ರಾಷ್ಟ್ರದ ‘ನಾಥ’ ಪರಂಪರೆ ಮಠಗಳಿಗೆ ‘ಚುಂಚನಗಿರಿ’ ಅಗ್ರಮಾನ್ಯ: ಸ್ವಾಮೀಜಿ

| Published : Jan 17 2024, 01:46 AM IST

ರಾಷ್ಟ್ರದ ‘ನಾಥ’ ಪರಂಪರೆ ಮಠಗಳಿಗೆ ‘ಚುಂಚನಗಿರಿ’ ಅಗ್ರಮಾನ್ಯ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನ, ಅಕ್ಷರ, ಜ್ಞಾನ ದಾಸೋಹ, ಕೌಶಲ್ಯಾಭಿವೃದ್ಧಿ ಸೇರಿದಂತೆ ಯಾವುದೇ ತರವಾದ ಸೇವೆ ನೀಡಲು ಆದಿಚುಂಚನಗಿರಿ ಮಠ ಸಜ್ಜಾಗಿದೆ. ಆದರೆ, ಆ ಮಠ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸೇವೆ ನೀಡಬೇಕೆಂದರೆ ಪಡೆದುಕೊಂಡದಕ್ಕೆ ಪ್ರತಿಯಾಗಿ ಮಠದ ಕಣಜ ತುಂಬಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಕೆಲಸ ನಿರಂತವಾಗಿ ನಡೆಯುತ್ತಿದೆ. ಪಡೆದುಕೊಂಡು ಕೊಡುವ ವ್ಯಕ್ತಿ ಕೃತಜ್ಞನಾಗುತ್ತಾನೆ. ಹಾಗೇ ಹೋಗುವ ವ್ಯಕ್ತಿ ಕೃತಘ್ನನಾಗುತ್ತಾನೆ. ಕೃತಜ್ಞತೆಗೂ ಕೃತಘ್ನತೆಗೂ ಬಹಳ ವ್ಯತ್ಯಾಸವಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಷ್ಟ್ರದಲ್ಲಿರುವ ಸಹಸ್ರಾರು ಸಂಖ್ಯೆಯಲ್ಲಿನ ನಾಥ ಪರಂಪರೆಯ ಮಠಮಾನ್ಯಗಳಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ಎಲ್ಲ ಮಠಗಳಿಗೆ ಅಗ್ರಮಾನ್ಯವಾಗಿ ನಿಂತಿದೆ ಎಂದು ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ 79ನೇ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಯೋಗಿ- ಜೋಗಿ ಸಂಗಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಅನ್ನ, ಅಕ್ಷರ, ಜ್ಞಾನ ದಾಸೋಹ, ಕೌಶಲ್ಯಾಭಿವೃದ್ಧಿ ಸೇರಿದಂತೆ ಯಾವುದೇ ತರವಾದ ಸೇವೆ ನೀಡಲು ಆದಿಚುಂಚನಗಿರಿ ಮಠ ಸಜ್ಜಾಗಿದೆ. ಆದರೆ, ಆ ಮಠ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸೇವೆ ನೀಡಬೇಕೆಂದರೆ ಪಡೆದುಕೊಂಡದಕ್ಕೆ ಪ್ರತಿಯಾಗಿ ಮಠದ ಕಣಜ ತುಂಬಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಕೆಲಸ ನಿರಂತವಾಗಿ ನಡೆಯುತ್ತಿದೆ ಎಂದರು.

ಪಡೆದುಕೊಂಡು ಕೊಡುವ ವ್ಯಕ್ತಿ ಕೃತಜ್ಞನಾಗುತ್ತಾನೆ. ಹಾಗೇ ಹೋಗುವ ವ್ಯಕ್ತಿ ಕೃತಘ್ನನಾಗುತ್ತಾನೆ. ಕೃತಜ್ಞತೆಗೂ ಕೃತಘ್ನತೆಗೂ ಬಹಳ ವ್ಯತ್ಯಾಸವಿಲ್ಲ. ಆದಿಶ್ರೀಮಠದ ಮೂಲಕ ನಡೆಯುತ್ತಿರುವ ಸೇವಾ ಕ್ಷೇತ್ರವನ್ನು ಜನ ಸಾಮಾನ್ಯರಿಗೆ ತಿಳಿಸುವ ಜೊತೆಗೆ ಇಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸುವ ಕೆಲಸವನ್ನು ಜೋಗಪ್ಪಂದಿರು ಮಾಡಬೇಕು ಎಂದರು.

