ನಗರಸಭೆ ಆಯುಕ್ತರ ವಿರುದ್ಧ ತಿರುಗಿ ಬಿದ್ದ ಸದಸ್ಯರು

| Published : Nov 22 2024, 01:18 AM IST / Updated: Nov 22 2024, 01:19 AM IST

ಸಾರಾಂಶ

ನಗರಸಭೆಯಲ್ಲಿ ಅಧಿಕಾರಿ ಸಿಬ್ಬಂದಿಯ ಮಾಡುವೇ ಹೊಂದಾಣಿಕೆ ಇಲ್ಲ ಇದೇ ಕಾರಣಕ್ಕೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಹಾಗೂ ಇನ್ನು ಮುಂದೆ ಎಲ್ಲರ ವಿಶ್ವಾಸ ತೆಗೆದುಕೊಂಡು ಮುಂದಿನ ಚಟುವಟಿಕೆ ನಡೆಸುವಂತೆ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ನಗರಸಭೆ ಆಯುಕ್ತ ನರಸಿಂಹಮೂರ್ತಿ ಅವರಿಗೆ ಸೂಚನೆ ನೀಡಿದಕ್ಕೆ ಆಯುಕ್ತರು ಒಪ್ಪಿಕೊಂಡರು.

ಕನ್ನಡಪ್ರಭ ವಾರ್ತೆ ಹಾಸನ

ಎರಡನೇ ದಿನದ ನಗರಸಭೆಯ ಸಾಮಾನ್ಯಸಭೆಯೂ ಗದ್ದಲದಲ್ಲಿಯೇ ನಡೆಯಿತು.

ನಗರಸಭೆಯಲ್ಲಿ ಅಧಿಕಾರಿ ಸಿಬ್ಬಂದಿಯ ಮಾಡುವೇ ಹೊಂದಾಣಿಕೆ ಇಲ್ಲ ಇದೇ ಕಾರಣಕ್ಕೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಹಾಗೂ ಇನ್ನು ಮುಂದೆ ಎಲ್ಲರ ವಿಶ್ವಾಸ ತೆಗೆದುಕೊಂಡು ಮುಂದಿನ ಚಟುವಟಿಕೆ ನಡೆಸುವಂತೆ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ನಗರಸಭೆ ಆಯುಕ್ತ ನರಸಿಂಹಮೂರ್ತಿ ಅವರಿಗೆ ಸೂಚನೆ ನೀಡಿದಕ್ಕೆ ಆಯುಕ್ತರು ಒಪ್ಪಿಕೊಂಡರು.

