ಕಾಂತರಾಜು ಆಯೋಗದ ವರದಿ ಜಾರಿಗೆ ಒತ್ತಾಯ

| Published : Nov 25 2023, 01:15 AM IST

ಸಾರಾಂಶ

ಎಚ್. ಕಾಂತರಾಜು ವರದಿಯಲ್ಲಿ ಏನಿದೆ ಎಂಬುದೇ ರಾಜ್ಯದ ಜನತೆಗೆ ಗೊತ್ತಿಲ್ಲದಿರುವಾಗ ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಇಂತಹ ಬಲಾಢ್ಯ ಸಮುದಾಯಗಳ ಹಿತಾಸಕ್ತಿಗೆ ಬಲಿಯಾಗದೆ ರಾಜ್ಯದ ಸರ್ವಜನರ ಅಭಿವೃದ್ಧಿಗಾಗಿ ತನ್ನ ಬದ್ಧತೆ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಎಚ್. ಕಾಂತರಾಜು ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಸ್ವೀಕರಿಸಬೇಕು ಎಂದು ಎಚ್. ಕಾಂತರಾಜು ವರದಿ ಜಾರಿಗಾಗಿ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಶುಕ್ರವಾರ ಮನವಿಪತ್ರ ರವಾನಿಸಿದರು.

ಸಾಮಾಜಿಕ ಸಮಾನತೆಗಾಗಿ ಸರ್ವರ ಸಮೀಕ್ಷೆ ಎಂಬ ಗುರಿಯೊಂದಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ೨೦೧೫ರಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು, ಒಂದು ಚಾರಿತ್ರಿಕ ಘಟನೆಯಾಗಿದೆ. ಏಕೆಂದರೆ ಭಾರತದಲ್ಲಿ ಮೊಟ್ಟ ಮೊದಲು ಜಾತಿವಾರು ಜನಗಣತಿ ೧೮೭೨ರಲ್ಲಿ ನಡೆದಿದೆ. ಆ ಮೇಲೆ ೧೮೮೧ರಿಂದ ೧೯೩೧ರ ವರೆಗೆ ಹತ್ತು ವರ್ಷಗಳಿಗೊಮ್ಮೆ ನಡೆದು ಆ ನಂತರ ಮುಂದುವರಿಸಿಲ್ಲ. ಸಮೀಕ್ಷೆ ಮುಂದುವರಿಯದಂತೆ ತಡೆ ಒಡ್ಡಿದ್ದು, ಇದೊಂದು ಚಾರಿತ್ರಿಕ ಅಪರಾಧ ಎಂದು ಹೋರಾಟಗಾರರು ದೂರಿದರು.

ಇಂತಹ ಚಾರಿತ್ರಿಕ ತಪ್ಪನ್ನು ೮೩ ವರ್ಷಗಳ ನಂತರ ಮುಂದುವರಿಸದೆ ೨೦೧೪ರಲ್ಲಿ ತಮ್ಮ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮುಖಾಂತರ ಮತ್ತೆ ಚಾಲನೆ ನೀಡಿದ್ದು, ಒಂದು ಚಾರಿತ್ರಿಕ ಜನಪರ ಘಟನೆ ಎಂಬುದಾಗಿ ಈ ರಾಜ್ಯದ ಜನ ಭಾವಿಸಿದ್ದಾರೆ. ಈಗಾಗಲೆ ಸಮೀಕ್ಷೆ ಮುಕ್ತಾಯಗೊಂಡು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಸಮಯದಲ್ಲಿ ಕೆಲವು ಬಲಾಢ್ಯ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ದೂರಿದರು.

ಎಚ್. ಕಾಂತರಾಜು ವರದಿಯಲ್ಲಿ ಏನಿದೆ ಎಂಬುದೇ ರಾಜ್ಯದ ಜನತೆಗೆ ಗೊತ್ತಿಲ್ಲದಿರುವಾಗ ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಇಂತಹ ಬಲಾಢ್ಯ ಸಮುದಾಯಗಳ ಹಿತಾಸಕ್ತಿಗೆ ಬಲಿಯಾಗದೆ ರಾಜ್ಯದ ಸರ್ವಜನರ ಅಭಿವೃದ್ಧಿಗಾಗಿ ತನ್ನ ಬದ್ಧತೆ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಎಚ್. ಕಾಂತರಾಜು ವರದಿಯನ್ನು ತಕ್ಷಣ ಸ್ವೀಕರಿಸಬೇಕು. ಎಚ್. ಕಾಂತರಾಜು ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿ ಚರ್ಚೆಗೆ ಒಳಪಡಿಸಬೇಕು. ಹಾಗೆಯೇ ರಾಜ್ಯದ ಜನತೆಯ ಅಭಿಪ್ರಾಯಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಎಂ. ಜಂಬಯ್ಯ ನಾಯಕ, ಡಿ. ವೆಂಕಟರಮಣ, ರವಿಕುಮಾರ, ಶಿವಕುಮಾರ, ಮಂಜುನಾಥ, ಬಿಸಾಟಿ ತಾಯಪ್ಪ ನಾಯಕ, ಸಣ್ಣಮಾರೆಪ್ಪ, ತಮನಳೇಪ್ಪ, ಕಾಳಿದಾಸ್, ರಮೇಶ್, ಕೆ.ಶಿವಪ್ಪ ಮತ್ತಿತರಿರದ್ದರು.