ಶಿಕ್ಷಕರ ಹುದ್ದೆ ತುಂಬುವಂತೆ ಸಿಎಂಗೆ ಪತ್ರ

| Published : Nov 25 2023, 01:15 AM IST

ಶಿಕ್ಷಕರ ಹುದ್ದೆ ತುಂಬುವಂತೆ ಸಿಎಂಗೆ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಶಿಕ್ಷಣ ಸಂಸ್ಥೆಗಳು ಈ ರಾಜ್ಯದಲ್ಲಿ ಇಲ್ಲದಿದ್ದರೆ ರಾಜ್ಯ ಶಿಕ್ಷಣದಿಂದ ದೊಡ್ಡ ಕಷ್ಟ ಎದುರಿಸಬೇಕಾಗಿತ್ತು. ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಸಿಂದಗಿ

ರಾಜ್ಯದ ಶೈಕ್ಷಣಿಕ ಪ್ರಗತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಹಿರಿಯದಾಗಿದೆ. ಆದರೆ, ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಇಲ್ಲದಕ್ಕೆ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಶಿಕ್ಷಕರ ನೇಮಕ ಮಾಡಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯ ಮಾಡಿದ್ದೇನೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಪಟ್ಟಣದ ಆಲಮೇಲ ರಸ್ತೆಯಲ್ಲಿನ ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಸನ್ಮಾನ ಸಮಾರಂಭ ಮತ್ತು ಎಂ.ಜೆ.ಎಫ್ ಲಾಯನ್ ಕೆ.ಎಚ್.ಸೋಮಾಪೂರ ಅವರ 5 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಈ ರಾಜ್ಯದಲ್ಲಿ ಇಲ್ಲದಿದ್ದರೆ ರಾಜ್ಯ ಶಿಕ್ಷಣದಿಂದ ದೊಡ್ಡ ಕಷ್ಟ ಎದುರಿಸಬೇಕಾಗಿತ್ತು. ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ. ಇದರಿಂದ ಮಕ್ಕಳ ಕಲಿಕೆಯ ಸ್ಥಿತಿ ಹೇಗೆ? ನಾನು ಸಭಾಪತಿ ಇದ್ದರೂ ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಶಾಲೆಗಳಿಗೆ ನೀವು ಏನು ಕೊಡುವುದು ಬೇಡ ಶಿಕ್ಷಕರನ್ನು ಮಾತ್ರ ತುಂಬಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ ಎಂದರು.

ಶೀಘ್ರ ಶಿಕ್ಷಕರ ಹುದ್ದೆ ತುಂಬಿ:

ನನ್ನ ಕುಟುಂಬದಲ್ಲಿ ನನ್ನ ತಂಗಿ ಪ್ರಾಥಮಿಕ ಶಿಕ್ಷಣ ಪಡೆದು ಮುಂದೆ ಕಲಿಯಲು ಆಗದೇ ಇರುವ ನೋವು ನನಗೆ ಸದಾ ಕಾಡುತಿತ್ತು. ಆ ದೆಸೆಯಲ್ಲಿ ನಾನು ಶಿಕ್ಷಣ ಮಂತ್ರಿಯಾದಾಗ ಮೇಲಧಿಕಾರಿಗಳಿಂದ ವರದಿ ಪಡೆದು ರಾಜ್ಯದ ವಿವಿಧ ಹಳ್ಳಿಗಳಲ್ಲಿ 1039 ಸರ್ಕಾರಿ ಪ್ರೌಢ ಶಾಲೆಗಳನ್ನು ಮತ್ತು 500 ಕಾಲೇಜುಗಳನ್ನು ಅಂದಾಜು ₹398 ಕೋಟಿ ಹಣದಲ್ಲಿ ಸ್ಥಾಪಿಸುವುದರ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದೆ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಉಳಿವಿಗಾಗಿ ಅವುಗಳ ಬೆಳವಣಿಗೆಗಾಗಿ ಸದಾ ಬೆನ್ನಲುಬಾಗಬೇಕು. ಶಿಕ್ಷಕ ಹುದ್ದೆ ತುಂಬಲು ಶೀಘ್ರವೇ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಮಾತನಾಡಿ, ಕೆ.ಎಚ್.ಸೋಮಾಪೂರ ಅವರು ಒಬ್ಬ ದೈಹಿಕ ಶಿಕ್ಷಕರು. ಅವರಿಂದ ಸಾಹಿತ್ಯ ಸೇವೆ ನಡೆಯುತ್ತದೆ ಎಂದರೆ ನಿಜಕ್ಕೂ ನಾವೇಲ್ಲ ಹೆಮ್ಮೆ ಪಡಬೇಕು. ಇಂದಿನ ಶಿಕ್ಷಣ ವ್ಯವಸ್ಥೆಗೆ ಸಾಹಿತ್ಯಿಕ ಮೆರೆಗು ಅವಶ್ಯ ಎಂದರು.

