ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನಾದ್ಯಂತ ರೈತರು ಬಿತ್ತನೆ ಮಾಡಿದ್ದ ಶುಂಠಿ ಬೆಳೆಯು ಕೊಳೆ ರೋಗಕ್ಕೆ ತುತ್ತಾಗಿದ್ದು ಅವಧಿಗೆ ಮುನ್ನವೇ ಶುಂಠಿ ಕೊಯ್ಲನ್ನು ರೈತರು ಪ್ರಾರಂಭಿಸಿದ್ದಾರೆ.ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಶುಂಠಿ ಧಾರಣೆಯು ದಿಢೀರ್ ಕುಸಿತವಾಗಿದ್ದು, ಕೊಳೆ ರೋಗದಿಂದಾಗಿ ಉತ್ತಮ ಗುಣಮಟ್ಟದ ಶುಂಠಿಯು ಸಿಗುತ್ತಿಲ್ಲ. ಈ ನೆಪವನ್ನೇ ಇಟ್ಟುಕೊಂಡು ವ್ಯಾಪಾರಸ್ಥರು ರೈತರ ಬಳಿ ಕಡಿಮೆ ಬೆಲೆಗೆ ಶುಂಠಿಯನ್ನು ಕೊಂಡುಕೊಳ್ಳುತ್ತಿದ್ದು ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಫೆಬ್ರುವರಿಯಲ್ಲಿ ಶುಂಠಿ ನಾಟಿ ಆಗಿದ್ದು, 6 ತಿಂಗಳಾದರೂ ನಿರೀಕ್ಷೆಗೆ ತಕ್ಕಂತೆ ಗೆಡ್ಡೆ ಬೆಳವಣಿಗೆ ಆಗಿಲ್ಲ.ನಿರಂತರ ಮಳೆಯಿಂದಾಗಿ ಕೊಳೆರೋಗ ಆವರಿಸಿದೆ. ಹೀಗಾಗಿ, ಫಸಲು ಕರಗಿ ಹೋಗುವ ಬದಲು ಸಿಕ್ಕಷ್ಟು ಸಿಗಲಿ ಎಂದು ಜುಲೈ ಕೊನೆಯ ವಾರದಿಂದಲೇ ರೈತರು ಶುಂಠಿ ಕಟಾವು ಮಾಡಿ ಮಾರಾಟ ಮಾಡುಲು ಮುಂದಾಗಿದ್ದಾರೆ. 60 ಕೆ.ಜಿ ತೂಕದ 1 ಚೀಲಕ್ಕೆ ಆರಂಭದಲ್ಲಿ ₹2 ಸಾವಿರ ಬೆಲೆ ದೊರಕಿತ್ತು. ಕೊಯ್ಲು ಹೆಚ್ಚಾದ ಕಾರಣ ಈಗ ದರವು 1200-1300ಕ್ಕೆ ಕುಸಿದಿದೆ.
ಬೆಲೆಯ ಏರಿಳಿತ: ಕಳೆದ ವರ್ಷ ಶುಂಠಿಗೆ ಉತ್ತಮ ಬೆಲೆ ಇದ್ದುದ್ದರಿಂದ ಪ್ರಸ್ತುತ ವರ್ಷವೂ ಇದೇ ಬೆಲೆ ಮುಂದುವರಿಯಬಹುದು ಎಂಬ ಆಶಾಭಾವನೆಯೊಂದಿಗೆ ರೈತರು ಈ ವರ್ಷವೂ ಕೂಡ ಬೀಜದ ದರವು ಹೆಚ್ಚಾಗಿದ್ದರೂ ಕೂಡ ಅದನ್ನು ಲೆಕ್ಕಿಸದೆ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ಬಿತ್ತನೆ ಮಾಡಿದ್ದ ಶುಂಠಿ ಬೆಳೆಯು ಭೂಮಿಯಲ್ಲೇ ಕೊಳೆಯಲು ಪ್ರಾರಂಭಿಸಿದೆ2023ರ ಜನವರಿಯಲ್ಲಿ ಹಸಿ ಶುಂಠಿ ಬೆಲೆ ಪ್ರತಿ ಚೀಲಕ್ಕೆ (60 ಕೆ.ಜಿ) ₹2,000ದಿಂದ ₹2,200 ಇತ್ತು. ಮಾರ್ಚ್- ಏಪ್ರಿಲ್‌ನಲ್ಲಿ 5 ಸಾವಿರಕ್ಕೆ ತಲುಪಿತ್ತು. ಮೇ ಮತ್ತು ಜೂನ್‌ನಲ್ಲಿ ₹10,000ರಿಂದ ₹11,000ದವರೆಗೂ ಮುಟ್ಟಿತ್ತು.
