ಸಾರಾಂಶ
ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರ ಬೇಡಿಕೆ ಈಡೇರಿಸುವವರಿಗೆ ತರಗತಿ ಬಹಿಷ್ಕರಿಸಿ ಧರಣಿ ಮುಂದುವರಿಸಲಾಗುವುದು. ಸೇವಾಭದ್ರತೆಗೆ ಆಗ್ರಹಿಸಿ ಈವರೆಗಿನ ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ಅತಿಥಿ ಉಪನ್ಯಾಸಕರನ್ನು ಕೂಡಲೇ ಕಾಯಂಗೊಳಿಸುವಂತೆ ಒತ್ತಾಯಿಸಿ ಹಾಗೂ ಸೇವಾಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ. ಶಿವಮೂರ್ತಿ ಮಾತನಾಡಿ, ಉಪನ್ಯಾಸಕರಿಗೆ ಅಗತ್ಯ ಅರ್ಹತೆಗಳಿದ್ದರೂ ಸರ್ಕಾರ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ಕಳೆದ ೨೦ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಖಾಸಗೀಕರಣಕ್ಕೆ ಒತ್ತು ನೀಡುವಂತೆ ಸರ್ಕಾರ ಅನುಸರಿಸುತ್ತಿರುವ ನೀತಿಗಳನ್ನು ಬದಲಾಯಿಸಿಕೊಳ್ಳಬೇಕು. ಕೂಡಲೆ ಅತಿಥಿ ಉಪನ್ಯಾಸಕರ ಸೇವೆ ಪರಿಗಣಿಸಿ ಕಾಯಂಗೊಳಿಸಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಸದಸ್ಯ ಅವಿನಾಶ ಜಾದವ್ ಮಾತನಾಡಿ, ಕೂಡಲೆ ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರ ಬೇಡಿಕೆ ಈಡೇರಿಸುವವರಿಗೆ ತರಗತಿ ಬಹಿಷ್ಕರಿಸಿ ಧರಣಿ ಮುಂದುವರಿಸಲಾಗುವುದು. ಸೇವಾಭದ್ರತೆಗೆ ಆಗ್ರಹಿಸಿ ಈವರೆಗಿನ ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಡಾ. ಅಕ್ಕಿ ಬಸವೇಶ, ಪ್ರವೀಣ್ ಕುಮಾರ್, ಬಸವರಾಜ, ಪಂಪಾಪತಿ, ರಂಗನಾಥ, ಖಾಸೀಂ, ಗುರುಪ್ರಸಾದ ಪಾಟೀಲ್, ಡಾ. ಗುರುಪ್ರಸಾದ, ರೋಹಿಣಿ, ಭಾಗ್ಯ, ವೆಂಕಟೇಶ ಇತರರಿದ್ದರು.