ಕಾಡು ನಾಶ ನಿಲ್ಲಿಸದಿದ್ರೆ ನ್ಯಾಯಾಲಯದ ಮೊರೆ

| Published : Aug 02 2024, 12:49 AM IST

ಕಾಡು ನಾಶ ನಿಲ್ಲಿಸದಿದ್ರೆ ನ್ಯಾಯಾಲಯದ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೇರಳವಾದ ಅರಣ್ಯ ಸಂಪತ್ತಿದ್ದು, ಕೆಲವು ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಅಕ್ರಮ ಕಾಡು ಒತ್ತುವರಿ, ಕಾಡು ನಾಶ ನಿರಂತರವಾಗಿ ನಡೆದಿದ್ದು, ತಕ್ಷಣ ಕಾನೂನು ಕ್ರಮ ಕೈಗೊಳ್ಳದಿದ್ದರೇ ಅರಣ್ಯ ಉಳಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯದ ಕದ ತಟ್ಟುವ ಕಾರ್ಯಕ್ಕೆ ಚಾಲನೆ ಕೊಡಲಾಗುವುದು ಎಂದು ವಾಯ್ಸ್ ಆಫ್ ಪಬ್ಲಿಕ್‌ನ ಸಂಸ್ಥಾಪಕ ಮತ್ತು ವಕೀಲರಾದ ಎನ್.ಪಿ. ಅಮೃತೇಶ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೇರಳವಾದ ಅರಣ್ಯ ಸಂಪತ್ತಿದ್ದು, ಕೆಲವು ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಅಕ್ರಮ ಕಾಡು ಒತ್ತುವರಿ, ಕಾಡು ನಾಶ ನಿರಂತರವಾಗಿ ನಡೆದಿದ್ದು, ತಕ್ಷಣ ಕಾನೂನು ಕ್ರಮ ಕೈಗೊಳ್ಳದಿದ್ದರೇ ಅರಣ್ಯ ಉಳಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯದ ಕದ ತಟ್ಟುವ ಕಾರ್ಯಕ್ಕೆ ಚಾಲನೆ ಕೊಡಲಾಗುವುದು ಎಂದು ವಾಯ್ಸ್ ಆಫ್ ಪಬ್ಲಿಕ್‌ನ ಸಂಸ್ಥಾಪಕ ಮತ್ತು ವಕೀಲರಾದ ಎನ್.ಪಿ. ಅಮೃತೇಶ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯದಲ್ಲಿ ಹೇರಳವಾದ ಅರಣ್ಯ ಸಂಪತ್ತು ಇದ್ದು, ಇಡೀ ಭಾರತ ದೇಶದಲ್ಲಿ ನಾವು ೧೫-೧೬ನೇ ಸ್ಥಾನದಲ್ಲಿ ಇದ್ದೇವೆ. ಪ್ರತಿಶತ ೩೩% ಅರಣ್ಯ ಪ್ರದೇಶ ಇರಬೇಕೆಂಬುದು ಸಾಮಾನ್ಯ ನೀತಿಯಾಗಿದೆ. ಆದರೆ, ಹಲವಾರು ರಾಜಕಾರಣಿಗಳ ಬೆಂಬಲದಿಂದ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಅಕ್ರಮ ಒತ್ತುವರಿ, ಅಕ್ರಮ ಕಾಡು ನಾಶ ನಿರಂತರವಾಗಿ ನಡೆದಿದ್ದು, ಕರ್ನಾಟಕದಲ್ಲಿ ಕೇವಲ ೨೧.೦೧% ಅರಣ್ಯವಿದೆ. ಈ ಹಿಂದೆ ನಡೆದ ಘಟನೆಗಳನ್ನು ನೆನಪಿಸಿಕೊಂಡರೆ ಬಳ್ಳಾರಿ, ತುಮಕೂರು, ಚಿತ್ರದುರ್ಗ, ಕನಕಪುರಗಳಲ್ಲಿ ನಡೆದಂತಹ ಅಕ್ರಮ ಗಣಿಗಾರಿಕೆಯ ಚಿತ್ರಣ ನಮ್ಮ ಕಣ್ಣು ಮುಂದೆ ಬಂದು ಅಪಾರವಾದ ಅರಣ್ಯ ನಾಶವಾಗಿರುವುದು ಕಂಡು ಬರುತ್ತದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಹೆಚ್ಚಿನ ಅರಣ್ಯ ನಾಶ, ಅಕ್ರಮ ಗಣಿಗಾರಿಕೆ ತಪ್ಪಿರುತ್ತದೆ ಎಂದರು.

