2020ರಲ್ಲಿ ಭಾರತ ಮತ್ತು ಚೀನಾ ನಡುವೆ ಅತ್ಯಂತ ಹಿಂಸಾತ್ಮಕ ಘರ್ಷಣೆಗೆ ಸಾಕ್ಷಿಯಾಗಿದ್ದ ಗಲ್ವಾನ್‌ ಪ್ರದೇಶದಲ್ಲಿ ಭಾರತೀಯ ಸೇನೆಯು ಸ್ಮಾರಕವೊಂದನ್ನು ನಿರ್ಮಿಸಿದೆ. ಕೆಎಂ-120 ಎಂಬ ಪ್ರದೇಶದಲ್ಲಿ ನಿರ್ಮಿಸಲಾದ ಈ ಸ್ಮಾರಕದಲ್ಲಿ ಸಂಘರ್ಷದ ವೇಳೆ ಬಲಿಯಾದ 20 ಯೋಧರ ಪುತ್ಥಳಿ ನಿರ್ಮಿಸಲಾಗಿದೆ.

ಲೇಹ್‌: 2020ರಲ್ಲಿ ಭಾರತ ಮತ್ತು ಚೀನಾ ನಡುವೆ ಅತ್ಯಂತ ಹಿಂಸಾತ್ಮಕ ಘರ್ಷಣೆಗೆ ಸಾಕ್ಷಿಯಾಗಿದ್ದ ಗಲ್ವಾನ್‌ ಪ್ರದೇಶದಲ್ಲಿ ಭಾರತೀಯ ಸೇನೆಯು ಸ್ಮಾರಕವೊಂದನ್ನು ನಿರ್ಮಿಸಿದೆ. ಕೆಎಂ-120 ಎಂಬ ಪ್ರದೇಶದಲ್ಲಿ ನಿರ್ಮಿಸಲಾದ ಈ ಸ್ಮಾರಕದಲ್ಲಿ ಸಂಘರ್ಷದ ವೇಳೆ ಬಲಿಯಾದ 20 ಯೋಧರ ಪುತ್ಥಳಿ ನಿರ್ಮಿಸಲಾಗಿದೆ.

ಭಾನುವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ಸ್ಮಾರಕ ಉದ್ಘಾಟಿಸಿದರು. ಲಡಾಖ್‌ನ ಆಯಕಟ್ಟಿನ ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿ ರಸ್ತೆಯಲ್ಲಿರುವ ಕೆಎಂ-120 ಪೋಸ್ಟ್ ಬಳಿ ಇರುವ ಈ ಸ್ಮಾರಕವು ವಿಶ್ವದ ಅತ್ಯಂತ ಕಠಿಣ ಸೇನಾ ನಿಯೋಜನಾ ವಲಯಗಳಲ್ಲಿ ಒಂದಾಗಿದೆ. ಸೆಕ್ಟರ್ ನಾರ್ತ್‌ನಲ್ಲಿ, ಶೂನ್ಯಕ್ಕಿಂತ ಕಡಿಮೆ ತಾಪಮಾನ, ಕಡಿಮೆ ಆಮ್ಲಜನಕ ಮಟ್ಟಗಳು ಮತ್ತು ಕ್ಲಿಷ್ಟಕರ ಭೂಪ್ರದೇಶದ ನಡುವೆ ‘ಭಾರತ್ ರಣಭೂಮಿ ದರ್ಶನ’ ಉಪಕ್ರಮದಡಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಕೆಂಪು ಮತ್ತು ಕಪ್ಪು ಗ್ರಾನೈಟ್ ಬಳಸಿ ನಿರ್ಮಿಸಲಾದ ಈ ಸ್ಮಾರಕವನ್ನು ತ್ರಿಶೂಲ ಮತ್ತು ಡಮರು ರೂಪದಲ್ಲಿದೆ. ಇದರ ಮಧ್ಯಭಾಗದಲ್ಲಿ ಶಕ್ತಿಯನ್ನು ಪ್ರತಿನಿಧಿಸುವ ತ್ರಿಕೋನ ಸ್ಥಾಪನೆ ಮತ್ತು ಜ್ಯೋತಿ ಮತ್ತು ರಾಷ್ಟ್ರ ಧ್ವಜದಿಂದ ಸುತ್ತುವರೆದಿರುವ ಪರ್ವತಗಳಿವೆ. ಸ್ಮಾರಕದ ಸುತ್ತಲೂ ಗಲ್ವಾನ್ ಕಣಿವೆಯನ್ನು ರಕ್ಷಿಸಿದ ಸೈನಿಕರನ್ನು ಪ್ರತಿನಿಧಿಸುವ 20 ಕಂಚಿನ ಪ್ರತಿಮೆಗಳಿವೆ. ಸೇನಾ ಇತಿಹಾಸ ಸಾರುವ ವಸ್ತುಸಂಗ್ರಹಾಲಯ ಮತ್ತು ಡಿಜಿಟಲ್ ಗ್ಯಾಲರಿಯನ್ನು ಒಳಗೊಂಡಿದೆ. ಸಭಾಂಗಣವನ್ನು ಸಹ ನಿರ್ಮಿಸಲಾಗಿದೆ.

