ಸಾರಾಂಶ
ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾಲ ನೀಡಿರುವ ಕಂಪನಿಗಳು ಸಾಲದ ಮರುಪಾವತಿಗೆ ರೈತರು ಅಥವಾ ಸಾರ್ವಜನಿಕರಲ್ಲಿ ಒತ್ತಡ ಹೇರಬಾರದು. ಒಂದು ವೇಳೆ ಒತ್ತಡದಿಂದ ವಸೂಲಾತಿಗೆ ಮುಂದಾದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪವನ್ ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾಲ ನೀಡಿರುವ ಕಂಪನಿಗಳು ಸಾಲದ ಮರುಪಾವತಿಗೆ ರೈತರು ಅಥವಾ ಸಾರ್ವಜನಿಕರಲ್ಲಿ ಒತ್ತಡ ಹೇರಬಾರದು. ಒಂದು ವೇಳೆ ಒತ್ತಡದಿಂದ ವಸೂಲಾತಿಗೆ ಮುಂದಾದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪವನ್ ಕುಮಾರ್ ಹೇಳಿದರು.ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ವ್ಯವಸ್ಥಾಪಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರು ಮತ್ತು ಸಾರ್ವಜನಿಕರಿಗೆ ಸಾಲ ನೀಡಿ, ಸದರಿ ಸಾಲದ ವಸೂಲಾತಿಗೆ ಕಿರುಕುಳ ನೀಡುತ್ತಿದ್ದು, ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇತ್ತೀಚಿಗೆ ಕಿಬ್ಬನಹಳ್ಳಿ ಹೋಬಳಿ ಅರಳಗುಪ್ಪೆ ಗ್ರಾಮದ ವಾಸಿ ರೈತ ಮಹಿಳೆ ಭಾಗ್ಯಮ್ಮ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ 5 ಲಕ್ಷ ರು. ಸಾಲ ಪಡೆದು ಮರುಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಪ್ರಕರಣಗಳು ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಮರುಕಳಿಸದಂತೆ ಕಟ್ಟುನಿಟ್ಟಿನ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.ಸರ್ಕಾರದಿಂದ ಎಲ್‌ಆರ್‌ಎಲ್‌ಎಂದಡಿ ಕಡಿಮೆ ಬಡ್ಡಿಗೆ ಸಾಲವನ್ನು ಪಡೆಯಲು ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಬಡ್ಡಿ ನೀಡುವ ಕಂಪನಿಗಳಲ್ಲಿ ಸಾಲವನ್ನು ಪಡೆಯಬೇಡಿ. ಸದರಿ ಕಂಪನಿಗಳು ಸಾಲ ಮರುಪಾವತಿಗೆ ಒತ್ತಡ ಹಾಲಿಕಿದ್ದಲ್ಲಿ ತುರ್ತು ದೂರವಾಣಿ 112ಕೆ ಕರೆ ಮಾಡಿ ದೂರು ದಾಖಲಿಸಬಹುದು. ಈ ಸಂಬಂಧ ತಾಲೂಕು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿ, ತಾಲೂಕು ಆಡಳಿತದೊಂದಿಗೆ ಕೈಜೋಡಿಸಿ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಹಾಗೆಯೇ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕರು ಮೈಕ್ರೋ ಪೈನಾನ್ಸ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ವರ್ಗದವರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜು, ವಿವಿಧ ಸಂಘ ಸಂಸ್ಥೆಗಳ, ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿ ವ್ಯವಸ್ಥಾಪಕರು ಭಾಗವಹಿಸಿದ್ದರು.