೧೦ - ೧೫ ವರ್ಷಗಳ ಹಿಂದೆ ನಿಂತಿದ್ದಂತಹ ಅಕ್ರಮ ಗಣಿಗಾರಿಕೆಯು ಮತ್ತೊಂದು ಸ್ವರೂಪದಲ್ಲಿ ರಾಜ್ಯದಲ್ಲಿ ತಲೆಯೆತ್ತುತ್ತಿದೆ. ಇದಕ್ಕೆ ರಾಜ್ಯ, ಜಿಲ್ಲೆ, ತಾಲೂಕಿನ ಪ್ರಭಾವಿ ರಾಜಕಾರಣಿಗಳು, ನೇರವಾಗಿ ಅರಣ್ಯ ಮಂತ್ರಿಗಳು, ಉಸ್ತುವಾರಿ ಮಂತ್ರಿಗಳು ಪ್ರಭಾವಿ ಮಠದ ಸ್ವಾಮಿಗಳ ಮತ್ತು ಅರಣ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕು ಬೆಂಬಲದಿಂದ ಹಾಸನ ಜಿಲ್ಲೆಯ ಅರಕಲಗೂಡು, ಚನ್ನರಾಯಪಟ್ಟಣಗಳಲ್ಲಿ ಅಕ್ರಮ ಕಲ್ಲುಗಣಿಗಾರಿಕೆ, ಇವುಗಳನ್ನು ಉಚ್ಛ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನಿರಾಂತಕವಾಗಿ ಪರೋಕ್ಷವಾಗಿ ನಡೆಸುತ್ತಿದ್ದಾರೆ ಎಂದು ದೂರಿದರು.

ಅರಕಲಗೂಡು ತಾಲೂಕು, ಮುದಗನೂರು ಕಾವಲು, ಅರಸೀಕಟ್ಟೆ ಕಾವಲಿಗೆ ಸೇರಿದ ಸರ್ಕಾರದ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ, ಕ್ರಷರ್‌ ಚಟುವಟಿಕೆಯು ಸರಿಸುಮಾರು ೨೦ - ೨೫ ಎಕರೆ ಪ್ರದೇಶದಲ್ಲಿ ನಡೆದಿದ್ದು, ಈ ಅರಣ್ಯ ಪ್ರದೇಶವನ್ನು ತಮ್ಮ ಇಚ್ಛೆಗೆ ಬಂದಂತೆ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಪ್ರದೇಶವು ಅರಣ್ಯ ಇಲಾಖೆಗೆ ಸೇರಿರುತ್ತದೆ ಎಂದು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ೧೫೮.೩೨ ಎಕರೆ ಇರುವ ಅರಣ್ಯ ಎಂದು ಪ್ರಮಾಣ ಪತ್ರವನ್ನು ಸಲ್ಲಿಸಿದ್ದರೂ ಸಹ, ಸಾಮಾನ್ಯ ವ್ಯಕ್ತಿಯಿಂದ ಒಂದು ಅರ್ಜಿಯನ್ನು ಪಡೆದು, ೯೬.೧೮ ಎಕರೆಗೆ ಅರಣ್ಯ ಪ್ರದೇಶ ಎಂದು ಕಡಿಮೆ ಮಾಡಿ, ಕಂದಾಯ ಇಲಾಖೆಯ ಅಧಿಕಾರಿಗಳೊಡನೆ ಶಾಮೀಲಾಗಿ, ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆಗೆ ಅನುವು ಮಾಡಿ ಕೊಟ್ಟಿರುತ್ತಾರೆ ಎಂದರು.