ಸಮಾಜದಲ್ಲಿ ಸಿಗುವಂತಹ ಎಲ್ಲ ಸಂಪನ್ಮೂಲಗಳನ್ನು ಶ್ರೀಮಠಕ್ಕೆ ತಂದು ತನ್ಮೂಲಕ ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಪರಸ್ಪರ ಕೆಲಸ ಮಾಡುವ ದೊಡ್ಡ ಜವಾಬ್ದಾರಿ ಜೋಗಪ್ಪಂದಿರ ಮೇಲಿದೆ. ನಾಗರೀಕತೆ ತುಂಬಿ ತುಳುಕುತ್ತಿರುವ ಈ ಸಮಾಜದ ಮಧ್ಯದಲ್ಲಿ ಯಾವ ಕೀಳರಿಮೆಯೂ ಇಲ್ಲದ ರೀತಿಯಲ್ಲಿ ಜೋಗಪ್ಪಂದಿರು ಬದುಕಬೇಕು. ಆ ರೀತಿ ಬದುಕಲು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದರು.

ಒಬ್ಬ ವ್ಯಕ್ತಿ ಸಂತೋಷವಾಗಿ ಬದುಕಬೇಕೆಂದರೆ ಅವನ ಬದುಕು, ದೇಹ, ನೋಟದಲ್ಲಿ ಶಿಸ್ತು ಎಂಬ ಶೌಚ ಇರಬೇಕು. ನಮ್ಮ ಇಂದ್ರೀಯಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡದ್ದೇ ಆದರೆ ಬದುಕು ಸುಂದರವಾಗಿರುತ್ತದೆ. ಬದುಕಿನಲ್ಲಿ ಕಷ್ಟ ಸುಖ ಎರಡೂ ಬರುತ್ತವೆ ಬರುವುದು ಹೋಗಲಿಕ್ಕೋಸ್ಕರ. ಈ ಎಲ್ಲ ಸಂದರ್ಭದಲ್ಲಿಯೂ ಸಹ ಸೋಲು ಗೆಲುವು ನೋವು ನಲಿವುಗಳ ನಡುವೆ ಸಂತೋಷವನ್ನಿಟ್ಟುಕೊಳ್ಳಬೇಕು ಎಂದರು.

ಸಮಾರಂಭ ಉದ್ಘಾಟಿಸಿದ ರಾಜ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಮಾತನಾಡಿ, ಶ್ರೀಗಳ ಆಶೀರ್ವಾದಿಂದ ಜಾತ್ಯಾತೀತವಾಗಿ ಸಹಸ್ರಾರು ಸಂಖ್ಯೆಯ ಯೋಗಿ ಮತ್ತು ಜೋಗಿಗಳನ್ನು ಒಟ್ಟಿಗೆ ಸೇರಿಸುವುದು ಪುಣ್ಯದ ಕೆಲಸ. ಇಂತಹ ಬೆಳವಣಿಗೆಯಿಂದ ರಾಷ್ಟ್ರ ಅಭಿವೃದ್ಧಿ ದೇಶವಾಗಿ ಬೆಳೆಯುತ್ತದೆ ಎಂದರು.

ಐತಿಹಾಸಿಕ ಪರಂಪರೆ ಹೊಂದಿರುವ ಶ್ರೀಮಠದಲ್ಲಿ ಶಿಕ್ಷಣ ಪಡೆದಿರುವ ಪ್ರತಿಯೊಬ್ಬರೂ ಸಹ ಉದಾತ್ಥ ಮನೋಭಾವ ಬೆಳೆಸಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸಬೇಕು. ಶ್ರೀಮಠದಲ್ಲಿ ಸಿಗುವ ಹರ್ಷ ಮತ್ತು ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.

ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಮಾತನಾಡಿ, ಪ್ರಪಂಚದಾದ್ಯಂತ ಇರುವ ಶಾಖಾ ಮಠಗಳಲ್ಲಿ ಉಳಿದುಕೊಂಡು ಮಕ್ಕಳಿಗೆ ಬೇಕಾದ ಶಿಕ್ಷಣ ಕೊಡಿಸಬಹುದಾದ ವ್ಯವಸ್ಥೆಯನ್ನು ಕಲ್ಪಿಸಿರುವ ಯಾವುದಾದರೂ ಮಠ ಇದ್ದರೆ ಅದು ಆದಿಚುಂಚನಗಿರಿ ಮಹಾ ಸಂಸ್ಥಾನಮಠ ಮಾತ್ರ. ಇದು ನಮ್ಮೆಲ್ಲ ಸೌಭಾಗ್ಯವೇ ಸರಿ. ಅವಶ್ಯಕತೆ ಇರುವವರು ಶ್ರೀಮಠದಿಂದ ಏನು ಬೇಕಾದರೂ ಪಡೆಯಬಹುದು ಎಂದರು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಪ್ರಾಸ್ತಾವಿಕ ನುಡಿ ನುಡಿದರು. ಹಿರಿಯ ಪತ್ರಕರ್ತ ಹರಿಪ್ರಸಾದ್, ಮದ್ದೂರು ಶಾಸಕ ಕೆ.ಎಂ.ಉದಯ್‌, ಮೈಸೂರಿನ ಮಾಜಿ ಶಾಸಕ ಎಲ್.ನಾಗೇಂದ್ರ, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು ಮಾತನಾಡಿದರು.

