ಬೆಳೆಯುವ ವೇಗದಲ್ಲಿ ಮೂಲ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರಂತಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಕೈಗಾರಿಕ ಸಚಿವ ಎಚ್.ಡಿ ಕುಮಾರಸ್ವಾಮಿ ಎಚ್ಚರಿಸಿದರು. ಕೇಂದ್ರ ಸರ್ಕಾರ ರೈತರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಯೋಜನೆಗಳು ರೈತರಿಗೆ ತಲುಪಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸಿರಿಧಾನ್ಯಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದೆ. ಈ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕಿದೆ. ಹಾಸನ ಆಲೂಗಡ್ಡೆಗಳ ತವರಾಗಿತ್ತು. ಆದರೆ, ಇಂದು ಆಲೂಗಡ್ಡೆ ಬೆಳೆಯನ್ನು ಹುಡುಕಬೇಕಿದೆ. ಇದಕ್ಕೆಲ್ಲ ಕಾರಣ ಆರೋಗ್ಯಪೂರ್ಣ ತಳಿಗಳನ್ನು ಹುಡುಕಿಕೊಡದಿರುವುದೇ ಕಾರಣವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಬೆಳೆಯುವ ವೇಗದಲ್ಲಿ ಮೂಲ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರಂತಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಕೈಗಾರಿಕ ಸಚಿವ ಎಚ್.ಡಿ ಕುಮಾರಸ್ವಾಮಿ ಎಚ್ಚರಿಸಿದರು.ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಆದಿಚುಂಚನಗಿರಿ ಮಠ ಹಾಗೂ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದೇಶದ ಸಂಸ್ಕೃತಿ ವಿಶಿಷ್ಟವಾಗಿದ್ದು, ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ಗ್ರಾಮದಿಂದ ಗ್ರಾಮಕ್ಕೆ ಸಂಸ್ಕೃತಿ ವಿಭಿನ್ನವಾಗಿದೆ. ಇಂತಹ ವಿಶಿಷ್ಟ ಸಂಸ್ಕೃತಿಯನ್ನು ಆಧುನೀಕತೆಯ ಹೆಸರಿನಲ್ಲಿ ಮರೆಯುತ್ತಿರುವುದು ದುರಂತಕ್ಕೆ ಕಾರಣವಾಗಲಿದೆ. ಆದ್ದರಿಂದ, ನಮ್ಮ ಮೂಲತನವನ್ನು ಉಳಿಸಿಕೊಂಡು ಬೆಳೆಯುವುದು ಉತ್ತಮ ಎಂದರು.
ಕಾಲಕಾಲಕ್ಕೆ ಸರ್ಕಾರಗಳು ರೈತರ ಅಭ್ಯುದಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ ಈ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಂಡಿಲ್ಲ ಎಂಬುದು ಸತ್ಯ. ಕೇಂದ್ರ ಸರ್ಕಾರ ರೈತರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಯೋಜನೆಗಳು ರೈತರಿಗೆ ತಲುಪಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸಿರಿಧಾನ್ಯಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದೆ. ಈ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕಿದೆ. ಹಾಸನ ಆಲೂಗಡ್ಡೆಗಳ ತವರಾಗಿತ್ತು. ಆದರೆ, ಇಂದು ಆಲೂಗಡ್ಡೆ ಬೆಳೆಯನ್ನು ಹುಡುಕಬೇಕಿದೆ. ಇದಕ್ಕೆಲ್ಲ ಕಾರಣ ಆರೋಗ್ಯಪೂರ್ಣ ತಳಿಗಳನ್ನು ಹುಡುಕಿಕೊಡದಿರುವುದೇ ಕಾರಣವಾಗಿದೆ ಎಂದರು.೯೩ನೇ ವಯಸ್ಸಿನಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರು ಅನಾರೋಗ್ಯದ ಮಧ್ಯೆಯು ರೈತರ ಬಗ್ಗೆ ಚಿಂತನೆ ಮಾಡುತ್ತಾರೆ. ಬೆಂಗಳೂರು ಬೃಹತ್ತಾಗಿ ಬೆಳೆಯುತ್ತಿದೆ. ಆದರೆ, ಇವರಿಗೆ ನೀರು ಕೊಡುವುದು ದುಸ್ತರವಾಗಿರುವ ಈ ಹೊತ್ತಿನಲ್ಲಿ ತಮಿಳುನಾಡಿಗೆ ಆರು ಟಿಎಂಸಿ ನೀರು ನೀಡಲು ಸರ್ಕಾರ ಮುಂದಾಗಿದೆ, ಈ ಬಗ್ಗೆ ರಾಜ್ಯಸಭೆಯಲ್ಲಿ ದೇವೇಗೌಡರು ಮಾತನಾಡಲು ಮುಂದಾದರೆ ತಮಿಳುನಾಡು ಸಂಸದರು ಇವರ ಮೇಲೆ ಬೀಳುತ್ತಾರೆ ಎಂದರು. ದೇವೇಗೌಡರು ಬದುಕಿರುವವರೆಗೆ ಅವರ ಬೆಲೆ ತಿಳಿಯದು, ಅವರ ಮರಣದ ನಂತರ ಅವರು ರೈತರಿಗೆ ನೀಡಿದ ಕೂಡುಗೆ ಬಗ್ಗೆ ಅರಿವಿಗೆ ಬರಲಿದೆ ಎಂದರು.