ಇದೇ ಸಂದರ್ಭದಲ್ಲಿ ಕೆ.ಎಚ್.ಸೋಮಾಪೂರ ಅವರ ಜೀವನ ಮತ್ತು ಸಾಹಿತ್ಯ, ಬಯಕೆಗಳ ಬೆನ್ನೆರಿ, ಭಾವ-ಬಂಧ, ಭಾವದರ್ಪಣ, ಸಂಘರ್ಷ ಎಂಬ 5 ಕೃತಿಗಳನ್ನು ಬಸವರಾಜ ಹೊರಟ್ಟಿ ಅವರು ಲೋಕಾರ್ಪಣೆಗೊಳಿಸಿದರು. ಸ್ಥಳೀಯ ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಹಾಗೂ ನಿವೃತ್ತ ಉಪನ್ಯಾಸಕ ಎಸ್.ವಾಯ್.ಬೀಳಗಿ ಕೃತಿಗಳ ಪರಿಚಯ ಮಾಡಿಕೊಟ್ಟರು.

ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ, ಕೃತಿಗಳ ಕರ್ತೃ ಕೆ.ಎಚ್.ಸೋಮಾಪೂರ ಮತ್ತು ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಮಾತನಾಡಿದರು. ತಾಳಿಕೋಟಿಯ ಎಚ್.ಎನ್.ಪಾಟೀಲ, ಆಯ್.ಬಿ.ಬಿರಾದಾರ ಇದ್ದರು.

ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷ ಕರ್ಜಗಿ ಸ್ವಾಗತಿಸಿದರು. ಪ್ರಾಚಾರ್ಯ ಗುರು ಕಡಣಿ, ಪ್ರಾಚಾರ್ಯ ಆರ್.ಬಿ.ಗೋಡೇಕರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜ ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಅನೇಕರು ಇದ್ದರು.

2 ದಿನ ಅಧಿವೇಶನದಲ್ಲಿ ಉಕ ಸಮಸ್ಯೆ ಚರ್ಚೆ:

ಇನ್ನು ಕೇಲವು ದಿನಗಳ ನಂತರ ಬೆಳಗಾವಿಯಲ್ಲಿ ಅಧಿವೇಶ ನಡೆಯಲಿದೆ. ಅದರಲ್ಲಿ 2-3 ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಸಬೇಕು ಎಂದು ಆದೇಶ ಮಾಡಿದ್ದೇನೆ. ಕರ್ನಾಟಕದಲ್ಲಿ ಅಖಂಡ ವಿಜಯಪುರ ಜಿಲ್ಲೆ ಅತ್ಯಂತ ಶ್ರೇಷ್ಠ ಜಿಲ್ಲೆ ಎನಿಸಿಕೊಂಡಿದೆ. ಅಖಂಡ ವಿಜಯಪುರ ಜಿಲ್ಲೆ ಶಿಕ್ಷಣದಿಂದ ಪ್ರಗತಿ ಸಾಧಿಸಲು ಖಾಸಗಿ ಶಿಕ್ಷಣ ಸಂಸ್ಥೆಗೆ ಹೆಚ್ಚು ಕಾರಣ ಎಂದ ಅವರು, ಇಂದಿನ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ. ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಸಿಗುತ್ತಿಲ್ಲ. ಶಾಲೆಗಳು, ಶಿಕ್ಷಕರು ಪಠ್ಯದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ ಎಂದು ಹೊರಟ್ಟಿ ಹೇಳಿದರು.