ಪ್ರವಾಸೋದ್ಯಮ ಉತ್ತೇಜನಕ್ಕಾಗಿ, ಸೇನೆಯು ಕೆಎಂ-23ರಲ್ಲಿ ಟೈಗರ್ ಬ್ರೇವ್ ಕೆಫೆ, ಕೆಎಂ-56ರಲ್ಲಿ ಮತ್ತೊಂದು ಕೆಫೆ ಮತ್ತು ಸ್ಮಾರಕ ಸ್ಥಳದಲ್ಲಿ ಬ್ರೇವ್‌ಹಾರ್ಟ್ ಬಿಸ್ಟ್ರೋ ಸೇರಿದಂತೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದೆ. ಸ್ಮಾರಕ ಅಂಗಡಿ,‘ಸೆಲ್ಫಿ ಪಾಯಿಂಟ್’ಗಳು ಇಲ್ಲಿವೆ.

ಶಬರಿಮಲೆ ದೇಗುಲದಲ್ಲಿ ಅಗ್ನಿ ಆಕಸ್ಮಿಕ: ಯಾವುದೇ ಅನಾಹುತ ಇಲ್ಲ

ಪಥನಂತಿಟ್ಟ (ಕೇರಳ): ಪವಿತ್ರ ಶಬರಿಮಲೆ ಅಯ್ಯಪ್ಪನ ದೇಗುಲದಲ್ಲಿ ಭಾನುವಾರ ಸಣ್ಣ ಪ್ರಮಾಣದ ಬೆಂಕಿ ಅನಾಹುತ ಸಂಭವಿಸಿದ್ದು, ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ದೇವಸ್ಥಾನದ ಸಂಕೀರ್ಣದಲ್ಲಿರುವ ಆಜಿ (ಪವಿತ್ರ ಅಗ್ಗಿಷ್ಟಿಕೆ) ಸಮೀಪದಲ್ಲಿರುವ ಆಲದ ಮರದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಯಿತು. ಮರದ ಮೇಲೆ ಅಳವಡಿಸಿದ್ದ ಎಲ್‌ಇಡಿ ದೀಪದಲ್ಲಿ ಉಂಟಾದ ಶಾರ್ಟ್‌ಸರ್ಕ್ಯೂಟ್‌ನಿಂದ ಅನಾಹುತ ಸಂಭವಿಸಿತ್ತು. ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ದೇಗುಲದ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದು, ಬೆಂಕಿ ವ್ಯಾಪಿಸುವ ಮುನ್ನವೇ ನಂದಿಸುವಲ್ಲಿ ಯಶಸ್ವಿಯಾದರು.ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ 18 ಪವಿತ್ರ ಮೆಟ್ಟಿಲುಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಸಂಪೂರ್ಣವಾಗಿ ಅಗ್ನಿ ಶಮನಗೊಂಡ ಬಳಿಕ ಮತ್ತೆ ಪ್ರವೇಶ ಕಲ್ಪಿಸಲಾಯಿತು.

ಯುಪಿ ಶಾಲೆಗಳಲ್ಲಿ ಇನ್ಮುಂದೆ ಮಕ್ಕಳಿಗೆ ಕನ್ನಡ ಸೇರಿ ಆರು ಪ್ರಾದೇಶಿಕ ಭಾಷೆಗಳ ಕಲಿಕೆ

ಲಖನೌ: ವಿವಿಧ ರಾಜ್ಯಗಳ ನಡುವೆ ಸಾಮರಸ್ಯ ಬೆಳೆಸುವುದಕ್ಕಾಗಿ ಉತ್ತರ ಪ್ರದೇಶದ ಸರ್ಕಾರ ವಿದ್ಯಾರ್ಥಿಗಳಿಗೆ ಕನ್ನಡ ಸೇರಿದಂತೆ 6 ಪ್ರಾದೇಶಿಕ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಕಲಿಸುವುದಕ್ಕೆ ಮುಂದಾಗಿದೆ.ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಘೋಷಿಸಿದ್ದಾರೆ. ‘ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಿತರಾಗಿ ರಾಜ್ಯ ಸರ್ಕಾರವು ಕನ್ನಡ, ತಮಿಳು, ಮಲಯಾಳಂ, ತೆಲುಗು, ಮರಾಠಿ ಮತ್ತು ಬಂಗಾಳಿ ಭಾಷೆಯನ್ನು ವೃತ್ತಿಪರ ವಿಷಯಗಳಲ್ಲಿ ಸೇರಿಸಲಿದೆ. ವಿದ್ಯಾರ್ಥಿಗಳು ಅದರಲ್ಲಿ ತಮಗೆ ಇಷ್ಟ ಬಂದ ಒಂದು ಭಾಷೆಯನ್ನು ಕಲಿಸಬಹುದು. ಸರ್ಕಾರವೇ ಕಲಿಕೆ ವೆಚ್ಚವನ್ನು ಭರಿಸುತ್ತದೆ’ ಎಂದಿದ್ದಾರೆ.

‘ಇದು ವಿದ್ಯಾರ್ಥಿಗಳಲ್ಲಿ ಭಾಷಾ ಕಲಿಕೆಯ ಜತೆಗೆ ಸಾಂಸ್ಕೃತಿಕ ಸಾಮರಸ್ಯವನ್ನು ಬಲಪಡಿಸುತ್ತದ. ವಿವಿಧ ಪ್ರದೇಶಗಳಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಬಣ್ಣಿಸಿದ್ದಾರೆ.