ನಾವು ಮುಂದುವರೆದ ರಾಷ್ಟ್ರಗಳಿಗೆ ಸಮನಾಗಿ ಬೆಳೆಯುತ್ತಿದ್ದೇವೆ. ಕೃಷಿ ಪ್ರಧಾನ ರಾಷ್ಟ್ರವಾದ ನಮ್ಮ ದೇಶದ ರೈತರ ತಲಾ ಆದಾಯ ಇಂದಿಗೂ ಕನಿಷ್ಠವಾಗಿರುವುದು ಬೇಸರದ ಸಂಗತಿ. ರೈತರು ಸುಭಿಕ್ಷರಾಗಿದ್ದಾಗ ಮಾತ್ರ ದೇಶ ಸದೃಢವಾಗಿರಲಿದೆ ಎಂದರು. ಕೃಷಿಗೆ ಪೂರಕವಾದ ಹುಣಸೆ, ಹಲಸಿನಂತಹ ಮರಗಳನ್ನು ಬೆಳೆಯುವುದು ಅಗತ್ಯವಿದೆ. ರೈತರ ಉದ್ಧಾರಕ್ಕಾಗಿ ಮಠಮಾನ್ಯಗಳು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.ರೈತರಿಗೆ ಮೋಸವಾಗ ಬಾರದು:ಶಾಸಕ ಸಿಮೆಂಟ್ ಮಂಜು ಮಾತನಾಡಿ, ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ಆಯಾ ಗ್ರಾಮಗಳ ಅಭಿವೃದ್ಧಿಯ ದೃಷ್ಠಿಯಿಂದ ಉತ್ತಮ ಬೆಳವಣಿಗೆ. ಕೃಷಿ ಇಲಾಖೆ ಹೆಚ್ಚು ಪಾರದರ್ಶಕವಾದಾಗ ಮಾತ್ರ ರೈತರಿಗೆ ಅನುಕೂಲವಾಗಲಿದೆ. ರೈತರಿಗೆ ಹೆಚ್ಚಿನ ಗೌರವ ನೀಡುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಬೇಕು. ಕಚೇರಿಗೆ ಅಲೆಸುವುದು ತಪ್ಪಿದಾಗ ಮಾತ್ರ ಯೋಜನೆಗಳ ಫಲಪಡೆಯಲು ರೈತರು ಮುಂದಾಗುತ್ತಾರೆ. ಗ್ರಾಮಕ್ಕೊಬ್ಬ ಮಾದರಿ ರೈತರನ್ನು ಇಲಾಖೆ ಸೃಷ್ಟಿಸಿ ಇತರೆ ರೈತರಿಗೆ ತರಬೇತಿ ನೀಡುವಂತಾದಾಗ ಮಾತ್ರ ಇಲಾಖೆಯ ಹೊರೆ ಇಳಿಯಲಿದೆ. ಅಲ್ಲದೆ ರೈತರಿಗೂ ಅನುಕೂಲವಾಗಲಿದೆ ಎಂದರು. ಮೋಸ ಅರಿಯದ ಮಾನವ ರೈತ. ಆದ್ದರಿಂದ ಎಂದಿಗೂ ರೈತರಿಗೆ ಮೋಸವಾಗಬಾರದು ಎಂದರು. ಆಧುನಿಕ ಕೃಷಿಯ ಅನಿವಾರ್ಯತೆ ಇದೆ:
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ಎಲ್ಲ ಪ್ರಕ್ರಿಯೆಗಳನ್ನು ಬಿಡಿಬಿಡಿಯಾಗಿ ನೋಡುವುದಕ್ಕೆ ವಿಜ್ಞಾನ ಎನ್ನುತ್ತೇವೆ. ಕಲೆ ಹಾಗೂ ವಿಜ್ಞಾನದ ಹೊಂದಾಣಿಕೆಯೇ ಕೃಷಿ. ಈ ನೆಲದ ಸೊಗಡನ್ನು ಉಳಿಸಿಕೊಂಡು ಆಧುನಿಕ ಕೃಷಿಯನ್ನು ಅಪ್ಪಿಕೊಳ್ಳುವ ಅನಿವಾರ್ಯತೆ ಇದೆ. ಜೀವ ವೈವಿಧ್ಯಗಳನ್ನು ಉಳಿಸಿಕೊಂಡು ಕೃಷಿ ಮಾಡಬೇಕು. ನಮ್ಮ ಪಾರಂಪರಿಕ ಕೃಷಿಯಾದ ಸಾವಯವ ಕೃಷಿಯೊಂದಿಗೆ ಆಧುನೀಕ ಕೃಷಿಯನ್ನು ಆಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ನಮ್ಮ ದೇಶ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವುದು ನಿರ್ವಿವಾದ. ಆಹಾರ ಉತ್ಪಾದನೆಯಲ್ಲಿ ನಾವು ಸದೃಢರಾಗಿದ್ದೇವೆ. ಆದರೆ, ನಾವು