ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಗೂಗಲ್‌ನ ಧ್ವನಿಯಲ್ಲಿ ರಾಜ್ಯದ ಸಾವಿರಕ್ಕೂ ಹೆಚ್ಚು ಹಳ್ಳಿಗಳ ಹೆಸರು ತಪ್ಪು ತಪ್ಪಾಗಿ ಉಚ್ಛಾರಣೆಯಾಗುತ್ತಿದ್ದು, ಇದರಿಂದ ಗೂಗಲ್ ಮ್ಯಾಪ್ ಬಳಸುವವರಿಗೆ ಗೊಂದಲ, ಸಮಸ್ಯೆಯಾಗುತ್ತಿದೆ. ಇದನ್ನು ಸರಿಪಡಿಸಲು ಕಂದಾಯ ಇಲಾಖೆ, ಗೂಗಲ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮನ್ವಯದೊಂದಿಗೆ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ.ಪುರಷೋತ್ತಮ ಬಿಳಿಮಲೆ ತಿಳಿಸಿದರು.ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ‘ಜಿಲ್ಲೆಯ ಕನ್ನಡ ಅನುಷ್ಠಾನ ಪ್ರಗತಿ’ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ 72 ಸಾವಿರ ಹಳ್ಳಿಗಳ ಹೆಸರುಗಳನ್ನು ಈಗಾಗಲೇ ಧ್ವನಿಮುದ್ರಣ ಮಾಡಿ, ಹೇಗೆ ಊರುಗಳ ಹೆಸರುಗಳನ್ನು ಸ್ಪಷ್ಟವಾಗಿ ಉಚ್ಚರಿಸಬೇಕೆಂದು ಮಾಹಿತಿ ಸಿದ್ದಪಡಿಸಲಾಗಿದೆ ಎಂದರು.
ಬ್ಯಾಂಕ್‌ನಲ್ಲಿ ಕನ್ನಡೇತರರುರಾಜ್ಯದಲ್ಲಿನ ವಿವಿಧ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಬಹುತೇಕ ಹಿಂದಿ ಹಾಗೂ ತೆಲುಗು ಭಾಷಿಕರೇ ಅಧಿಕವಾಗಿದ್ದು, ಇದರಿಂದ ಸ್ಥಳೀಯ ಕನ್ನಡ ಭಾಷಿಕರು ಬ್ಯಾಂಕುಗಳಲ್ಲಿ ವ್ಯವಹರಿಸಲು ಸಂವಹನಕ್ಕೆ ಅಡ್ಡಿಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿ ಸಹಕಾರದೊಂದಿಗೆ ಕನ್ನಡೇತರ ಅಧಿಕಾರಿ ಮತ್ತು ಸಿಬ್ಬಂದಿಗೆ ಗ್ರಾಹಕರೊಂದಿಗೆ ಕನಿಷ್ಠ ವ್ಯವಹರಿಸಲು ಅಗತ್ಯವಿರುವ ಕನ್ನಡ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಬ್ಯಾಂಕುಗಳಲ್ಲಿ ಕನ್ನಡಿಗ ಅಧಿಕಾರಿ ಸಿಬ್ಬಂದಿ ಪ್ರಾತಿನಿಧ್ಯ ಕಡಿಮೆಯಾಗುತ್ತಿದ್ದು, ಈ ಹಿಂದೆ ಅಸ್ತಿತ್ವದಲ್ಲಿದ್ದ ಪ್ರಾದೇಶಿಕ ಬ್ಯಾಂಕಿಂಗ್ ನೇಮಕಾತಿ ಮಂಡಳಿಯನ್ನು ತರಬೇತಿಸಹಿತ ಆರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈಗಾಗಲೇ ಹೈದರಬಾದ್‌ನಲ್ಲಿ ತೆಲುಗು ಭಾಷಿಕ ರಾಜ್ಯಗಳು ಬ್ಯಾಂಕಿಂಗ್ ಪ್ರಾದೇಶಿಕ ನೇಮಕಾತಿ ಮಂಡಳಿಯನ್ನು ಸ್ಥಾಪಿಸಿ ತರಬೇತಿ ನೀಡುತ್ತಿರುವುದೇ ಇಂದು ಬ್ಯಾಂಕುಗಳಲ್ಲಿ ತೆಲುಗು ಭಾಷಿಕ ಅಧಿಕಾರಿ, ಸಿಬ್ಬಂದಿಯ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಬ್ಯಾಂಕಿಂಗ್ ಉದ್ಯೋಗಗಳತ್ತ ಕನ್ನಡಿಗರನ್ನೂ ಪ್ರೇರೇಪಿಸಲು ಪ್ರತ್ಯೇಕ ಮಂಡಳಿಯನ್ನು ತೆರೆಯುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.ಪ್ರಾಧಿಕಾರಕ್ಕೆ ಹಣದ ಕೊರತೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತುತ ವಾರ್ಷಿಕ ಕೇವಲ 2 ಕೋಟಿ ರೂಪಾಯಿ ಅನುದಾನವನ್ನು ಮಾತ್ರ ನೀಡುತ್ತಿದ್ದು, ಇದರಿಂದ ರಾಜ್ಯದಾದ್ಯಂತ ಕನ್ನಡ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ತೀರಾ ಕಷ್ಟವಾಗುತ್ತಿದೆ. ಪ್ರಾಧಿಕಾರದ ಚಟುವಟಿಕೆಗಳಿಗೆ ಕನಿಷ್ಠ 30 ಕೋಟಿ ಅನುದಾನದ ಅಗತ್ಯವಿದ್ದು, ಈ ವರ್ಷ ಕನಿಷ್ಠ 5 ಕೋಟಿಯನ್ನಾದರೂ ಬಿಡುಗಡೆ ಮಾಡಲು ಮನವಿ ಸಲ್ಲಿಸಲಾಗುವುದು ಎಂದರು. ಈಗಾಗಲೇ ಕಲಬುರುಗಿ,ಶಿವಮೊಗ್ಗ ಬೀದರ್. ಮಂಡ್ಯ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಆ ಜಿಲ್ಲೆಗಳಲ್ಲಿನ ಕನ್ನಡ ಅನುಷ್ಠಾನಕ್ಕೆ ಹೋಲಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಜಿಲ್ಲಾಡಳಿತವನ್ನು ಶ್ಲಾಘಿಸಿದರು.ಸಂಘಟನೆಗಳ ಜತೆ ಚರ್ಚೆಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಕುರಿತು ಇರುವ ತೊಡಕುಗಳ ಬಗ್ಗೆ ಜಿಲ್ಲೆಯ ಕನ್ನಡಪರ ಸಂಘಟನೆಗಳ ಮುಖಂಡರು, ಹೋರಾಟಗಾರರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಮತ್ತು ಸಲಹೆಗಳನ್ನು ಸ್ವೀಕರಿಸಲಾಗಿದೆ. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಸದಸ್ಯ ರವಿಕುಮಾರ್ ನೀಹಾ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಜಿಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.