ದಿನಾಂಕ ೧೫-೦೨-೨೦೨೪ ರಲ್ಲಿ ನಡೆದ ಹಾಸನ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ಟಾಸ್‌ಫೋರ್ಸ್ (ಗಣಿ) ಸಮಿತಿಯಲ್ಲಿ ನಡೆದ ೨೦೨೪ ಜನವರಿ ೨೪ರ ಸಭೆಯ ನಡವಳಿಯಂತೆ, ಉಚ್ಚ ನ್ಯಾಯಾಲಯದ ಆದೇಶಗಳ ಅಡಿಪಾಯದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು, ಮಲ್ಲಿಪಟ್ಟಣ ಹೋಬಳಿ, ಮುದಗನೂರು ಕಾವಲು ಗ್ರಾಮ ಸರ್ವೆ ನಂ. ೦೧, ಅರಸೀಕಟ್ಟೆ ಕಾವಲು ಗ್ರಾಮದ ಸ.ನಂ. ೧೧೬ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲುಗಣಿ ಗುತ್ತಿಗೆ ಹಾಗೂ ಕ್ರಷರ್ ಘಟಕಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಿದೆ ಎಂದು ಹೇಳಿದರು. ಕಲ್ಲುಗಣಿ ಮತ್ತು ಕ್ರಷರ್ ಚಟುವಟಿಕೆಗಳಿಗಾಗಿ, ಬೃಹತ್ ಯಂತ್ರೋಪಕರಣಗಳನ್ನು ಕಾನೂನು ಬಾಹಿರವಾಗಿ ಸ್ಥಾಪಿಸಿ, ಅದರಲ್ಲೂ ಈ ಯಂತ್ರಗಳನ್ನು ಯಾವುದೇ ರೀತಿಯ ಪರವಾನಗಿಗಳನ್ನು ಪಡೆಯದೆ, ಸ್ಥಾಪಿಸಿರುವಂತಹ ಸ್ಥಳಗಳೂ ಸಹ ಬೇರೊಬ್ಬರ ಜಮೀನಿನಲ್ಲಿ ಕಾರ್ಯ ನಿರ್ವಹಿಸಿರುತ್ತದೆ. ಈ ಗಣಿಗಾರಿಕೆಯಿಂದ ಪರಿಸರ ಮಾಲಿನ್ಯ ಮತ್ತು ಗಣಿಗಾರಿಕೆಯಿಂದ ಆದಂತಹ ದೊಡ್ಡ ದೊಡ್ಡ ಕಂದಕ ಹಳ್ಳಗಳು ನಿರ್ಮಾಣವಾಗಿದ್ದು, ಆ ಹಳ್ಳಗಳಲ್ಲಿ ಹಲವಾರು ಅರಣ್ಯ ಪ್ರಾಣಿಗಳು, ದನಕರುಗಳು ಬಿದ್ದು ಸಾಯುತ್ತಿರುವುದು ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿರುವುದಿಲ್ಲವೇ. ಇದಲ್ಲದೆ, ಅರಣ್ಯ ಸುತ್ತಮುತ್ತಲೂ ಇರುವ ವ್ಯವಸಾಯ ಮಾಡುವ ಜಮೀನಿನ ಮೇಲೆ ಕ್ರಷರ್‌ನಿಂದ ಹೊರಸೂಸುವ ಧೂಳು, ಶಬ್ದದಿಂದ ಸಾರ್ವಜನಿಕರ ಮೇಲೆ ಆಗುವ ಪರಿಣಾಮದ ಬಗ್ಗೆ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಏಕೆ ಎಂದು ಪ್ರಶ್ನಿಸಿದರು.

ಪುನರ್ ಪ್ರಾರಂಭಿಸಿರುವ ಕಲ್ಲುಗಣಿ, ಕ್ರಷರ್ ಚಟುವಟಿಕೆಗಳಿಗೆ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪ್ರಭಾವಿ ರಾಜಕಾರಣಿಗಳು ಬೆಂಬಲಕ್ಕೆ ನಿಂತಿರುತ್ತಾರೆ. ವಿಶೇಶವಾಗಿ ಈ ಮೇಲಿನ ಅಕ್ರಮ ಗಣಿಗಾರಿಕೆಯ ವಿಷಯದಲ್ಲಿ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಚರ್ಚೆ ಆಗಿದ್ದು, ವಿಷಯವನ್ನು ಸದನ ಸಮಿತಿಗೆ ವಿಚಾರಣೆಗೆ ವಹಿಸಲಾಗಿರುತ್ತದೆ. ಹೀಗಿದ್ದೂ, ಅಕ್ರಮ ಕಲ್ಲುಗಣಿ, ಕ್ರಷರ್ ಚಟುವಟಿಕೆ ಮುಂದುವರೆಯುತ್ತಿರುವುದನ್ನು ನಮ್ಮ ವೇದಿಕೆ ಬಲವಾಗಿ ಖಂಡಿಸುತ್ತದೆ. ತಕ್ಷಣ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು. ತಕ್ಷಣ ಕಾನೂನು ಕ್ರಮಗಳನ್ನು ಸಂಬಂಧಪಟ್ಟವರು ತೆಗೆದುಕೊಳ್ಳದೇ ಇದ್ದ ಪಕ್ಷದಲ್ಲಿ, ಅರಣ್ಯ ಉಳಿಸಲು ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯದ ಕದ ತಟ್ಟುವ ಕಾರ್ಯಕ್ಕೆ ಚಾಲನೆ ಕೊಡಬೇಕೆಂದು ತೀರ್ಮಾನಿಸಿರುತ್ತೇವೆ ಎಂದು ತಮ್ಮ ಉದ್ದೇಶ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಾಯ್ಸ್ ಆಫ್ ಪಬ್ಲಿಕ್‌ನ ಸಂಚಾಲಕಿ ದೀಕ್ಷಾ ಅಮೃತೇಶ್, ಹೀನಾ ಕೌಶರ್, ವಕೀಲರಾದ ಗಿರೀಶ್ ಗೌಡ, ಆನಂದ್ ಇತರರು ಉಪಸ್ಥಿತರಿದ್ದರು.