ಉತ್ಪಾದಿಸುತ್ತಿರುವ ಆಹಾರ ತೀರ ಕಳಪೆ ಎಂಬುದನ್ನು ಜಾಗತಿಕ ಅಂಕಿಅಂಶಗಳು ಸಾಬೀತುಪಡಿಸಿದ್ದು, ಜಗತ್ತಿನ ಆಹಾರ ಗುಣಮಟ್ಟದ ರ್‍ಯಾಕಿಂಗ್‌ನಲ್ಲಿ ನಮ್ಮ ದೇಶದ ಆಹಾರ ಗುಣಮಟ್ಟ ೧೩೪ನೇ ಸ್ಥಾನದಲ್ಲಿದೆ. ಈ ಪೋಷಕಾಂಶಗಳ ಕೊರತೆ ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಆದ್ದರಿಂದ, ಆಹಾರ ಉತ್ಪಾದನೆಯೊಂದಿಗೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾದ ಹೊಣೆ ರೈತರ ಮೇಲಿದೆ. ಆರೋಗ್ಯಕ್ಕೆ ಸಿರಿಧಾನ್ಯಗಳ ಸಹಾಯಕ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದ್ದರಿಂದ ಸಿರಿ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಸಮಗ್ರ ಕೃಷಿ ಹಾಗೂ ಎರಡು ಬೆಳೆ ಪದ್ಧತಿ ಭವಿಷ್ಯದಲ್ಲಿ ಆಶಾದಾಯಕವಾಗಿ ಗೋಚರಿಸುತ್ತಿದೆ ಎಂದರು. ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು:ಅಮೆರಿಕ ರಾಯಭಾರ ಕಚೇರಿಯ ಸಹಾಯಕ ಕಾರ್ಯದರ್ಶಿ ಶೃತಿ ಪುರುಷೋತ್ತಮ್ ಮಾತನಾಡಿ, ಕೃಷಿ ನಮಗೆ ಸಂಬಂಧಿಸಿದ್ದಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಪ್ರತಿಮಾನವ ಹಾಕುವ ಬಟ್ಟೆ, ತಿನ್ನುವ ಆಹಾರದ ಹಿಂದೆ ರೈತರ ಪರಿಶ್ರಮವಿದೆ. ಕೃಷಿ ದೇಶದ ಬೆನ್ನೇಲಬು ಎಂಬುದು ಸತ್ಯ. ಆದರೆ, ಹೆಚ್ಚು ಇಳುವರಿ ಪಡೆಯುವ ಭರದಲ್ಲಿ ಅಪಾರ ಪ್ರಮಾಣದ ರಸಾಯನಿಕಗಳನ್ನು ಉಪಯೋಗಿಸುವುದು ಮುಂದಿನ ದಿನಗಳಲ್ಲಿ ದುರಂತಕ್ಕೆ ಕಾರಣವಾಗಲಿದೆ ಎಂದರು. ಸದ್ಯದ ಕೃಷಿ ರಂಗ ತಂತ್ರಜ್ಞಾನದ ಅವಲಂಬಿಸಿದೆ, ಇದಕ್ಕೆ ಕೃಷಿಕರು ಹೊಂದಿಕೊಳ್ಳುವ ಅಗತ್ಯವಿದೆ ಎಂದರು. ವಿದ್ಯಾರ್ಥಿಗಳು ಉನ್ನತ ಗುರಿಯ ಕನಸು ಕಾಣಬೇಕು. ಕಠಿಣ ಪರಿಶ್ರಮ ಪಟ್ಟರೆ ಸಾಧನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಂಭುನಾಥ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಇಮ್ಮಡಿಸಿದ್ದಲಿಂಗ ಸ್ವಾಮೀಜಿ, ಕೃಷಿಕ ಸಮಾಜದ ಅಧ್ಯಕ್ಷ ಹೆತ್ತೂರು ದೇವರಾಜ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎಂ ವಿಶ್ವನಾಥ್, ಕಾರ್ಯದರ್ಶಿ ಉಮೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.