಳೆ ಬಸ್‌ನಲ್ಲಿ ಪ್ರಯಾಣಿಸಿದ ಮೂವರ ಹಿಂದೆ ಕೂರಲು ಮಹಿಳೆಯರು ಹರಸಾಹಸ ಪಟ್ಟ ಪ್ರಸಂಗವೂ ನಡೆಯಿತು.
ಈ ಯೋಜನೆ ಅಡಿಯಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದು 2.62 ಕೋಟಿ ಮಹಿಳೆಯರಿಗೆ ಸಹಾಯವಾಗಲಿದೆ.ಇತ್ತೀಚೆಗೆ ಕರ್ನಾಟಕದ ಶಕ್ತಿ ಯೋಜನೆ 500 ಕೋಟಿ ಗಡಿ ದಾಟಿತ್ತು.