ಅದೇ ವರ್ಷದ ಜುಲೈ-ಆಗಸ್ಟ್‌ನಲ್ಲಿ ಹೊಸ ಶುಂಠಿಯು ಮಾರುಕಟ್ಟೆಗೆ ಬಂದಿದ್ದರಿಂದ ಬೆಲೆಯು ₹3,500ಕ್ಕೆ ಇಳಿದಿತ್ತು. ಸೆಪ್ಟೆಂಬರ್‌ನಲ್ಲಿ ₹3,800 ಹಾಗೂ ಅಕ್ಟೋಬರ್‌ನಲ್ಲಿ ₹4 ಸಾವಿರದಿಂದ ₹5 ಸಾವಿರ ತಲುಪಿತ್ತು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ₹4500-₹4800 ಬೆಲೆ ಇದ್ದರೆ, ಪ್ರಸಕ್ತ ವರ್ಷದ ಜನವರಿ ಮತ್ತು ಫೆಬ್ರುವರಿಯಲ್ಲಿ ₹4000- ₹4500 ಬೆಲೆ ಇತ್ತು ಎಂದು ವ್ಯಾಪಾರಿಗಳು ಹೇಳುತ್ತಾರೆ.ಮಂಜೇಗೌಡ ಶುಂಠಿ ಬೆಳೆಗಾರ:ಕಳೆದ ವರ್ಷ ಶುಂಠಿ ಬೆಲೆ ಏರಿಕೆ ಜೊತೆಗೆ ಬಿತ್ತನೆ ಬೀಜ ಗೊಬ್ಬರ ಕೂಲಿ ದರವೂ ಏರಿತ್ತು. ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ಈಗ ಬೆಲೆ ಕುಸಿದಿದೆ ಜೊತೆಗೆ ಕೂಲಿ ಪೈಪ್‌ಲೈನ್ ಕೊಟ್ಟಿಗೆ ಗೊಬ್ಬರ,ಕೋಳಿಗೊಬ್ಬರ ರಾಸಾಯನಿಕಗಳ ದರಗಳಲ್ಲೂ ಗಣನೀಯವಾಗಿ ಏರಿಕೆಯಾಗಿದೆ. 1 ಎಕರೆಯಲ್ಲಿ ಶುಂಠಿ ಬೆಳೆಯಲು ಈ ವರ್ಷ 5-6 ಲಕ್ಷ ವೆಚ್ಚವಾಗಲಿದೆ'''''''' ಎಂದು ರೈತರು ವಿವರಿಸುತ್ತಾರೆ. ಈಗಿನ ಬೆಲೆಯಲ್ಲಿ ಒಂದು ಎಕರೆಯಲ್ಲಿ ಬೆಳೆದ ಶುಂಠಿ ಮಾರಾಟ ಮಾಡಿದರೆ 2-3 ಲಕ್ಷ ಸಿಗುತ್ತಿದೆ. ಬೆಳೆಗಾರರು ಈಗಾಗಲೇ ಎಕರೆಗೆ 5 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದು ಮಾಡಿದ್ದ ಖರ್ಚಿನ ಅರ್ಧದಷ್ಟು ಮಾತ್ರ ಸಿಗುವಂತಾಗಿದೆ ಎಂದು ಹೇಳುತ್ತಾರೆ.