ನಗರದ ಸಂತೇಪೇಟೆ ವೃತ್ತದ ಬಳಿ ಇರುವ ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಅಧ್ಯಕ್ಷ ಎಂ. ಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ದಿನದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಮೊದಲ ಸಭೆಯಲ್ಲಿ ನಡೆದ ತೆರವು ಕಾರ್ಯಾಚರಣೆ ಕುರಿತೇ ಹಲವು ಸಮಯ ಚರ್ಚೆಗೆ ಗ್ರಾಸವಾಯಿತು. ಸಾರ್ವಜನಿಕರು ಅಹವಾಲು ನೀಡಲು ಬಂದಾಗ ಅವರ ಜೊತೆಗೆ ದುರ್ವರ್ತನೆ ತೋರುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು, ಸುಖಾಸುಮ್ಮನೆ ಸಾರ್ವಜನಿಕರನ್ನು ಅಲೆದಾಡಿಸುತ್ತಿರುವುದು ತನ್ನ ಗಮನಕ್ಕೆ ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ಕಡತಗಳ ವಿಲೇವಾರಿ ಹಾಗೂ ಸಾರ್ವಜನಿಕರು ನೀಡಿದ ಅಧಿಗಳಿಗೆ ಪ್ರತ್ಯುತ್ತರ ಅಥವಾ ಪರಿಹಾರಕ್ಕೆ ಶೀಘ್ರ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ನಗರಸಭೆ ಸದಸ್ಯರಾದ ಗಿರೀಶ್ ಚನ್ನವೀರಪ್ಪ, ಮೋಹನ್, ಸಿ.ಆರ್‌. ಶಂಕರ್ ಮತ್ತು ಯೋಗೇಂದ್ರ ಬಾಬು ಅವರು ಒತ್ತಾಯಿಸಿದರು. ನಗರಸಭೆ ಆಯುಕ್ತರು ಯಾವ ಕಾರಣಕ್ಕಾಗಿ ಅಮಾಯಕ ವರ್ತಕರ ಮೇಲೆ ಈ ರೀತಿ ಮಾಡಿದ್ದಾರೆ ಮತ್ತು ಇದಕ್ಕೆ ಯಾರು ಕುಮ್ಮಕ್ಕು ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಸದಸ್ಯ ಗಿರೀಶ್ ಚನ್ನವೀರಪ್ಪ ಮಾತನಾಡಿ, ಶಾಸಕರು ಮತ್ತು ಅಧ್ಯಕ್ಷರ ಗಮನಕ್ಕೆ ತರದೆ ಅವರಿಗೆ ಗೌರವವನ್ನು ಕೂಡ ನೀಡಿಲ್ಲ. ಸೌಜನ್ಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಪರಿಶೀಲಿಸುವ ಕಾರ್ಯವನ್ನು ಕೂಡ ಮಾಡಿಲ್ಲ. ಜಿಲ್ಲಾಧಿಕಾರಿಗಳು ಮೌಖಿಕವಾಗಿ ಹೇಳಿದ್ದರು ಎಂಬ ಹೇಳಿಕೆ ನೀಡುತ್ತಾರೆ, ಆದರೆ ಜಿಲ್ಲಾಧಿಕಾರಿಗಳು ಈ ಹೇಳಿಕೆಯನ್ನು ನೀಡಿಲ್ಲ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ರೇವಣ್ಣ ಅವರು ಕೂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿದ್ದಾರೆ ಎಂದು ಆಯುಕ್ತ ನರಸಿಂಹಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾರನೇ ದಿನ ರಜೆ ಇದ್ದರೂ ಕೂಡ ನಗರಸಭೆ ಅಧಿಕಾರಿಗಳು ಸಂಸದರು ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಅಲ್ಲಿಗೆ ಎಲ್ಲರೂ ಭೇಟಿ ನೀಡುತ್ತಾರೆ ಇಲ್ಲಿ ಆಯುಕ್ತರು ರಾಜಕಾರಣ ಮಾಡಲು ಬಂದಿದ್ದಾರೆ ಮತ್ತು ಬೇರೆ ಯಾವುದೇ ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಇದರ ಹಿಂದೆ ಯಾವುದೋ ಹುನ್ನಾರವಿದೆ ಎಂದು ಪ್ರಶ್ನಿಸಿದರು. ಇನ್ನು ನಗರಸಭೆ ಅಧ್ಯಕ್ಷ ಚಂದ್ರೇಗೌಡ ಅವರು ಉತ್ತರ ನೀಡುವಂತೆ ಆಯುಕ್ತರಿಗೆ ಹೇಳಿದರು.

ಹಾಸನಾಂಬ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳು ನಗರಸಭೆ ಅಧ್ಯಕ್ಷರು ಮತ್ತು ಶಾಸಕರ ಗಮನಕ್ಕೆ ತರದೆ ಅಂಗಡಿಗಳ ತೆರವು ಮಾಡಿರುವ ಕ್ರಮ ಖಂಡನೀಯವಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಆಗಬೇಕು ಎಂದು ನಗರಸಭಾ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಶಾಸಕ ಎಚ್.ಪಿ.ಸ್ವರೂಪ್ ಧ್ವನಿಗೂಡಿಸಿ ಅಮಾಯಕರಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಯಾರ ಗಮನಕ್ಕೂ ಬಾರದೆ ಏಕಾಏಕಿ ಪುಟ್ಪಾತ್‌ ತೆರವು ಕಾರ್ಯಾಚರಣೆ ಮಾಡಿದ್ದಾರೆ. ನಗರಸಭೆ ಆಯುಕ್ತರ ವಿರುದ್ಧ ಮುಗಿಬಿದ್ದ ಸದಸ್ಯರು ಈಗ ಅಲ್ಲಿಯ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ ನನಗೆ ಗೌರವ ಕೊಡಲಿಲ್ಲ. ಇದು ಉದ್ದೇಶ ಪೂರಕವಾಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಆಯುಕ್ತ ನರಸಿಂಹಮೂರ್ತಿ ಮಾತನಾಡಿ, ರಾಜಕೀಯ ದುರುದ್ದೇಶದಿಂದ ನಾವು ಕಾರ್ಯಾಚರಣೆ ಮಾಡಿಲ್ಲ ಮತ್ತು ಕೆಲ ಅಧಿಕಾರಿಗಳು ವೈಯಕ್ತಿಕ ಉದ್ದೇಶವನಿಟ್ಟುಕೊಂಡು ಈ ರೀತಿ ಮಾಡಿದ್ದಾರೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು

ಸದಸ್ಯ ಸಿ.ಆರ್.ಶಂಕರ್ ಮಾತನಾಡಿ, ಹಂದಿಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನ ಹಿಡಿಯುವಂತೆ ಹಲವು ಬಾರಿ ಮನವಿ ಮಾಡಿದರೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕೆಲವರು ಧ್ವನಿಗೂಡಿಸಿ ಹಂದಿ ಕುದುರೆ ಮತ್ತು ನಾಯಿ ಹಾಗೂ ಜಾನುವಾರುಗಳ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಪರಿಸರ ಇಲಾಖೆಯ ಎಂಜಿನಿಯರ್‌ ವೆಂಕಟೇಶ್, ಹಂದಿ ಮಾಂಸದಂಗಡಿ ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಹಂದಿಗಳನ್ನು ಬೇಕಾಬಿಟ್ಟಿ ಬಿಟ್ಟು ಸಾಕಣೆ ಮಾಡುತ್ತಿರುವವರಿಗೆ ನೋಟಿಸ್ ನೀಡಲಾಗಿದೆ. ಇನ್ನುಳಿದಂತೆ ಈಗಾಗಲೇ 1800 ನಾಯಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇನ್ನೂ 500 ನಾಯಿಗಳು ಬಾಕಿ ಉಳಿದುಕೊಂಡಿವೆ. ಅವುಗಳನ್ನು ಕೂಡ ಶೀಘ್ರದಲ್ಲೇ ಮಾಡಲಾಗುವುದೆಂದು ಹೇಳಿದರು.ನಂತರ ಮತ್ತೊಬ ಸದಸ್ಯ ಯೋಗೇಂದ್ರ ಬಾಬು ಮಾತನಾಡಿ, ನಾನು ಸಭೆಗೆ ನನ್ನ ವಿಷಯವನ್ನ ಪುಸ್ತಕದಲ್ಲಿ ದಾಖಲಿಸುವಂತೆ ನೀಡಿದ್ದೆ ಆದರೆ ನನ್ನ ವಿಷಯಗಳು ಪುಸ್ತಕದಲ್ಲಿಲ್ಲ. ಇದು ದುರುದ್ದೇಶ ಪೂರಕವಾಗಿ ನಡೆಯುತ್ತಿದೆ ಎಂದು ಹೇಳಿದರು.

ಯಾವುದೇ ವಾರ್ಡ್‌ಗೆ ಅನುದಾನ ಹಂಚಿಕೆಯಾದಾಗ ಅಥವಾ ವಾರ್ಡ್‌ನಲ್ಲಿ ಕೆಲಸ ನಡೆಯುವಾಗ ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು, ಜೊತೆಗೆ ಸಭೆ ನಡಾವಳಿ ಬರೆಯುವಾಗ ಸಭೆಯ ಚರ್ಚೆ ವಿಷಯವನ್ನು ನಮೂದು ಮಾಡಿ ಅದನ್ನು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು, ಅಲ್ಲದೆ ನಗರದ ವಿವಿಧೆಡೆ ರಸ್ತೆ, ಯುಜಿಡಿ, ಚರಂಡಿ, ವಿದ್ಯುತ್ ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ತನ್ನ ಹಾಗೂ ಆಯುಕ್ತರ ಗಮನಕ್ಕೆ ತಂದು ಸಭೆ ನಡೆಸಿ ಶೀಘ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಯುಕ್ತರಿಗೆ ಸಲಹೆ ನೀಡಿದರು.

ಇದೇ ವೇಳೆ ನಗರಸಭೆ ಉಪಾಧ್ಯಕ್ಷ ಲತಾದೇವಿ ಹಾಗೂ ಸಹಾಯಕ ಕಾರ್ಯಾಪಾಲಕ ಅಭಿಯಾಂತರರು ಎಚ್.ಆರ್‌. ಚನ್ನೇಗೌಡ ಉಪಸ್ಥಿತರಿದ್ದರು.