ಈ ವೇಳೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಮಠದ ಬ್ರಹ್ಮಚಾರಿ ಸಾಯಿಕೀರ್ತಿನಾಥ ಸ್ವಾಮೀಜಿ ಸೇರಿದಂತೆ ಸಹಸ್ರಾರು ಮಂದಿ ಯೋಗಿ ಮತ್ತು ಜೋಗಿಗಳು ಮಠದ ಭಕ್ತರು ಇದ್ದರು.‘ತಪಸ್ಸಿನ ಅವಶ್ಯಕತೆ ಇದೆ’

ಜೋಗಪ್ಪಂದಿರೆಂದರೆ ಊರಿಗೆ ಧಾರ್ಮಿಕ ಮುಖಂಡರಿದ್ದಂತೆ. ನಿಮ್ಮ ನಡೆ, ನುಡಿ, ಶೌಚ, ಸಂತೋಷ ಎಲ್ಲವನ್ನೂ ನೋಡುತ್ತಿರುತ್ತಾರೆ. ಅದಕ್ಕೊಂದಿಷ್ಟು ತಪಸ್ಸಿನ ಅವಶ್ಯಕತೆ ಇರುತ್ತದೆ. ತಪಸ್ಸಿನ ಜೊತೆಗೆ ನಮ್ಮ ತತ್ವ, ಮೌಲ್ಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾಥ ಪರಂಪರೆಯ ಮೌಲಿಕವಾಗಿರುವ ನಾಲ್ಕು ನಿಯಮಗಳ ಚೌಕಟ್ಟಿನಲ್ಲಿ ಸಮಾಜವನ್ನು ಮತ್ತಷ್ಟು ಎತ್ತರಕ್ಕೆ ಕಟ್ಟಲು ಸಾಧ್ಯವಾಗುತ್ತದೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ಮುಂದಿನ ದಿನಗಳಲ್ಲಿ ಪುರುಷಪ್ಪಂದಿರು, ಜೋಗಪ್ಪಂದಿರು, ಚೂಡಪ್ಪಂದಿರು ಮತ್ತು ಸುಬೇದಾರ್‌ಗಳಿಗೆ ಶ್ರೀಮಠದ ನಾಥ ಪರಂಪರೆ ಇರುವ ಮೌಲಿಕ ತತ್ವ ನಿಯಮಗಳನ್ನು ಸೃಷ್ಟಿಸಿ ಅವುಗಳನ್ನು ಅನುಸರಿಸುವ ತರಬೇತಿಯನ್ನೂ ಸಹ ನೀಡಲಾಗುವುದು.

- ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀಮಠದ ಪೀಠಾಧ್ಯಕ್ಷ

ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಉತ್ತಮ ಶಿಕ್ಷಣ ಸಿಕ್ಕರೆ ಆ ವ್ಯಕ್ತಿ ಬಹಳ ಎತ್ತರಕ್ಕೆ ಬೆಳೆಯಬಹುದು ಅಥವಾ ಎತ್ತರಕ್ಕೆ ಬೆಳೆದಿರುವ ವ್ಯಕ್ತಿಯ ಜೊತೆ ನಿಲ್ಲಲು ಸಾಧ್ಯವಾಗುತ್ತದೆ. ಅಂತಹ ಅವಕಾಶ ಮಾಡಿಕೊಡುತ್ತಿರುವ ಶ್ರೀಮಠದ ಕಾರ್ಯ ನಿಜಕ್ಕೂ ಶ್ಲಾಘನೀಯ. ಹಾಗಾಗಿ ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟನ್ನು ಶ್ರೀಮಠಕ್ಕೆ ಕೊಟ್ಟರೆ ಅದು ಪುಣ್ಯದ ಕೆಲಸಕ್ಕೆ ಬಳಕೆಯಾಗುತ್ತದೆ.

- ಮಂಕಾಳ ಎಸ್.ವೈದ್ಯ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