ಜುಲೈ ಕೊನೆಗೆ ‘ಅವೇಕ್ ಕುಡ್ಲ ಆ್ಯಪ್’ ಪ್ರಾಯೋಗಿಕ ಚಾಲನೆ

| Published : Jul 18 2025, 12:45 AM IST

ಸಾರಾಂಶ

ಅವೇಕ್ ಕುಡ್ಲ’ ಆ್ಯಪ್‌ ಮೂಲಕ ನಾಗರಿಕರು ತ್ಯಾಜ್ಯ ಮತ್ತು ಸಂಚಾರ ಸಮಸ್ಯೆಗಳನ್ನು ನೇರವಾಗಿ ದಾಖಲು ಮಾಡಬಹುದಾಗಿದೆ. ದಾಖಲಾದ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ, ಸ್ಥಳೀಯ ನಾಗರಿಕರು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪರಿಹರಿಸುವ ಕಾರ್ಯ ನಿರ್ವಹಿಸಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ಸಂಸ್ಥೆಯು ನಗರದ ಜಲ್ಮಂತ ಸಮಸ್ಯೆಗಳಾದ ತ್ಯಾಜ್ಯ ನಿರ್ವಹಣೆ ಹಾಗೂ ಸಂಚಾರ ನಿರ್ವಹಣೆ ವಿಷಯದಲ್ಲಿ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಇದೀಗ 10 ವರ್ಷಗಳು ಪೂರ್ಣಗೊಳ್ಳುವ ಸಂದರ್ಭದಲ್ಲಿ ಈ ಪರಿಕಲ್ಪನೆಯನ್ನು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿಸ್ತರಿಸಿ ಜನಜಾಗೃತಿ ಮೂಡಿಸಿ, ಸರ್ಕಾರದ ವ್ಯವಸ್ಥೆ ಮತ್ತು ಜನರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಲು ‘ಅವೇಕ್ ಕುಡ್ಲ’ ಆ್ಯಪ್‌ಗೆ ಜುಲೈ ಕೊನೆ ವಾರದಲ್ಲಿ ಪ್ರಾಯೋಗಿಕ ಚಾಲನೆ ನೀಡಲಾಗುವುದು ಎಂದು ಟ್ರಸ್ಟ್‌ ಅಧ್ಯಕ್ಷ ಸೀತಾರಾಮ ಎ. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಅವೇಕ್ ಕುಡ್ಲ’ ಎಂಬ ಪರಿಕಲ್ಪನೆಯೊಂದಿಗೆ ಮಂಗಳೂರನ್ನು ಮಾದರಿ ನಗರವನ್ನಾಗಿ ರೂಪಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ. ಈ ಪರಿಕಲ್ಪನೆಯಡಿಯಲ್ಲಿ ಜಾಗೃತ ಹಾಗೂ ಜವಾಬ್ದಾರಿಯುತ ಸಮಾಜದ ಸಹಯೋಗದ ಮೂಲಕ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದು, ಜನರಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವುದು ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರಿಕರ ನಡುವೆ ಸಮನ್ವಯ ಸಾಧಿಸುವುದು ಪ್ರಮುಖ ಉದ್ದೇಶವಾಗಿದೆ. ಸಮರ್ಪಕ ತ್ಯಾಜ್ಯ ವಿಲೇವಾರಿ ಮತ್ತು ಸಂಚಾರ ನಿರ್ವಹಣೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಯೋಜನೆಯನ್ನು ರೂಪಿಸಲಾಗಿದೆ. ಪಚ್ಚನಾಡಿ ಡಂಪಿಂಗ್ ಯಾರ್ಡ್‌ ಪರಿಸ್ಥಿತಿಯನ್ನು ಮನಗಂಡು, ಮನೆ ಹಂತದಲ್ಲಿಯೇ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸುವುದು ಹಾಗೂ ಹಸಿ ಕಸ ತ್ಯಾಜ್ಯ ವಿಲೇವಾರಿಗೆ ಪ್ರೋತ್ಸಾಹ ನೀಡುವುದು ಈ ಪರಿಕಲ್ಪನೆಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯವನ್ನು ಪ್ರೇರೇಪಿಸುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂದಾಜು 1,20,000 ಮನೆಗಳಿಗೆ ಭೇಟಿ ನೀಡಿ, ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಆಶಯವನ್ನು ಹೊಂದಲಾಗಿದೆ ಎಂದರು.

