ಸಾರಾಂಶ
ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸದಲ್ಲಿದ್ದು, ಅವರು ವಾಪಸ್ಸಾದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆಯಾಗಲಿದೆ. ಸಂಸತ್ ಅಧಿವೇಶನಕ್ಕೂ ಮುನ್ನಾ ಎಲ್ಲಕ್ಕೂ ಉತ್ತರ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಆಯ್ಕೆ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಆಡಳಿತ ವೈಫಲ್ಯ, ಮುಖ್ಯಮಂತ್ರಿ ಖುರ್ಚಿ ಅಲ್ಲಾಡುತ್ತಿದ್ದರೂ ಮಾಧ್ಯಮಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಿದೆ. ನಾಲ್ಕು ರಾಜ್ಯಗಳ ಅಧ್ಯಕ್ಷರ ನೇಮಕ ಆಗಬೇಕಿದೆ. ಪ್ರಧಾನಿಯವರು ವಿದೇಶ ಪ್ರವಾಸದಿಂದ ಬಂದ ಬಳಿಕ ಈ ಬಗ್ಗೆ ಚರ್ಚೆ ಆಗುತ್ತದೆ.ಶೀಘ್ರವೇ ರಾಷ್ಟ್ರಾಧ್ಯಕ್ಷರ ಆಯ್ಕೆ ಆಗುತ್ತದೆ. ಬಳಿಕ, ನಮ್ಮ ರಾಜ್ಯದ್ದೂ ಆಗುತ್ತದೆ. ಆದರೆ, ದಿನಾಂಕವನ್ನು ನಾನು ಹೇಳಲಾಗದು. ಸಂಸತ್ ಅಧಿವೇಶನಕ್ಕೂ ಮುನ್ನಾ ಎಲ್ಲಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದರು.
ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ:
ಇದೇ ವೇಳೆ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ವಿಜಯೇಂದ್ರ, ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಾಜ್ಯದ ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಹಣ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಇದು ಸೆಪ್ಟೆಂಬರ್ ಕ್ರಾಂತಿಯ ಮುನ್ಸೂಚನೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಪಕ್ಷದ ಶಾಸಕರು ಮುಖ್ಯಮಂತ್ರಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಇದಕ್ಕೆ ರಾಜು ಕಾಗೆ, ಬಿ.ಆರ್.ಪಾಟೀಲ್‌ರಂತಹ ಹಿರಿಯ ಶಾಸಕರ ಹೇಳಿಕೆಗಳೇ ಸಾಕ್ಷಿ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ರಸ್ತೆ ಕಾಮಗಾರಿ ಮಾಡಬೇಕೆಂದರೆ, ಗ್ಯಾರಂಟಿ ಬಿಡಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಅಂದರೆ, ರಾಜ್ಯದ ಆರ್ಥಿಕ ಸ್ಥಿತಿ ಹೇಗಿರಬಹುದು ಎಂಬುದು ಅರ್ಥವಾಗುತ್ತದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ಬಿಜೆಪಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರವನ್ನು ಯಾಕಾದರೂ ಅಧಿಕಾರಕ್ಕೆ ತಂದೆವು ಎಂದು ಶಾಪ ಹಾಕುತ್ತಿರುವಾಗ ಯಾರು ಮುಖ್ಯಮಂತ್ರಿಯಾದರೂ ಅಷ್ಟೆ ಎಂದರು.
ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳು ನಡೆಯುತ್ತಿದ್ದರೂ, ಅಲ್ಲಿನ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿಯನ್ನೇ ನೀಡುತ್ತಿಲ್ಲ. ಮೂರು ತಿಂಗಳಿಂದ ಹಾಸನ ಕಡೆ ಬಾರದೆ, ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿದ್ದಾರೆ. ಇದೆಲ್ಲ ಅನುಭವಿ ಮುಖ್ಯಮಂತ್ರಿಯ ವೈಫಲ್ಯವೇ ಆಗಿದೆ. ಈ ಕಾರಣದಿಂದಲೇ ಕಾಂಗ್ರೆಸ್‌ನ ನೂರು ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿದ್ದಾರೆ ಎಂಬ ಮಾಹಿತಿಗಳು ಬರುತ್ತಿವೆ ಎಂದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ವಿಗ್ರಹ ಧ್ವಂಸ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಅಲ್ಲಿ ವಿಗ್ರಹ ಧ್ವಂಸ ಮಾಡಿರುವ ದೇಶದ್ರೋಹಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಈ ರೀತಿಯ ದುಷ್ಟ ಶಕ್ತಿಗಳಿಗೆ ಸ್ವರ್ಗ ಸಿಕ್ಕಂತಾಗುತ್ತದೆ. ಸುಹಾಸ್ ಶೆಟ್ಟಿ ಕೊಲೆ, ಮೈಸೂರು ಠಾಣೆಗೆ ಬಂದು ಧಮಕಿ ಹಾಕಿದ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಂಡಿದ್ದಿದ್ದರೆ ಇಂತಹ ಸನ್ನಿವೇಶಗಳು ಮರುಕಳಿಸುತ್ತಿರಲಿಲ್ಲ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೆ ಎಂಬುದೇ ಮರೆತಂತಾಗಿದೆ. ಏನೇ ಮಾಡಿದರೂ ಸರ್ಕಾರ ಬೆಂಬಲ ನೀಡುತ್ತದೆ ಎಂಬ ಮನಸ್ಥಿತಿ ದುಷ್ಟ ಶಕ್ತಿಗಳಿಗೆ ಬಂದಿದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿಗೇ ಸರ್ಕಾರ ಕನ್ನ ಹಾಕುತ್ತಿದೆ. ಮೊದಲು 10 ಕೇಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದರು. ಬಳಿಕ, ಕೇಂದ್ರದ ಅಕ್ಕಿ ಸೇರಿಸಿ ಕೊಟ್ಟರು. ಈಗ ಅಕ್ಕಿ ಬದಲಿಗೆ ಇಂದಿರಾ ಕಿಟ್ ಕೊಡುತ್ತೇವೆ. ಇದರಿಂದ ₹700 ಕೋಟಿ ಉಳಿತಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ.-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.