ಸಮಸ್ಯೆ ದಾಖಲು ಅವಕಾಶ:

‘ಅವೇಕ್ ಕುಡ್ಲ’ ಆ್ಯಪ್‌ ಮೂಲಕ ನಾಗರಿಕರು ತ್ಯಾಜ್ಯ ಮತ್ತು ಸಂಚಾರ ಸಮಸ್ಯೆಗಳನ್ನು ನೇರವಾಗಿ ದಾಖಲು ಮಾಡಬಹುದಾಗಿದೆ. ದಾಖಲಾದ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ, ಸ್ಥಳೀಯ ನಾಗರಿಕರು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪರಿಹರಿಸುವ ಕಾರ್ಯ ನಿರ್ವಹಿಸಲಿದೆ. ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಿ, ಜಾಗೃತಿ ಮೂಡಿಸಿ, ಸಮನ್ವಯತೆಯಿಂದ ಸಮಸ್ಯೆಯನ್ನು ಬಗೆಹರಿಸಿ, ಮೇಲ್ವಿಚಾರಣೆ ಮತ್ತು ಅನುಸರಣೆಯ ಮೂಲಕ ‘ನಮ್ಮ ಪರಿಸರ - ನಮ್ಮ ಜವಾಬ್ದಾರಿ’ ಎಂಬ ತತ್ವದೊಂದಿಗೆ ನಿರಂತರತೆಯನ್ನು ಕಾಯ್ದುಕೊಳ್ಳಲಾಗುವುದು ಎಂದರು.ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳನ್ನು 20 ಕ್ಲಸ್ಟರ್‌ಗಳಾಗಿ (ಒಂದು ಕ್ಲಸ್ಟರ್ -3 ವಾರ್ಡ್‌ಗಳು) ವಿಂಗಡಿಸಿ, ಪ್ರತಿ ಕ್ಲಸ್ಟರ್‌ಗೆ ಒಬ್ಬರಂತೆ ಒಟ್ಟು 20 ಸಂಯೋಜಕರನ್ನು ನೇಮಿಸುವ ಯೋಜನೆ ರೂಪಿಸಲಾಗಿದೆ. ಈ ಸಂಯೋಜಕರುಗಳಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಲು ತಜ್ಞರ ಮಾರ್ಗದರ್ಶನದಲ್ಲಿ ಒಂದು ವಾರದ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು.

ಇವರು ಸ್ಥಳೀಯ ಸಂಘ-ಸಂಸ್ಥೆಗಳಿಗೆ, ಮನೆಗಳಿಗೆ ಹಾಗೂ ವಾಣಿಜ್ಯ ಕೇಂದ್ರಗಳಿಗೆ ತೆರಳಿ ತ್ಯಾಜ್ಯ ನಿರ್ವಹಣೆ, ಸಂಚಾರ ನಿಯಂತ್ರಣ ಹಾಗೂ ಪರಿಸರ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಪ್ರತಿ ಕ್ಲಸ್ಟರ್ ಹಂತದಲ್ಲಿ ದೇಶಾಭಿಮಾನವನ್ನು ಉತ್ತೇಜಿಸುವ ಕಾರ್ಯಕ್ರಮಗಳೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲು ಮೂರು ಹಂತಗಳ ಆಡಳಿತ ವ್ಯವಸ್ಥೆಯನ್ನು ಈಗಾಗಲೇ ರೂಪಿಸಲಾಗಿದೆ ಎಂದರು.

ಟ್ರಸ್ಟ್ ಖರೀದಿಸಿದ ಅಂಬಾನಗರದ ನಿವೇಶನದಲ್ಲಿ ಕಟ್ಟಡ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ್ದು. ಇಲ್ಲಿ ಮಾಹಿತಿ ಮತ್ತು ತರಬೇತಿ ಕೇಂದ್ರ, ಸ್ವ ಉದ್ಯೋಗ, ಮಹಿಳಾ ಸಬಲೀಕರಣ, ಬಾಲ ವಿಕಸನ ಮತ್ತು ಹಿರಿಯ ನಾಗರಿಕರ ಪುನಶ್ವೇತನಕ್ಕಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟೆಕಾರ್‌, ಟ್ರಸ್ಟಿಗಳಾದ ನಿಕೇತನ್‌ ಶೆಟ್ಟಿ, ಸಲಹೆಗಾರರಾದ ಡಾ.ಪ್ರವೀಣ್‌, ಡಾ.ನಯನ, ಮಂಜುಳಾ ಮತ್ತಿತರರಿದ್ದರು.